ಅಮಿತ್ ಶಾ ಸ್ವಾಗತಕ್ಕೆ ಲೈನ್ ಅಪ್ ವಿಚಾರ- ಪ್ರತಾಪ್ ಸಿಂಹ ಹಾಗೂ ಪ್ರೀತಂ ಗೌಡ ನಡುವೆ ಮಾತಿನ ಚಕಮಕಿ!
ಬಿಜೆಪಿ ಚಾಣಕ್ಯ ಎಂದೇ ಹೆಸರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಲೋಕಸಭಾ ಚುನಾವಣೆಯನ್ನು (Lok Sabha Elections) ಮುಂದಿಟ್ಟುಕೊಂಡು ಮೈಸೂರಿಗೆ ಆಗಮಿಸಿದ್ದಾರೆ. ಇವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಕ್ಲಸ್ಟರ್ ನಾಯಕರ ಲೈನ್ಅಪ್ ಮಾಡಲಾಗಿತ್ತು. ಈ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ (Pratap Simha) ಹಾಗೂ ಮಾಜಿ ಶಾಸಕ ಪ್ರೀತಮ್ ಗೌಡ (Preetham Gowda) ವಿಚಾರವಾಗಿ ವಾಗ್ವಾದ ನಡೆದಿದೆ.
ಅಮಿತ್ ಶಾ ಸ್ವಾಗತಕ್ಕೆ ಕ್ಲಸ್ಟರ್ ನಾಯಕರ ಲೈನ್ ಆಪ್ ಉಸ್ತುವಾರಿಯನ್ನು ಮಾಜಿ ಶಾಸಕ ಪ್ರೀತಮ್ ಗೌಡ ಹೊತ್ತುಕೊಂಡಿದ್ದರು. ಆದರೆ, ಪ್ರತಾಪ್ ಸಿಂಹ ಮತ್ತಿತರರನ್ನು ಕಡೆಗಣಿಸಲಾಗಿದೆ. ತಮ್ಮನ್ನು ಸೇರಿದಂತೆ ಮೈಸೂರು ಕ್ಲಸ್ಟರ್ನ ಪ್ರಮುಖ ನಾಯಕರನ್ನು ಪಟ್ಟಿಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಪ್ರತಾಪ್ ಸಿಂಹ ಅವರು ಪ್ರೀತಮ್ ಗೌಡ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ
ಪ್ರತಾಪಸಿಂಹ ಪ್ರಶ್ನೆಗೆ ತಾನು ಮಾಡಿದ್ದೇ ಸರಿ ಅನ್ನೋ ರೀತಿಯಲ್ಲಿ ಪ್ರೀತಮ್ ಗೌಡ ಅವರು ಉತ್ತರ ಕೊಟ್ಟಿದ್ದಾರೆ. ಈ ವೇಳೆ ಪ್ರತಾಪ್ ಸಿಂಹ ಹಾಗೂ ಪ್ರೀತಂ ಗೌಡ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಮಧ್ಯಪ್ರವೇಶಿಸಿದ ಬಿಜೆಪಿ ನಾಯಕರು ಇಬ್ಬರು ನಾಯಕರನ್ನು ಸಮಾಧಾನ ಮಾಡಿದ್ದಾರೆ
ಅಮಿತ್ ಶಾ ಕಾರ್ಯಕ್ರಮದಲ್ಲಿ ಬದಲಾವಣೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಈ ಹಿಂದಿನ ವೇಳಾಪಟ್ಟಿಯಂತೆ ಅಮಿತ್ ಶಾ ಅವರು ಬೆಳಗ್ಗೆ 11 ಗಂಟೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಲಿದ್ದರು. ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದರು. ಬದಲಾದ ವೇಳಾಪಟ್ಟಿಯಂತೆ, ಅಮಿತ್ ಶಾ ಅವರು ಮಧ್ಯಾಹ್ನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮುನ್ನ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ.