ಬೆಳಗಾವಿ ಕ್ಷೇತ್ರಕ್ಕೆ ಒಪ್ಪಿದ್ದ ಜಗದೀಶ್ ಶೆಟ್ಟರ್ ಗೆ ಮತ್ತೆ ಶಾಕ್ ; ಟಿಕೆಟ್ ಡೌಟ್.!
ರಾಜಕೀಯವಾಗಿ ಒಂದಷ್ಟು ಕಸರತ್ತಿನ ಬಳಿಕ ಬೆಳಗಾವಿ ಲೋಕಸಭಾ ಬಿಜೆಪಿ ಟಿಕೆಟ್ ಅನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ಬಿಜೆಪಿಯಿಂದ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ಬಹುತೇಕ ಅಂತಿಮಗೊಂಡಿದ್ದು, ಹೆಸರು ಪ್ರಕಟವಷ್ಟೇ ಬಾಕಿ ಇದೆ. ಅತ್ತ ಬೆಳಗಾವಿಯಲ್ಲಿ ಬಿಜೆಪಿ ನಾಯಕ ಭಿನ್ನಮತ ಸ್ಪೋಟಿಸಿದೆ. ಸ್ಥಳೀಯ ಆಕಾಂಕ್ಷಿ ನಾಯಕರು ಸಭೆ ಸೇರಿದ್ದಾರೆ. ವಿಶೇಷವೆಂದರೆ ಈ ಸಭೆಯು ರಮೇಶ್ ಜಾರಕಿಹೊಳಿ ಹಾಗೂ ಮಂಗಳಾ ಅಂಗಡಿಯವರ ಕುಟುಂಬ ಹೊರಗಿಟ್ಟು ಸಭೆ ನಡೆದಿದೆ.
ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ನಿವಾಸದಲ್ಲಿ ನಡೆದ ಸಭೆಯಲ್ಲಿ ಸ್ಥಳಿಯ ಬಿಜೆಪಿ ನಾಯಕರಾದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಮಾಜಿ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಡಾ.ವಿಶ್ವನಾಥ್ ಪಾಟೀಲ್, ಎಂ.ಬಿ ಝಿರಲಿ, ವಿರೂಪಾಕ್ಷ ಮಾಮನಿ, ಧನಂಜಯ್ ಜಾಧವ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಶೆಟ್ಟರ್ ವಿರೋಧಿಸಿ ನೀರ್ಣಯ ಕೈಗೊಂಡ ನಾಯಕರು ಸಭೆ ಸೇರಿದ್ದ ಎಲ್ಲ ನಾಯಕರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯರಿಗೆ ಟಿಕೆಟ್ ಕೊಡುವಂತೆ ವರಿಷ್ಠರ ಗಮನಕ್ಕೆ ತರಲು ಸಭೆಯಲ್ಲಿ ತೀರ್ಮಾನಿಸಿದ್ದಾರೆ.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮೂಲಕ ವರಿಷ್ಠರ ಮೇಲೆ ಒತ್ತಡಕ್ಕೆ ಹಾಕಲಿದ್ದಾರೆ. ಸಭೆಯಲ್ಲಿ ಬೆಳಗಾವಿ ಟಿಕೆಟ್ ಇಲ್ಲಿಯವರಿಗೆ ನೀಡುವಂತೆ ರಾಷ್ಟ್ರೀಯ ನಾಯಕರ ಮನವರಿಕೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಗೆ ಜವಾಬ್ದಾರಿ ವಹಿಸಲಾಗಿದೆ.ಅದೇ ರೀತಿ ಕರ್ನಾಟದಲ್ಲಿ ರಾಜ್ಯ ಮಟ್ಟದ ನಾಯಕರಿಗೆ ಈ ಬಗ್ಗೆ ಮನವರಿಕೆ ಮಾಡುವ ಜವಾಬ್ದಾರಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ಹೆಗಲಿಗಿದೆ. ಲೋಕಸಭಾ ಟಿಕೆಟ್ ಹಂಚಿಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಜಗದೀಶ್ ಶೆಟ್ಟರ್ ಹೊರತು ಪಡಿಸಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಅವರು ಆಗ್ರಹಿಸಿದರು. ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ಸಿಕ್ಕಿದ್ದಕ್ಕೆ ತೀವ್ರ ಅಸಮಾಧಾನ ಹೊರ ಹಾಕಿದರು.
