Arecanut price: ಚೌತಿ ಬಳಿಕ ಈ ಬಾರಿ ಅಡಿಕೆ ದರ ಭಾರಿ ಕುಸಿತ ; ಈ ತಿಂಗಳಿನಿಂದ ಕೊಂಚ ಚೇತರಿಕೆ..! ಹೇಗಿದೆ ಇಂದಿನ ಅಡಿಕೆ ದರ
ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅಡಿಕೆ ಆಧಾರಿತ ಕೃಷಿ ಹೆಚ್ಚಾಗಿದ್ದು ತಮ್ಮ ಮೂಲ ಆದಾಯವನ್ನು ಅಡಿಕೆ ಕೃಷಿಯಿಂದಲೇ ಗಳಿಸುತ್ತಾರೆ ಕಳೆದ ಬಾರಿ ಈ ಸಮಯಕ್ಕೆ ಅಡಿಕೆ ದರ ಉತ್ತಮದಲ್ಲಿತ್ತು. ಈ ಬಾರಿ ಅಗಸ್ಟ್ ತಿಂಗಳಲ್ಲಿ ಹಾಗೂ ಗಣೇಶ ಚತುರ್ಥಿ ಸಮಯದಲ್ಲಿ 500ರ ಗಡಿ ತಲುಪ ಬೇಕಿದ್ದ ಅಡಿಕೆ ದರ ಭಾರಿ ಇಳಿಕೆಗೊಂಡಿದೆ. ಹಳೆ ಅಡಿಕೆಗೆ 480 ರವರೆಗೆ ತಲುಪಿ ಹಾಗು ಹೊಸ ಅಡಿಕೆಗೆ 455 ರ ವರೆಗೆ ತಲುಪಿ ಬಾರಿ ಇಳಿಕೆಗೊಂಡಿತ್ತು. ಈ ವಾರದಲ್ಲಿ ದಕ್ಷಿಣ ಕನ್ನಡದಲ್ಲಿ ಅಡಿಕೆ ಮಾರುಕಟ್ಟೆ ದರ ಹಳೆ ಅಡಿಕೆಗೆ 430 ಹಾಗೂ ಹೊಸ ಅಡಿಕೆಗೆ 370ರ ಆಸುಪಾಸಿದೆ.
ಕರಾವಳಿ, ಮಲೆನಾಡು, ಅರೆಮಲೆನಾಡು ಪ್ರಾಂತ್ಯಕ್ಕೆ ಸೀಮಿತಗೊಂಡಿದ್ದ ಅಡಕೆ ಕೃಷಿ ಕಳೆದೆರಡು ವರ್ಷಗಳಿಂದ ವ್ಯಾಪಕ ಪ್ರಮಾಣದಲ್ಲಿ ವಿಸ್ತರಣೆಗೊಳ್ಳುತ್ತಿದ್ದು, ಅಡಕೆ ಮಾರುಕಟ್ಟೆಯ ಭವಿಷ್ಯ ಮಂಕಾಗಿದೆ.ಅಡಕೆ ಕೃಷಿಗೆ ತಗುಲಿರುವ ಹಳದಿ ರೋಗ ಇಡೀ ಬೆಳೆಯ ಬುಡವನ್ನೇ ಅಲ್ಲಾಡಿಸಿದೆ. ರೋಗದಿಂದ ಉಂಟಾದ ತಲ್ಲಣ, ಬೆಳೆ ವಿಸ್ತರಣೆಯಿಂದ ಉಂಟಾದ ಸಂಚಲನ ಮತ್ತು ಕಳ್ಳ ನುಸುಳುವಿಕೆ ಅವಾಂತರಗಳು ನಿರಂತರವಾಗಿ ಬೆಳೆಯ ಮೇಲೆ ತೂಗುಕತ್ತಿಯಾಗಿ ನೇತಾಡುತ್ತಿದ್ದು, ಅಡಕೆ ಕ್ಷೇತ್ರದ ಹಿತರಕ್ಷಣೆಗಾಗಿ ಸರಕಾರ ಸಮಗ್ರ ನೀತಿ ರೂಪಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಮ್ಯಾನ್ಮಾರ್‌ನಿಂದ ಕಡಿಮೆ ಗುಣಮಟ್ಟದ ಅಡಕೆ ಕಳ್ಳದಾರಿಯ ಮೂಲಕ ಒಳನುಸುಳುವ ಪರಿಪಾಠ ಪದೇ ಪದೇ ಸದ್ದು ಮಾಡುತ್ತಿದ್ದು, ದೇಶೀಯ ಮಾರುಕಟ್ಟೆಯ ಗುಣಮಟ್ಟದ ಅಡಕೆಯ ಧಾರಣೆಗೆ ಹೊಡೆತ ನೀಡುತ್ತಿದೆ. ಅನ್ಯ ವಸ್ತುಗಳ ಬಿಲ್ ಹೆಸರಿನಲ್ಲಿ ಗುಜರಾತ್ ಬಂದರಿಗೆ ಅಕ್ರಮ ಅಡಕೆ ಬರುತ್ತಿದೆ ಎಂಬ ದೂರು ವ್ಯಾಪಕವಾಗಿದೆ. ಇದು ಕೂಡ ದೇಶೀಯ ಮಾರುಕಟ್ಟೆಗೆ ಮಾರಕವಾಗುತ್ತಿದೆ.
ಕಾನೂನು ಬಾಹಿರ ಅಡಕೆ ಆಗಮನದ ವಿರುದ್ಧ ಈಗಾಗಲೇ ಕ್ಯಾಂಪ್ಕೋ ವತಿಯಿಂದ ಕೇಂದ್ರ ಸರಕಾರಕ್ಕೆ ದೂರು ದಾಖಲಿಸಲಾಗಿದೆ. ವಾರದ ಹಿಂದೆ ಅಸ್ಸಾಂ ಗಡಿಯಲ್ಲಿ 18 ಟ್ರಕ್ ಅಕ್ರಮ ಅಡಕೆಯನ್ನು ಅಧಿ ಕಾರಿಗಳು ಪತ್ತೆ ಹಚ್ಚಿದ್ದರು. ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಬಹುತೇಕ ಉತ್ತರ ಭಾರತದ ರಾಜ್ಯಗಳಲ್ಲಿ ಕರ್ನಾಟಕದ ಅಡಕೆಗೆ ಬಹುಬೇಡಿಕೆಯಿದ್ದು, ಅಲ್ಲಿನ ಪಾನ್ ಸಂಸ್ಕೃತಿ ಅಡಕೆಗೆ ರಾಜಮರ್ಯಾದೆ ನೀಡುತ್ತಿದೆ.
4 ವರ್ಷಗಳಿಂದ ದಕ್ಷಿಣ ಕನ್ನಡ, ಶಿವಮೊಗ್ಗ ಚಿಕ್ಕಮಗಳೂರು ಸೇರಿದಂತೆ ಅಡಕೆ ಪ್ರಧಾನವಾಗಿ ಬೆಳೆಯುವ ಕರಾವಳಿ – ಮಲೆನಾಡು ಪ್ರಾಂತ್ಯದಲ್ಲಿ ಹಳದಿ ರೋಗ ಅಡಕೆಯನ್ನು ನಾಶ ಮಾಡುತ್ತಿದೆ. ಸಮೀಕ್ಷೆ ಪ್ರಕಾರ ಸುಮಾರು 15 ಸಾವಿರ ಎಕರೆ ಅಡಕೆ ತೋಟ ಹಳದಿ ರೋಗದಿಂದ ನಾಶವಾಗಿದೆ. ರೋಗ ನಿಯಂತ್ರಣದಲ್ಲಿ ಯಾವ ಪ್ರಗತಿಯೂ ದಾಖಲಾಗಿಲ್ಲ. ಸಂಶೋಧನೆಗೆಂದು ಹಿಂದಿನ ಬಿಎಸ್ವೈ ಸರಕಾರ 25 ಕೋಟಿ ರೂ. ಬಿಡುಗಡೆ ಮಾಡಿದ್ದರೂ, ಅದರ ಫಲಶ್ರುತಿ ಈಗಲೂ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದಿದೆ.
ದ.ಕ.ದ ಸುಳ್ಯ ತಾಲೂಕು ಹಳದಿ ರೋಗಕ್ಕೆ ಅತಿ ಹೆಚ್ಚು ಬಳಲಿದ್ದು, ರೋಗ ಪೀಡಿತ ತೋಟದಲ್ಲಿ ಮತ್ತೆ ಅಡಕೆ ಬೆಳೆಯಲು ಸಾಧ್ಯವಿಲ್ಲದ ಸ್ಥಿತಿ ಇದೆ. ತೋಟವನ್ನೇ ಕಡಿದು ಬಿಸಾಡಿದ ಅನೇಕ ಪ್ರಕರಣಗಳು ನಡೆದಿವೆ.
ಈ ಬಾರಿ ಕರಾವಳಿಯಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದು, ತಾಪಮಾನ ಅಧಿಕವಿರುವ ಕಾರಣ ಎಲೆ ಚುಕ್ಕಿ ರೋಗದ ಅಬ್ಬರ ತಗ್ಗಿದೆ. ಅಷ್ಟರಮಟ್ಟಿಗೆ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದರೂ, ತಾಪಮಾನ ಹೆಚ್ಚಳ ಮತ್ತು ಏರಿಳಿತದಿಂದಾಗಿ ಅಡಕೆ ಇಳುವರಿ ಇಳಿಮುಖವಾಗುವ ಭೀತಿಯನ್ನು ಬೆಳೆಗಾರರು ವ್ಯಕ್ತಪಡಿಸುತ್ತಿದ್ದಾರೆ. ಧಾರಣೆ ಅಸ್ಥಿರತೆ ಮತ್ತು ಇಳುವರಿ ಕುಸಿತ ಎರಡೂ ಏಕಕಾಲದಲ್ಲಾದರೆ ಪರಿಣಾಮ ಭೀಕರವಾಗಲಿದೆ.
ದ.ಕ.ದ ಸುಳ್ಯ ತಾಲೂಕು ಹಳದಿ ರೋಗಕ್ಕೆ ಅತಿ ಹೆಚ್ಚು ಬಳಲಿದ್ದು, ರೋಗ ಪೀಡಿತ ತೋಟದಲ್ಲಿ ಮತ್ತೆ ಅಡಕೆ ಬೆಳೆಯಲು ಸಾಧ್ಯವಿಲ್ಲದ ಸ್ಥಿತಿ ಇದೆ. ತೋಟವನ್ನೇ ಕಡಿದು ಬಿಸಾಡಿದ ಅನೇಕ ಪ್ರಕರಣಗಳು ನಡೆದಿವೆ.