ಹೆಲ್ಮೆಟ್ ವಿಚಾರಕ್ಕೆ ವಕೀಲನ ಮೇಲೆ ಹಲ್ಲೆ ; ಪಿಎಸ್ಐ ಸೇರಿ 6 ಮಂದಿ ಸಿಬ್ಬಂದಿ ಅಮಾನತು - ದೂರು ದಾಖಲಿಸಿಕೊಂಡ ಕೋರ್ಟ್!
ಚಿಕ್ಕಮಗಳೂರು, (ಡಿಸೆಂಬರ್ 01): ಹೆಲ್ಮೆಟ್ ಹಾಕದ ಕಾರಣಕ್ಕೆ ಚಿಕ್ಕಮಗಳೂರಿನಲ್ಲಿ (Chikkamagaluru) ವಕೀಲ ಪ್ರೀತಮ್ ಎನ್ನುವರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿದೆ. ಹೆಲ್ಮೆಟ್ ಹಾಕದ ಕಾರಣಕ್ಕೆ ಅಮಾನುಷ ಹಲ್ಲೆ ಆಘಾತಕಾರಿ ಎಂದು ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ಕೃಷ್ಣ ಎಸ್. ದೀಕ್ಷಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಗರಿಕ ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು. ವಕೀಲರಿಗೇ ಹೀಗಾದರೆ ಜನಸಾಮಾನ್ಯರ ಕಥೆ ಏನು? ಹೆಲ್ಮೆಟ್ ಹಾಕದ ಕಾರಣಕ್ಕೆ ಹೀಗೆ ಹಲ್ಲೆ ನಡೆಸಬಹುದೇ? ಎಂದು ಪ್ರಶ್ನಿಸಿದ ಹೈಕೋರ್ಟ್, ಈ ಪ್ರಕರಣದ ಬಗ್ಗೆ ಕೈಗೊಂಡ ಕ್ರಮದ ಮಾಹಿತಿ ನೀಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಹಲ್ಲೆ ಕಾರಣಕ್ಕೆ ಕೋರ್ಟ್ ಬಹಿಷ್ಕರಿಸದಂತೆ ವಕೀಲರಿಗೂ ಹೈಕೋರ್ಟ್ ಮನವಿ ಮಾಡಿದ್ದು, ವಕೀಲರು ಟ್ರೇಡ್ ಯೂನಿಯನ್ ರೀತಿ ಕೋರ್ಟ್ ಬಹಿಷ್ಕರಿಸಬಾರದು. ಕಾನೂನು ರೀತ್ಯಾ ಕ್ರಮಕ್ಕೆ ಮುಂದಾಗುವಂತೆ ಹೈಕೋರ್ಟ್ ಸೂಚಿಸಿದೆ. ಇನ್ನು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತಪ್ಪಿತಸ್ಥ ಪೊಲೀಸರನ್ನು ಅಮಾನತುಗೊಳಿಸಿರುವುದಾಗಿ ಹೈಕೋರ್ಟ್ ಗೆ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನಲೆ
ಹೆಲ್ಮೆಟ್ ವಿಚಾರವಾಗಿ ವಕೀಲ ಪ್ರೀತಮ್ ಎನ್ನುವರನ್ನು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಲಾಗಿತ್ತು. ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಠಾಣೆ ಮುಂದೆ ವಕೀಲರು ಪ್ರತಿಭಟನೆ ಮಾಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಎಸ್ಪಿ ವಿಕ್ರಂ ಅಮ್ಟೆ ಭೇಟಿ ನೀಡಿ ಈ ಬಗ್ಗೆ ವಿಚಾರಣೆ ನಡೆಸಿದ್ದರು. ಬಳಿಕ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಪೂಜಾರಿ ಸೇರಿದಂತೆ ಆರು ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದರು.
ಆದ್ರೆ, ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕೆಂದು ವಕೀಲರು ಪಟ್ಟು ಹಿಡಿದಿದ್ದರು. ಪ್ರೀತಮ್ ಬೆಂಬಲಕ್ಕೆ ನಿಂತ ರಾಜ್ಯ ಬಾರ್ ಕೌನ್ಸಿಲ್, ರಾಜ್ಯಾದ್ಯಂತ ಕೋರ್ಟ್ ಕಲಾಪಗಳನ್ನ ಬಹಿಷ್ಕರಿಸಲು ನಿರ್ಧಾರಿಸಿತ್ತು. ಅಲ್ಲದೇ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾಟ ಮಂತ್ರಗಳ ಕಾಟ! ಭಯಭೀತರಾದ ವಾಹನ ಸವಾರರು
ರಾಮನಗರ, ಡಿ.01: ಬೆಂಗಳೂರು -ಮೈಸೂರು ಹೆದ್ದಾರಿ (Bengaluru Mysuru highway) ಯಲ್ಲಿ ಪ್ರೇತಾತ್ಮಗಳ ಭಯಕ್ಕೆ ವಾಹನ ಸವಾರರು ಕಂಗಾಲಾಗಿದ್ದಾರೆ. ರಾಮನಗರ(Ramanagara) ಸಮೀಪ ಹೆದ್ದಾರಿ ಬಳಿ ಮಾಟ ಮಂತ್ರ(Mata Mantra) ಗಳ ಕಾಟ ಹೆಚ್ಚಾಗಿದ್ದು, ಮಣ್ಣಿನಿಂದ ಮಾಡಿರುವ ಮೂರ್ತಿಗಳು ಗ್ರಾಮಸ್ಥರನ್ನು ಭಯವಾಗುವಂತೆ ಮಾಡಿದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ಕೂಡಲೇ ಬ್ರೇಕ್ ಹಾಕಬೇಕಾಗಿದೆ.
