ಗೃಹ ಪ್ರವೇಶ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಅಪಘಾತ ; ದಂಪತಿ ಸಾವು!

ಬೆಂಗಳೂರು: ಅಗ್ನಿ ಸಾಕ್ಷಿಯಾಗಿ ಕೈ ಹಿಡಿದು ಜೀವನದುದ್ದಕ್ಕೂ ಜೊತೆ ಜೊತೆಯಾಗಿ ಹೆಜ್ಜೆ ಹಾಕ್ತೀವಿ ಅಂತಾ ಸಪ್ತಪದಿ ತುಳಿದಿದ್ದ ದಂಪತಿಗಳು ಸಾವಿನಲ್ಲೂ ಜೊತೆಯಾಗಿದ್ದಾರೆ. ಗೃಹ ಪ್ರವೇಶ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದ ದಂಪತಿ ಭೀಕರ ಅಪಘಾತಕ್ಕೆ (Road Accident) ಬಲಿಯಾಗಿದ್ದಾರೆ.
ಕಳೆದ 23 ವರ್ಷಗಳ ವೈವಾಹಿಕ ಜೀವನದ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಇದೀಗ ಸಾವಲ್ಲೂ ಜೊತೆಯಾಗಿದ್ದಾರೆ. ಹೀಗೆ ರಸ್ತೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದವರು ನಿರ್ಮಲಾ ಹಾಗೂ ಬೈಯಣ್ಣ. ಗುರುವಾರ ಹಾರಗದ್ದೆಯಲ್ಲಿ ಸಂಬಂಧಿಕರೊಬ್ಬರ ಗೃಹ ಪ್ರವೇಶ ಮುಗಿಸಿ ಹಿಂತಿರುಗುವಾಗ ಮೂರು ಗಂಟೆ ಸುಮಾರಿಗೆ ನೈಸ್ ರಸ್ತೆಯ (NiceRoad) ವಜ್ರಮುನೇಶ್ವರ ಅಂಡರ್ ಪಾಸ್ ಬಳಿ ಇವರ ಬೈಕ್‌ಗೆ ಹಿಂದಿನಿಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ.
ಅತಿವೇಗವಾಗಿ ಕ್ಯಾಂಟರ್ ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದ ಚಾಲಕ. ಬೈಕ್‌ನಲ್ಲಿದ್ದ ಬೈಯಣ್ಣ ದಂಪತಿ ಹಾರಿ ನೆಲಕ್ಕೆ ಅಪ್ಪಳಿಸಿದ್ರು. ಬೈಯಣ್ಣಗೆ ತಲೆಗೆ ಪೆಟ್ಟು ಬಿದ್ದು ರಕ್ತ ಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಪತ್ನಿಯೂ ಕೂಡ ಬೋರಲಾಗಿ ಬಿದ್ದು ಪ್ರಾಣ ಬಿಟ್ಟರು. ವಿಜಯನಗರದ ಹೊಸಹಳ್ಳಿ ಮೂಲದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ (ಒಂದು ಗಂಡು, ಒಂದು ಹೆಣ್ಣು). ಇಬ್ಬರೂ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಈ ಹಿಂದೆ ಕೂಡ ಎರಡು ಬಾರಿ ಬೈಯ್ಯಣ್ಣ ಅಪಘಾತಕ್ಕೊಳಗಾಗಿದ್ದರು ಎನ್ನಲಾಗಿದೆ.
ಬೈಯ್ಯಣ್ಣ ಹಿಂದೆ ಎರಡು ಬಾರಿಯೂ ಗಂಭೀರ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಒಮ್ಮೆ ಕನಕಪುರ ರಸ್ತೆ, ಮತ್ತೊಮ್ಮೆ ವಿಜಯನಗರದಲ್ಲಿ ಅಪಘಾತವಾಗಿತ್ತು. 3ನೇ ಬಾರಿ ಆಕ್ಸಿಡೆಂಟ್ ಆಗಿ ಪತ್ನಿಯೊಂದಿಗೆ ಕೊನೆಯುಸಿರೆಳೆದಿದ್ದಾರೆ.
ಆಕ್ಸಿಡೆಂಟ್ ಆಗ್ತಿದ್ದಂತೆ ಕ್ಯಾಂಟರ್ ಚಾಲಕ, ಕ್ಯಾಂಟರ್ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.