ಬಿಎಂಟಿಸಿಗೆ ಮತ್ತೊಂದು ಬಲಿ – ಬಸ್‌ಗೆ ಸಿಲುಕಿ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು!
ಬೆಂಗಳೂರು: ಕಿಲ್ಲರ್ ಬಿಎಂಟಿಸಿ (BMTC) ಬಸ್‌ಗೆ ಎಂಜಿನಿಯರಿಂಗ್ ವಿದ್ಯಾರ್ಥಿ (Engineering Student) ಬಲಿಯಾದ ಘಟನೆ ಯಶವಂತಪುರದ (Yeswanthpur) ಗೋವರ್ಧನ ಬಳಿ ನಡೆದಿದೆ.
ಗಂಗಾಧರ್ (21) ಮೃತ ವಿದ್ಯಾರ್ಥಿ. ಗಾರೆಪ್ಪನ ಪಾಳ್ಯ ರಸ್ತೆ ಮಾರ್ಗವಾಗಿ ಹೂವಿನ ಮಾರ್ಕೆಟ್ ಸಮೀಪ ಘಟನೆ ನಡೆದಿದೆ. ಹೆಚ್‌ಎಎಲ್‌ಗೆ (HAL) ಇಂಟರ್ನಿಶಿಪ್ ಸರ್ಟಿಫಿಕೇಟ್ ತರಲು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಗಂಗಾಧರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಂಗಾಧರ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ, ಬಿಎಂಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ (Accident) ಸಂಭವಿಸಿದೆ.
ಈ ವೇಳೆ ಬಸ್‌ನ ಚಕ್ರ ಗಂಗಾಧರ್ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದ ಬಳಿಕ ಬಸ್ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದು, ಬಸ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೃತ ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅಪಘಾತದ ಸ್ಥಳಕ್ಕೆ ಯಶವಂತಪುರ ಸಂಚಾರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ಎಸಗಿದ್ದ ಬಿಎಂಟಿಸಿ ಬಸ್ ಚಾಲಕನಿಗೆ ಠಾಣೆಗೆ ಬರುವಂತೆ ಸೂಚನೆ ನೀಡಿದ್ದಾರೆ.
ಪ್ರಿಯಕರನಿಂದ ವಂಚನೆ, ಕೊಲೆ ಬೆದರಿಕೆ ಆರೋಪ- ವಿಷ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಹಾಸನ: ಪ್ರೀತಿಸುವುದಾಗಿ (Love) ನಂಬಿಸಿ ಮೋಸ ಮಾಡಿದ್ದಲ್ಲದೇ, ಆತನೊಂದಿಗೆ ಇದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಹೆದರಿಸಿದ್ದರಿಂದ ಮನನೊಂದ ವಿದ್ಯಾರ್ಥಿನಿ (Student) ಕಾಲೇಜು ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದು, ಚಿಕಿತ್ಸೆಗೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆ ಬೇಲೂರು (Beluru) ತಾಲೂಕಿನ ಬೆಳ್ಳೊಟ್ಟೆ ಗ್ರಾಮದಲ್ಲಿ ನಡೆದಿದೆ.
ಆಶಾ (20) ಮೃತ ಯುವತಿ. ಬೇಲೂರು ಪಟ್ಟಣದ ಕಾಲೇಜುವೊಂದರಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದ ಆಶಾಳನ್ನು ಅದೇ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದ ಆಲೂರು ತಾಲೂಕು ಕಾಟೀಹಳ್ಳಿ ಗ್ರಾಮದ ಮಂಜುನಾಥ ಎಂಬಾತ ಪ್ರೀತಿಸುತ್ತಿದ್ದ. ಪ್ರತಿದಿನ ಆಶಾಳೊಂದಿಗೆ ಸುತ್ತಾಡುತ್ತಿದ್ದ. ಇತ್ತೀಚೆಗೆ ಇದೇ ಮಂಜುನಾಥ ಬೇರೊಂದು ಹುಡುಗಿ ಜೊತೆ ಸುತ್ತಾಡುತ್ತಿದ್ದ. ಇದನ್ನು ಗಮನಿಸಿದ ಆಶಾ ಮಂಜುನಾಥನನ್ನು ಹೀಗೇಕೆ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಳು. ನೀನು ನನ್ನನ್ನು ಹೀಗೆಲ್ಲಾ ಪ್ರಶ್ನೆ ಮಾಡಬೇಡ. ಪ್ರಶ್ನಿಸಿದರೆ ಕೊಲೆ ಮಾಡುತ್ತೇನೆ. ಅಷ್ಟೇ ಅಲ್ಲ, ನೀನು ನನ್ನೊಂದಿಗೆ ಸುತ್ತಾಡಿರುವ ಫೋಟೋ, ಮೆಸೇಜ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿ, ನಿಂದಿಸಿದ್ದ ಎಂದ ಆರೋಪಿಸಲಾಗಿದೆ.
ಇದರಿಂದ ಮನನೊಂದ ಆಶಾ ಅ.6ರಂದು ಬೆಳಗ್ಗೆ 11:30ರ ಸಮಯದಲ್ಲಿ ಕಾಲೇಜಿನ ಬಳಿ ವಿಷ ಕುಡಿದಿದ್ದಳು. ಇದನ್ನು ಗಮನಿಸಿದ ಮಂಜುನಾಥ ಆಶಾಳನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದ. ಆದರೆ ಆಶಾ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಒಂದು ವಾರಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಆಶಾ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ 3:45ರ ಸಮಯದಲ್ಲಿ ಮೃತಪಟ್ಟಿದ್ದಾಳೆ. ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಮಂಜುನಾಥನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತಂದೆ ರಾಮಯ್ಯ ಬೇಲೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.