ಈ ಆತಂಕ ಮೂಡಿಸಿರುವ ಮೂರ್ತಿಗಳಲ್ಲಿ ಒಂದು ಗಂಡು ಹಾಗೂ ಇನ್ನೊಂದು ಹೆಣ್ಣು ಮೂರ್ತಿ ಇದೆ. ಅದಕ್ಕೆ ಕುಂಕುಮ, ಅರಿಶಿಣ, ಬಳೆ ಹಾಗೂ ಕೊರಳಲಿ ವಿಚಿತ್ರವಾದ ದಾರವನ್ನು ಅಳವಡಿಕೆ ಮಾಡಲಾಗಿದೆ. ಈ ಹಿನ್ನಲೆ ಮೂರ್ತಿಗಳು ವಿಚಿತ್ರ ಹಾಗೂ ಭಯ ಮೂಡುವಂತಿದೆ. ಅದರ ಕಣ್ಣುಗಳು ನೋಡಿ ಸವಾರರು ಭಯಭೀತರಾಗಿದ್ದು, ಕೂಡಲೇ ಮೂರ್ತಿಗಳನ್ನು ತೆರವು ಮಾಡಿ, ಶುದ್ಧಿಕರಣಗೊಳಿಸಿ ಲೈಟ್ ಹಾಕುವಂತೆ ಸ್ಥಳೀಯರ ಮನವಿ ಮಾಡಿದ್ದಾರೆ.
ಮಾಟ-ಮಂತ್ರ ಎಂದರೇನು?
ಈ ಮಾಟ – ಮಂತ್ರ (ಮಂತ್ರವಿದ್ಯೆ) ಎನ್ನುವುದು ಒಂದು ವಿಶಿಷ್ಟ ಬಗೆಯ ಮಾಂತ್ರಿಕ ಶಕ್ತಿಯನ್ನು ಉಪಯೋಗಿಸಿಕೊಂಡು ಜನರನ್ನು ಹಿಂಸಿಸುವ ಅಥವಾ ಅವರ ಆಸ್ತಿಪಾಸ್ತಿಯನ್ನು ಹಾನಿಗೊಳಿಸುವ, ಪ್ರಪಂಚದಾದ್ಯಂತ ಕಂಡುಬರುವ, ಎಲ್ಲ ಆದಿವಾಸಿಗಳಲ್ಲಿಯೂ ಇರುವ ಒಂದು ಸಂಪ್ರದಾಯ ಮತ್ತು ನಂಬಿಕೆ(ವಾಮಾಚಾರ). ಇದು ಧರ್ಮದಷ್ಟೇ ಪ್ರಾಚೀನವಾದುದು. ಒಂದು ಕಾಲಕ್ಕೆ ಧರ್ಮಕ್ಕೂ, ಮಾಟ-ಮಂತ್ರಗಳಿಗೂ ಸಂಬಂಧವೇ ಇಲ್ಲ ಎಂದು ಭಾವಿಸಲಾಗಿತ್ತು. ಅನಂತರ ಅವೆರಡೂ ಅವಿಭಾಜ್ಯ ಅಂಗಗಳು ಎನ್ನುವಷ್ಟರ ಮಟ್ಟಿಗೆ ಅವುಗಳ ಸಂಬಂಧವನ್ನು ಕಂಡುಕೊಳ್ಳಲಾಯಿತು. ಫ್ರೇಜರನ ಪ್ರಕಾರ ದೇವತಾರಾಧೆನೆಯ ಮುಂದಿನ ಘಟ್ಟವೇ ಮಾಟ-ಮಂತ್ರ ಮುಂತಾದವು. ಮಂತ್ರ ವಿದ್ಯೆಯನ್ನು ಆತ ಪ್ರಾಚೀನ ವಿಜ್ಞಾನ ಎಂದೇ ಕರೆದಿದ್ದಾನೆ. ಧರ್ಮಕ್ಕೂ ಮಂತ್ರವಿದ್ಯೆಗೂ ಸಂಬಂಧವಿರುವಂತೆಯೇ ಮಂತ್ರವಿದ್ಯೆಗೂ ವಿಜ್ಞಾನಕ್ಕೂ ಹಲವಂಶಗಳಲ್ಲಿ ಸಂಬಂಧವಿದೆ ಎಂಬುದನ್ನು ಗುರುತಿಸಲಾಗಿದೆ.