ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಕೊಲೆ
ಹೊಸದಿಲ್ಲಿ: ಆಂಧ್ರಪ್ರದೇಶದ ವಿದ್ಯಾರ್ಥಿಯೊಬ್ಬನನ್ನು (Student Killed, Student Murder) ಅಮೆರಿಕದಲ್ಲಿ ಇರಿದು ಕೊಲ್ಲಲಾಗಿದೆ. ಅಮೆರಿಕದಲ್ಲಿ ನಿರಂತರ ನಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳ (Indian Student) ಮೇಲಿನ ದೌರ್ಜನ್ಯ, ಹತ್ಯೆಗಳ ಸರಣಿಗೆ ಇದು ಇನ್ನೊಂದು ಸೇರ್ಪಡೆಯಾಗಿದೆ.
ಗುಂಟೂರಿನ ಬುರ್ರಿಪಾಲೆಂನ ಪರುಚೂರಿ ಅಭಿಜಿತ್ ಎಂಬ 20 ವರ್ಷದ ವಿದ್ಯಾರ್ಥಿಯನ್ನು ಯಾರೋ ದುಷ್ಕರ್ಮಿಗಳು ಕೊಂದಿದ್ದಾರೆ. ಆತನ ಶವ ಅಮೇರಿಕಾದ ಕಾಡೊಂದರೊಳಗೆ ಕಾರಿನಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಭಿಜಿತ್ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು.
ದುಷ್ಕರ್ಮಿಗಳನ್ನು ಇನ್ನೂ ಗುರುತಿಸಲಾಗಿಲ್ಲ. ಬೋಸ್ಟನ್ ವಿವಿಯ ಕ್ಯಾಂಪಸ್‌ನ ಅರಣ್ಯದಲ್ಲಿ ಆತನ ಶವ ಪತ್ತೆಯಾಗಿದೆ. ಹಣ ಮತ್ತು ಲ್ಯಾಪ್‌ಟಾಪ್‌ಗಾಗಿ ಸುಲಿಗೆಕೋರರು ಅಭಿಜಿತ್‌ನನ್ನು ಕೊಂದಿರಬಹುದು ಎಂದು ಶಂಕಿಸಲಾಗಿದೆ.
ವಿಶ್ವವಿದ್ಯಾನಿಲಯದಲ್ಲಿ ನಡೆದ ಕೊಲೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಭಿಜಿತ್ ಇತರ ವಿದ್ಯಾರ್ಥಿಗಳೊಂದಿಗೆ ಹೊಂದಿರಬಹುದಾದ ವೈಷಮ್ಯದ ಕುರಿತು ಕೂಡ ತನಿಖೆ ನಡೆಯುವ ಸಾಧ್ಯತೆಯಿದೆ.ಅಭಿಜಿತ್ ಅವರು ತಮ್ಮ ಹೆತ್ತವರಾದ ಪರುಚೂರಿ ಚಕ್ರಧರ್ ಮತ್ತು ಶ್ರೀಲಕ್ಷ್ಮಿಯ ಏಕೈಕ ಪುತ್ರರಾಗಿದ್ದರು. ಅಭಿಜಿತ್ ಬಾಲ್ಯದಿಂದಲೂ ಉಜ್ವಲ ವಿದ್ಯಾರ್ಥಿಯಾಗಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ
ಆರಂಭದಲ್ಲಿ ಅಭಿಜಿತ್‌ನ ತಾಯಿ ವಿದೇಶದಲ್ಲಿ ಓದುವ ಆತನ ನಿರ್ಧಾರವನ್ನು ವಿರೋಧಿಸಿದ್ದರು. ಅಭಿಜಿತ್‌ನ ಉತ್ತಮ ಭವಿಷ್ಯಕ್ಕಾಗಿ ಬಯಸಿ ಮನಸ್ಸು ಬದಲಾಯಿಸಿದ್ದರು. ಪರುಚೂರಿ ಅಭಿಜಿತ್‌ನ ತಂದೆ- ತಾಯಿ ತಮ್ಮ ಮಗ ಕೊಲೆಯಾದ ಸುದ್ದಿ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಅಭಿಜಿತ್ ಅವರ ಪಾರ್ಥಿವ ಶರೀರ ಶುಕ್ರವಾರ ಸಂಜೆ ಗುಂಟೂರಿನ ಬುರ್ರಿಪಾಲೆಂನಲ್ಲಿರುವ ಅವರ ಮನೆಗೆ ತಲುಪಿದೆ. 2024ರಲ್ಲಿ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಅಮೆರಿಕದಲ್ಲಿ ನಡೆದ ಇಂತಹ ದಾಳಿಯ ಒಂಬತ್ತನೇ ಘಟನೆ ಇದಾಗಿದೆ. ಇತ್ತೀಚೆಗೆ ಕೋಲ್ಕೊತಾ ಮೂಲದ ಖ್ಯಾತ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯಪಟು ಅಮರ್‌ನಾಥ್ ಘೋಷ್ (Amarnath Ghosh) ಅವರನ್ನು ಕೊಲೆ ಮಾಡಲಾಗಿತ್ತು. ಮಿಸೌರಿಯಲ್ಲಿ ಅಮರ್‌ನಾಥ್ ಘೋಷ್ ಅವರು ಸಂಜೆ ವಾಯುವಿಹಾರಕ್ಕೆ ಹೋಗಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಕೊಂದಿದ್ದರು. ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಅಮರ್‌ನಾಥ್ ಘೋಷ್ ಅವರು ಮಾಸ್ಟರ್ ಆಫ್ ಫೈನ್ ಆರ್ಟ್ಸ್ (MFA) ಅಧ್ಯಯನ ಮಾಡುತ್ತಿದ್ದರು. ಕೋಲ್ಕೊತಾ ಮೂಲದವರಾದ ಇವರು ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯದಲ್ಲಿ ಅಪಾರ ಖ್ಯಾತಿ ಗಳಿಸಿದ್ದಾರೆ.
ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗಳ ಮೇಲೆ ದಾಳಿ, ಹತ್ಯೆಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಕೆಲ ತಿಂಗಳ ಹಿಂದಷ್ಟೇ ಅಮೆರಿಕದಲ್ಲಿ ಭಾರತದ ವರುಣ್ ರಾಜ್ ಎಂಬ ವಿದ್ಯಾರ್ಥಿ ಹತ್ಯೆಗೀಡಾಗಿದ್ದ. ವಾಲ್ಪರೈಸೋ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ವರುಣ್ ರಾಜ್, ಅಕ್ಟೋಬರ್ 29ರಂದು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ. ಇದೇ ವೇಳೆ ಜೋರ್ಡಾನ್ ಅಂಡ್ರಾಡೆ (24) ಎಂಬ ಯುವಕನು ಜಿಮ್ ಪ್ರವೇಶಿಸಿದ್ದ. ಜಿಮ್ ಪ್ರವೇಶಿಸಿದವನೇ ವರುಣ್ ರಾಜ್ ಪುಚಾನನ್ನು ಹುಡುಕಿ, ಆತನಿರುವ ಕಡೆ ತೆರಳಿ, ಆತನ ತಲೆಗೆ ಚಾಕು ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವರುಣ್ ರಾಜ್ ಪುಚಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವರುಣ್ ರಾಜ್ ಪುಚಾ ಮೃತಪಟ್ಟಿದ್ದ.