ವರಿಷ್ಠರ ಗಮನಕ್ಕೆ ಆಕಾಂಕ್ಷಿಗಳ ಪಟ್ಟಿ
ಇನ್ನೂ ಸಭೆಯಲ್ಲಿ ಕೋರ ಕಮಿಟಿಗೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಚುನಾವಣೆಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳು ಬಂದಿದ್ದು, ಅವುಗಳನ್ನು ತಕ್ಷಣ ರಾಷ್ಟ್ರೀಯ ನಾಯಕರು ಗಮನಕ್ಕೆ ತರುತ್ತೇನೆ. ಹಾಗೆ ರಾಜ್ಯ ನಾಯಕರ ಗಮನಕ್ಕೆ ತರುತ್ತೇವೆ ಎಂದು ಸಭೆ ಬಳಿಕ ಸಂಸದ ಈರಣ್ಣ ಕಡಾಡಿ ತಿಳಿಸಿದರು. ಬೆಳಗಾವಿಯಲ್ಲಿ ಲೋಕಸಭೆಗೆ ಟಿಕೆಟ್ ಸ್ಥಳೀಯ ಬಿಜೆಪಿಯಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದರು. ರಾಜ್ಯದ 20 ಅಭ್ಯರ್ಥಿಗಳ ಘೋಷಣೆ ನಂತರ ಯಾವೊಂದು ಹೆಸರು ಇನ್ನೂ ಘೋಷಣೆ ಆಗಿಲ್ಲ. ಸದ್ಯ ಊಹಾಪೋಹಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾರದು ಎಂದು ಬೆಳಗಾವಿ ಈ ಕೆಲವು ನಾಯಕರು ಮನವಿ ಮಾಡಿದ್ದಾರೆ. ಅಧಿಕೃತವಾಗಿ ರಾಷ್ಟ್ರೀಯ ನಾಯಕರು ಬಿ ಫಾರ್ಮ್ ಕೊಡುವವರೆಗೆಯಾವುದೇ ಪ್ರತಿಕ್ರಿಯೆ ನೀಡುವುದ ಬೇಡ ಅಂತಲೂ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸ್ಥಳಿಯ ಮಟ್ಟದಲ್ಲಿ ಯಾರೆಲ್ಲ ಲೋಕಸಭಾ ಟಿಕೆಟ್ ಬಯಸಿದ್ದಾರೆ ಎಂಬುದನ್ನು ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ಈರಣ್ಣ ಕಡಾಡಿ ತಿಳಿಸಿದರು.
ಬೆಳಗಾವಿಯಲ್ಲಿ ಮುಂದೆ ಏನಾಗಲಿದೆ?
ಹಾವೇರಿ, ಧಾರವಾಡ ಟಿಕೆಟ್ ಕೈತಪ್ಪುತ್ತಿದ್ದ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಜಗದೀಶ್ ಶೆಟ್ಟರ್ ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಭೇಟಿ ಮಾಡಿ ಲಾಭಿ ನಡೆಸಿದರು. ಮನವಿ ಮಾಡಿದರೆ, ಕೊನೆಗೆ ಬೆಳಗಾವಿಯಿಂದ ಸ್ಪರ್ಧೆಗೆ ಅಂತಿಮವಾಯಿತು ಎನ್ನಲಾಗಿದೆ. ಇನ್ನೇನು ಎಲ್ಲವು ಅಂದುಕೊಂಡಂತೆ ಆಗಿದೆ ಎನ್ನುಷ್ಟರಲ್ಲಿ ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿದೆ. ಇತ್ತ ಬಾಕಿ ಇರುವ ಕ್ಷೇತ್ರಗಳಿಗೆ ಪಟ್ಟಿ ಪ್ರಕಟಿಸಬೇಕಿದೆ. ಬಿಜೆಪಿ ಹೈಕಮಾಂಡ್ ಶೆಟ್ಟರ್ ಬೆಳಗಾವಿ ಸ್ಪರ್ಧೆಗೆ ಸೂಚಿಸಿದೆ ಎನ್ನಲಾದರೂ ಅಧಿಕೃತ ಘೋಷಣೆ ಮಾಡಿಲ್ಲ. ಬೆಳಗಾವಿಯಲ್ಲಿ ಮುಂದೇನಾಗಲಿದೆ ಎಂಬ ಕೌತುಕ ಹೆಚ್ಚಾಗುತ್ತಿದೆ.