ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್ ಎರಚಿದ ದಂಪತಿ!
ಶಿವಮೊಗ್ಗ, ಡಿಸೆಂಬರ್ 04: ನಾಯಿ (dog) ಬೊಗಳುವ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ಪಕ್ಕದ ಮನೆ ವ್ಯಕ್ತಿ ಮೇಲೆ ದಂಪತಿ ಆ್ಯಸಿಡ್ ಎರಚಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಹಾಳ್ ಕರಗುಂದ ಗ್ರಾಮದಲ್ಲಿ ನಡೆದಿದೆ. ಜೇಮ್ಸ್, ಮರಿಯಮ್ಮರಿಂದ ಸುಂದರ್ ರಾಜ್ ಮೇಲೆ ಆ್ಯಸಿಡ್ ದಾಳಿ ಮಾಡಿದ್ದು, ಸುಂದರ್ರಾಜ್ ಕಣ್ಣು, ಮುಖಕ್ಕೆ ಗಾಯಗಳಾಗಿವೆ. ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದ್ದಾರೆ.
ಸಾಕು ನಾಯಿ ಬೊಗಳಿದ್ದಕ್ಕೆ ಗಾಯಾಳು ಸುಂದರ್ ರಾಜ್ ಬೈಯ್ದಿದ್ದ. ನಾಯಿ ಹೆಸರಿನಲ್ಲಿ ಜೇಮ್ಸ್, ಮರಿಯಮ್ಮಗೆ ಬೈಯ್ಯುತ್ತಿದ್ದ ಎಂದು ಆರೋಪ ಮಾಡಲಾಗಿದೆ.
ಸಿಟ್ಟಿಗೆದ್ದು ಸುಂದರಾಜ್ ಮೇಲೆ ದಂಪತಿ ಆ್ಯಸಿಡ್ ದಾಳಿ ಮಾಡಿದ್ದಾರೆ. ಸದ್ಯ ದಂಪತಿ ವಿರುದ್ಧ ಎನ್.ಆರ್.ಪುರ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಜೇಮ್ಸ್, ಮರಿಯಮ್ಮ ದಂಪತಿ ನಾಪತ್ತೆ ಆಗಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ಬೀದಿನಾಯಿಗಳ ಅಟ್ಟಹಾಸ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಕಳೆದ ರಾತ್ರಿ ಬೀದಿನಾಯಿಗಳು ಅಟ್ಟಹಾಸ ಮೆರೆದಿದ್ದವು. ನಗರದಲ್ಲಿ ಸರಿ ಸುಮಾರು 14 ಮಂದಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ನಗರದ ಡಿ ಕ್ರಾಸ್, ಟಿಬಿ ಕ್ರಾಸ್, ತಾಲೂಕು ಕಚೇರಿ ರಸ್ತೆ, ಸೇರಿದಂತೆ ಹಲವು ಏರಿಯಾಗಳಲ್ಲಿ ಮಕ್ಕಳು ಸೇರಿದಂತೆ ದೊಡ್ಡವರ ಮೇಲೆ ಬೀದಿ ನಾಯಿಗಳು ಅಟ್ಟಹಾಸವನ್ನ ಮೆರೆದಿತ್ತು.
ಬೀದಿ ನಾಯಿಗಳ ದಾಳಿಗೆ ಒಳಗಾದವರು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದಿದ್ದು, ಕೆಲವರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ತೆರಳಿದ್ದರು.
ಹಿಂಡು ಹಿಂಡಾಗಿ ಬರುತ್ತಿರುವ ಬೀದಿ ನಾಯಿಗಳು ರಸ್ತೆಯಲ್ಲಿ ಓಡಾಡುವ ಮಕ್ಕಳ ಮೇಲೆ ಟಾರ್ಗೆಟ್ ಮಾಡುತ್ತಿದ್ದವು. ಅದರಲ್ಲೂ ನಗರದಲ್ಲಿ ಮಾಂಸದಂಗಡಿಗಳಿಂದ ಬೇರ್ಪಡುವ ಮಾಂಸದ ತುಂಡುಗಳನ್ನ ಬೀದಿ ನಾಯಿಗಳಿಗೆ ಹಾಕಲಾಗಿತ್ತು. ಮಾಂಸದ ತುಂಡುಗಳನ್ನ ತಿಂದು ರುಚಿ ಪಳಗಿರೋ ಬೀದಿ ನಾಯಿಗಳು ಗ್ಯಾಂಗ್ಗಳಂತೆ ಮಂದಿಯಾಗಿ ಬಂದು ಒಬ್ಬೊಂಟಿಯಾಗಿ ಓಡಾಡುವ ಜನರ ಮೇಲೆ ಎರಗುತ್ತಿದ್ದವು.
ಹೀಗಾಗಿಯೇ ರಾತ್ರಿಯಿಂದ 14 ಮಂದಿ ಮೇಲೆ ಬೀದಿ ನಾಯಿಗಳು ತಮ್ಮ ಅಟ್ಟಹಾಸವನ್ನ ಮೆರೆದಿದ್ದವು. ಇದ್ರಿಂದಾಗಿ ರಸ್ತೆಗಳಲ್ಲಿ ಓಡಾಡಲು ಬೀದಿ ನಾಯಿ ಯಾವಗ ದಾಳಿ ಮಾಡುತ್ತೋ ಅನ್ನೋ ಆತಂಕದಲ್ಲಿ ನಗರದ ಜನ ಇದ್ದಾರೆ. ಹಲವಾರು ದಿನಗಳಿಂದ ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ನಾಗರೀಕರು ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಅಂತಾ ನಗರಸಭೆ ವಿರುದ್ದ ಜನ ಅಸಮಾಧಾನ ವ್ಯಕ್ತಪಡಿಸಿದ್ದರು.