ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಬದಲಿಗೆ ಹಣ ಖಾತೆಗೆ ಬೀಳಬೇಕೆಂದರೆ ಕಳೆದ 3 ತಿಂಗಳಲ್ಲಿ ಒಮ್ಮೆಯಾದರೂ ರೇಷನ್ ಪಡೆದಿರಬೇಕು : ಇಲ್ಲಿದೆ ಕಂಪ್ಲೀಟ್ ವಿವರ
ಕೋಲಾರ: ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ ಅಕ್ಕಿ ಬದಲಿಗೆ ಹಣ ಪಡೆಯಲು ಕಳೆದ ಮೂರು ತಿಂಗಳಲ್ಲಿಒಮ್ಮೆಯಾದರೂ ಪಡಿತರ ಆಹಾರ ಧಾನ್ಯಗಳನ್ನು ಪಡೆದಿರಬೇಕು ಎಂದು ಸರಕಾರ ನಿಬಂಧನೆ ಹೇರಿದೆ! ಪಡಿತರ ಅಗತ್ಯವಿರುವಂತಹ ಕುಟುಂಬಗಳಿಗೆ ಮಾತ್ರವೇ ನಗದು ವರ್ಗಾವಣೆ ಮಾಡಲು ಯೋಜನೆ ರೂಪಿಸಿರುವಂತಹ ಸರಕಾರವು ಈ ಕ್ರಮಕ್ಕೆ ಮುಂದಾಗಿದೆ. ಇದರೊಂದಿಗೆ ಪಡಿತರ ಚೀಟಿಯ ಮುಖ್ಯಸ್ಥರ ಆಧಾರ್ ಜೋಡಣೆ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ.
ರಾಜ್ಯದ ಜನರಿಗೆ ವಿತರಣೆ ಮಾಡಲು ಅಕ್ಕಿ ಲಭ್ಯವಾಗದ ಹಿನ್ನೆಲೆಯಲ್ಲಿಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡಲು ಸರಕಾರ ಮುಂದಾಗಿದೆ. ನಗದು ವರ್ಗಾವಣೆ ಪ್ರಕ್ರಿಯೆ ಜುಲೈ ಅಂತ್ಯದ ವೇಳೆಗೆ ಎಲ್ಲ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಐದು ಕೆ.ಜಿ ಅಕ್ಕಿಯ ಹಣ ಜಮೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಹೊಂದಿರುವ ಆಹಾರ ತಂತ್ರಾಂಶದಲ್ಲಿ ಲಭ್ಯವಿರುವಂತಹ ದತ್ತಾಂಶ ಮಾಹಿತಿ ಬಳಸಿಕೊಂಡು ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಕುಟುಂಬಗಳ (ಬಿಪಿಎಲ್) ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ ನಗದು ವರ್ಗಾವಣೆಯಾಗುತ್ತಿದೆ.
ಕೋಲಾರ, ಮೈಸೂರಿನ ಫಲಾನುಭವಿಗಳಿಗೆ ಹಣ
ಕೋಲಾರ ಮತ್ತು ಮೈಸೂರಿನಲ್ಲಿ ಪ್ರಾಯೋಗಿಕವಾಗಿ ನಗದು ವರ್ಗಾವಣೆ ಆರಂಭವಾಗಿದೆ. ತಿಂಗಳಾಂತ್ಯದ ವೇಳೆಗೆ ಎಲ್ಲ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ರಾಜ್ಯದ ಜನರಿಗೆ ವಿತರಣೆ ಮಾಡಲು ಅಕ್ಕಿ ಲಭ್ಯವಾಗದ ಹಿನ್ನೆಲೆಯಲ್ಲಿಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡಲು ಸರಕಾರ ಮುಂದಾಗಿದೆ. ಅದರಂತೆ ಸೋಮವಾರದಿಂದ ರಾಜ್ಯದ ಜನರಿಗೆ ನಗದು ವರ್ಗಾವಣೆಗೆ ಚಾಲನೆ ದೊರೆತಿದೆ.
ಕುಟುಂಬ ಮುಖ್ಯಸ್ಥರಿಲ್ಲದೆ ಹಣವಿಲ್ಲ!
ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚಿನ ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳು ಅಕ್ಕಿ ಬದಲಿಗೆ ಹಣ ಪಡೆಯಲು ಅರ್ಹತೆ ಹೊಂದಿರುವುದಿಲ್ಲ. ಅದರಂತೆ, ಕುಟುಂಬದ ಮುಖ್ಯಸ್ಥರನ್ನು ಗುರುತಿಸದ ಹಾಗೂ ಒಂದಕ್ಕಿಂತಲೂ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವವರು ಆಹಾರ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ಸರಿಪಡಿಸಿಕೊಳ್ಳಬೇಕಾಗುತ್ತದೆ.
ಬ್ಯಾಂಕ್ ಖಾತೆ ಪಡೆಯುವುದೇಗೆ?
ಆಹಾರ ಇಲಾಖೆಯು ನಗದು ವರ್ಗಾವಣೆಗೆ ಅರ್ಹರಿರುವಂತಹ ಪಡಿತರ ಚೀಟಿಗಳು ಮತ್ತು ಸದಸ್ಯರ ಪಟ್ಟಿಯನ್ನು (ಸೆಟ್ ಆಫ್ ರೇಷನ್ ಕಾರ್ಡ್ಸ್) ಎನ್ಐಸಿ ಸಂಸ್ಥೆಯ ತಂತ್ರಾಂಶದಲ್ಲಿ ಸಿದ್ಧಪಡಿಸಿ, ಆಧಾರ್ ಲಿಂಕ್ ಆಗಿರುವಂತಹ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗಳ ಪರಿಶೀಲನೆಗಾಗಿ ಡಿಬಿಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್) ಕೋಶಕ್ಕೆ ವರ್ಗಾಯಿಸಲಾಗುತ್ತದೆ. ಅದರಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಫೋರೇಷನ್ ಆಫ್ ಇಂಡಿಯಾ (ಎನ್ಪಿಸಿಐ)ನಿಂದ ಕಾರ್ಡ್ದಾರರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಪಡೆಯಲಾಗುತ್ತದೆ. ಹೀಗಾಗಿ ಪಡಿತರ ಚೀಟಿದಾರರು ಪ್ರತ್ಯೇಕವಾಗಿ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಇಲಾಖೆಗೆ ನೀಡಬೇಕಾಗಿಲ್ಲ.
ಅನ್ನಭಾಗ್ಯ ಪ್ರಮುಖ ಅಂಕಿ-ಅಂಶಗಳು
1,28,16,253 – ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳು
3,016 – ಆಧಾರ್ ಜೋಡಣೆಯಾಗದ ಸದಸ್ಯರ ಸಂಖ್ಯೆ
ಶೇ.7 -ಪ್ರತಿ ತಿಂಗಳು ಆಹಾರ ಧಾನ್ಯ ಪಡೆಯದ ಚೀಟಿಗಳು