ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಎಫ್ಐಆರ್; 5 ಲಕ್ಷ ರೂ. ವಂಚನೆ, ಬಿಜೆಪಿ ಕಾರ್ಯಕರ್ತ ದೂರು!
ಚೈತ್ರಾ ಕುಂದಾಪುರ ಮತ್ತೊಂದು ಪ್ರಕರಣ ಬೆಳಕಿಗೆ:
ಉಡುಪಿ: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವ ನೆಪದಲ್ಲಿ ವಂಚನೆ ಎಸಗಿದ ಆರೋಪದಡಿ ಬಂಧನಕ್ಕೊಳಗಾಗಿ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿಬಂದಿದೆ. ಬಟ್ಟೆ ಅಂಗಡಿ ಇಟ್ಟು ಕೊಡುವುದಾಗಿ ಲಕ್ಷಾಂತರ ರೂಪಾಯಿ ಪಡೆದ ವಂಚಿಸಿದ ಆರೋಪ ಸಂಬಂಧ ಉಡುಪಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಟ್ಟೆ ಅಂಗಡಿ ಇಟ್ಟು ಕೊಡುವುದಾಗಿ 5 ಲಕ್ಷ ರೂ. ಪಡೆದು ವಂಚನೆ ಎಸಗಿದ್ದಾಗಿ ಆರೋಪಿಸಿ ಬಿಜೆಪಿ ಕಾರ್ಯಕರ್ತ ಸುಧೀನ್ ಎಂಬುವರು ಬ್ರಹ್ಮಾವರ ವೃತ್ತ ವ್ಯಾಪ್ತಿಯ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
2015ರಲ್ಲಿ ಸುಧೀನ ಅವರಿಗೆ ಚೈತ್ರಾ ಕುಂದಾಪುರ ಪರಿಚಯವಾಗಿದೆ. ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳ, ಶಾಸಕರ ನಿಕಟ ಸಂಪರ್ಕವಿದೆ ಎಂದು ನಂಬಿಸಿದ್ದ ಚೈತ್ರಾ, 2018-2023 ರ ಅವಧಿಯಲ್ಲಿ ಅಂಗಡಿ ನಿರ್ಮಾಣಕ್ಕೆ ಐದು ಲಕ್ಷ ಹಣವನ್ನು ಹಂತ ಹಂತವಾಗಿ ಪಡೆದ್ದಾಳೆ. ಮೂರು ಲಕ್ಷವನ್ನ ಚೈತ್ರಾ ಖಾತೆಗೆ ವರ್ಗಾಯಿಸಿದ್ದ ಸುದೀನ, ಉಳಿದ ಎರಡು ಲಕ್ಷ ಹಣವನ್ನ ನಗದು ರೂಪದಲ್ಲಿ ನೀಡಿದ್ದರು.
ಬಟ್ಟೆ ಅಂಗಡಿಗೆ ಹಣ ಪಡೆದು ನಿರ್ಮಾಣ ವಿಳಂಬವಾದಾಗ ಇನ್ನಷ್ಟು ಹಣದ ಬೇಡಿಕೆ ಇಟ್ಡ ಚೈತ್ರಾ, ಅಂಗಡಿ ನಿರ್ಮಣ ವಿಳಂಬವಾಗಿರುವುದಕ್ಕೆ ಸ್ಥಳೀಯ ಮುಖಂಡರಲ್ಲಿ ಮತುಕತೆ ನಡೆಸಿದ್ದು, ಅಂತಿಮ ಹಂತ ಎಂದು ನಂಬಿಸಿದ್ದಳು. ಕೊನೆಗೆ ಚುನಾವಣಾ ಪ್ರಚಾರ, ಭಾಷಣ, ಕಾರ್ಯಕಾರಣಿ ಸಭೆ, ಪಕ್ಷದ ಮುಖಂಡರ ಭೇಟಿ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು.
ಅನುಮಾನಗೊಂಡ ಸುದೀನ ಕೂಡಲೇ ಬಟ್ಟೆ ಅಂಗಡಿಗೆ ಒತ್ತಾಯಿಸಿದ. ಈ ವೇಳೆ ಸುಳ್ಳು ಅತ್ಯಾಚಾರ ಪ್ರಕರಣ ಕೊಡುತ್ತೇನೆ, ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಹಲವರ ಮನವೊಲಿಕೆ ಬಳಿಕ ಇದೀಗ ಸುಧೀನ ಅವರು ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಚೈತ್ರಾ ವಿರುದ್ಧ 506, 417, 420 ಐಪಿಸಿ ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ಹಿಂದೂ ಕಾರ್ಯಕರ್ತರೇ ಚೈತ್ರಾ ಕುಂದಾಪುರಳ ಟಾರ್ಗೆಟ್?
ಚೈತ್ರಾ ಕುಂದಾಪುರ ಹಿಂದುತ್ವ, ಕೇಸರಿಯನ್ನೇ ಬಂಡವಾಳವನ್ನಾಗಿಸಿಕೊಂಡು ಕಾರ್ಯಕರ್ತರನ್ನೇ ವಂಚಿಸುತ್ತಿದ್ದರೇ ಎಂಬ ಅನುಮಾನಕ್ಕೆ ಸದ್ಯ ದಾಖಲಾದ ಪ್ರಕರಣಗಳೇ ಪುಷ್ಠಿ ನೀಡುತ್ತವೆ. ಬೈಂದೂರಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ ಚೈತ್ರಾ ಆ್ಯಂಡ್ ಗ್ಯಾಂಗ್ ಐದು ಕೋಟಿ ಪಡೆದು ನಂತರ ವಂಚಿಸಿದೆ.
ಈ ನಡುವೆ ಮತ್ತೊಂದು ವಂಚನೆ ಪ್ರಕರಣ ದಾಖಲಿಸಿದ ಸುಧೀನ್ ಬಿಜೆಪಿ ಕಾರ್ಯಕರೇ ಆಗಿದ್ದಾರೆ. ಬಟ್ಟೆ ಅಂಗಡಿ ಉದ್ಯಮ ನಡೆಸಲು ನಿರ್ಧರಿಸಿದ್ದಾರೆ. ಆದರೆ ಇವರಿಗೂ ಚೈತ್ರಾ ಕುಂದಾಪುರ ಐದು ಲಕ್ಷ ವಂಚಿಸಿದ್ದಾರೆ ಎಂಬುದು ಇದೀಗ ಬೆಳಕಿಗೆ ಬಂದಿದೆ.