ಯುವ ಮೋರ್ಚಾ ಕಾರ್ಯಕರ್ತನ ಮೇಲೆ ಹಲ್ಲೆ; ಮೂವರ ಬಂಧನ!
ಶಿವಮೊಗ್ಗ: ಭದ್ರಾವತಿಯ (Bhadravathi) ಬಿಜೆಪಿ (BJP) ಯುವ ಮೋರ್ಚಾ ಕಾರ್ಯಕರ್ತ ಗೋಕುಲ್ ಕೃಷ್ಣನ್ ಅವರ ಮೇಲೆ ಹಲ್ಲೆ ಹಾಗೂ ಕಾರು (Car) ಜಖಂಗೊಳಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಗಣೇಶ್ (22), ಹರ್ಷ (23) ಮತ್ತು ನಂಜೇಗೌಡ (22) ಎಂದು ಗುರುತಿಸಲಾಗಿದೆ. ಆರೋಪಿಗಳು ವಿಶ್ವೇಶ್ವರ ನಗರದಲ್ಲಿ ಗೋಕುಲ್ ಕೃಷ್ಣನ್ ಅವರ ಕಾರನ್ನು ಜಖಂಗೊಳಿಸಿದ್ದರು. ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರು ಜಖಂಗೊಳಿಸಿದ ಪ್ರಕರಣ ಮಾಸುವ ಮುನ್ನವೇ ಕಿಡಿಗೇಡಿಗಳು ಹೋಟೆಲ್ಗೆ ತೆರಳಿದ್ದ ಅವರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಹಲ್ಲೆಗೊಳಗಾದ ಗೋಕುಲ್ ಕೃಷ್ಣನ್ ಅವರನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಶಾಸಕ ಚನ್ನಬಸಪ್ಪ ಸೇರಿದಂತೆ ಬಿಜೆಪಿ ಮುಖಂಡರು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಗೋಕುಲ್ ಕೃಷ್ಣನ್ ಭದ್ರಾವತಿಯಲ್ಲಿ ನಡೆಯುತ್ತಿರುವ ಇಸ್ಪೀಟ್, ಓಸಿ ದಂಧೆ ಸೇರಿದಂತೆ ಅಕ್ರಮ ದಂಧೆ ಕುರಿತು ಹಾಗೂ ಈ ದಂಧೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ ಕೈವಾಡ ಇದೆ ಎಂಬುದಾಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಇದರಿಂದ ಕೆಲವು ಕಿಡಿಗೇಡಿಗಳು ಮನೆಯ ಮುಂದೆ ನಿಲ್ಲಿಸಿದ್ದ ಅವರ ಕಾರನ್ನು ಜಖಂಗೊಳಿಸಿದ್ದರು.
ಈ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಅಕ್ರಮ ಪ್ರಶ್ನಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ: ವಿಜಯೇಂದ್ರ ಕಿಡಿ
ಬೆಂಗಳೂರು: ಅಧಿಕಾರಸ್ಥ ಕಾಂಗ್ರೆಸ್ಸಿಗರ (Congress) ಅಕ್ರಮಗಳ ವಿರುದ್ಧ ದನಿ ಎತ್ತುವ ಬಿಜೆಪಿ (BJP) ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಲ್ಲೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ.
ಭದ್ರಾವತಿಯಲ್ಲಿ ಬಿಜೆಪಿ ಮುಖಂಡನ ಮೇಲಿನ ಹಲ್ಲೆಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವಿಜಯೇಂದ್ರ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ನಲ್ಲಿ ಏನಿದೆ?
ಕಲಬುರ್ಗಿ, ಬೆಳಗಾವಿಯ ಪ್ರಕರಣಗಳ ಬೆನ್ನಲೇ ಭದ್ರಾವತಿಯ ನಮ್ಮ ಬಿಜೆಪಿ ಮುಖಂಡ ಗೋಕುಲ್ ಕೃಷ್ಣನ್ (Gokul Krishnan) ಅವರ ಮೇಲೆ ನಡೆದಿರುವ ಗೂಂಡಾಗಳ ಹಲ್ಲೆ ಆತಂಕಕಾರಿ ಘಟನೆಯಾಗಿದೆ.
ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಸ್ಥಳೀಯ ಶಾಸಕರ ಕೈವಾಡ ಇರುವ ಬಗ್ಗೆ ಜಾಲತಾಣದಲ್ಲಿ ಗೋಕುಲ್ ಕೃಷ್ಣನ್ ಪ್ರಶ್ನಿಸಿದ್ದೇ, ಈ ದಾಳಿ ನಡೆಯಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿರುವಂತಿದೆ. ತಕ್ಷಣವೇ ಭದ್ರಾವತಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಕಾರ್ಯಕರ್ತನಿಗೆ ರಕ್ಷಣೆ ನೀಡಿ, ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ.