ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ ಅಮಿತ್ ಶಾ ; ಬಿಜೆಪಿ-ಜೆಡಿಎಸ್ ದೊಂದಿಗೆ ಇಂದು ಮಹತ್ವದ ಸಭೆ..!
ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ಕೌಂಡ್‌ಡೌನ್ ಶುರುವಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಈ ಬಾರಿ ಎಲ್ಲಾ ಪಕ್ಷಗಳು ತಂತ್ರಗಾರಿಕೆಯನ್ನು ಮಾಡುತ್ತಿದೆ. ಈತನ್ಮಧ್ಯೆ ಕರ್ನಾಟಕದಲ್ಲಿ 28 ಸ್ಥಾನಗಳನ್ನೂ ಗೆಲ್ಲಬೇಕು ಎಂದು ಬಿಜೆಪಿ (Karnataka BJP) ಪ್ರಯತ್ನ ಮಾಡುತ್ತಿದ್ದು, ಇದರ ಭಾಗವಾಗಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.
ಇಂದು ಬೆಳಗ್ಗೆ 9:30ಕ್ಕೆ ಸರಿಯಾಗಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಲಿದ್ದು, ಈ ಸಭೆಯಲ್ಲಿ ಎರಡೂ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರ ಮಧ್ಯೆ ಸಮನ್ವಯ ತರುವ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ. ಈಗಾಗಲೇ ಹಲವು ಕಡೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮತ್ತು ನಾಯಕರ ಮಧ್ಯೆ ಭಿನ್ನಾಭಿಪ್ರಾಯವಿದ್ದು, ಇದನ್ನು ಬಗೆ ಹರಿಸಲು ಅಮಿತ್ ಶಾ ಸಲಹೆಗಳನ್ನು ನೀಡಲಿದ್ದಾರೆ.
ಬಿಜೆಪಿ-ಜೆಡಿಎಸ್ ನಾಯಕರ ಜೊತೆ ಅಮಿತ್ ಶಾ ಬ್ರೇಕ್ ಫಾಸ್ಟ್ ಮೀಟಿಂಗ್‌ಗೆ ಬಿಜೆಪಿಯಿಂದ 15, ಜೆಡಿಎಸ್‌ನಿಂದ 8 ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ಬಿಜೆಪಿಯಿಂದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲಾ, ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಆರ್ ಅಶೋಕ್, ಪ್ರಹ್ಲಾದ್ ಜೋಷಿ, ಡಿವಿ ಸದಾನಂದಗೌಡ, ಬಸವರಾಜ್ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ಗೋವಿಂದ ಕಾರಜೋಳ, ಸಿಟಿ ರವಿ, ಬಿ ಶ್ರೀರಾಮುಲು, ಸಿ ಎನ್ ಅಶ್ವಥ್ ನಾರಾಯಣ್, ನಿರ್ಮಲ್ ಕುಮಾರ್ ಸುರಾನಾ, ಜಿವಿ ರಾಜೇಶ್‌ಗೆ ಆಹ್ವಾನ ನೀಡಲಾಗಿದೆ.
ಇನ್ನು, ಜೆಡಿಎಸ್‌ನಿಂದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಜಿಟಿ ದೇವೇಗೌಡ, ವೆಂಕಟ ರಾವ್ ನಾಡಗೌಡ, ಸಿ ಎಸ್ ಪುಟ್ಟರಾಜು, ಸಾ ರಾ ಮಹೇಶ್, ಹೆಚ್ ಕೆ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ ನೀಡಲಾಗಿದೆ. ಆದರೆ ಅಮಿತ್ ಶಾ ಜೊತೆಗಿನ ಉಪಹಾರ ಕೂಟಕ್ಕೆ ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಆಹ್ವಾನ ನೀಡಿಲ್ಲ. ಬಿಜೆಪಿಗೆ ಸೇರಿಸಿಕೊಂಡು ರಾಜ್ಯ ಚುನಾವಣಾ ಪ್ರಚಾರಕ್ಕೆ ಪ್ರಮುಖರಾಗಿ ಜನಾರ್ದನ್ ರೆಡ್ಡಿಯನ್ನು ಬಿಜೆಪಿ ಆಯ್ಕೆ ಮಾಡಿತ್ತು. ಆದರೆ ಇಂದಿನ ತಮ್ಮ ಪಕ್ಷದ ನಾಯಕನ ಜೊತೆಗಿನ ಬ್ರೇಕ್ ಫಾಸ್ಟ್ ಮೀಟಿಂಗ್‌ಗೇ ರೆಡ್ಡಿಗೆ ಆಹ್ವಾನ ನೀಡಿಲ್ಲ.
ನಿನ್ನೆ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸ್ವಾಗತಿಸಿದ್ದರು. ಸದ್ಯ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅಮಿತ್ ಶಾ ಅವರು ಬೆಳಿಗ್ಗೆ 9.30ಕ್ಕೆ ಬಿಜೆಪಿ-ಜೆಡಿಎಸ್ ನಾಯಕರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಲಿದ್ದಾರೆ.
ಬಿಜೆಪಿ-ಜೆಡಿಎಸ್ ನಾಯಕರ ಜೊತೆ ಅಮಿತ್ ಶಾ ಬ್ರೇಕ್ ಫಾಸ್ಟ್ ಮೀಟಿಂಗ್‌ಗೆ ಆಗಮಿಸಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸುದ್ದಿಗಾರರ ಜೊತೆ ಮಾತನಾಡಿ, ಇವತ್ತು ಅಮಿತ್ ಶಾ ಅವರು ಮೀಟಿಂಗ್ ಕರೆದಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಮುಖಂಡರು ಸೇರಿ ನಮ್ಮ ಕಡೆಯಿಂದ ಆರು ಮುಖಂಡರನ್ನ ಕರೆದಿದ್ದಾರೆ. ಬಿಜೆಪಿಯ ಆರು ಜನ ಮುಖಂಡರನ್ನ ಕರೆದಿದ್ದಾರೆ. ಇವತ್ತಿನವರೆಗೂ ಚುನಾವಣೆ ಯಾವ ದಿಕ್ಕಿನಲ್ಲಿ ಸಾಗ್ತಾ ಇದೆ ಎಂಬುದನ್ನು ಚರ್ಚೆ ಮಾಡ್ತಾರೆ. ಮುಂದೆ ಏನ್ ಮಾಡಬೇಕು ಎಂಬುದನ್ನ ಮುಕ್ತವಾಗಿ ಚರ್ಚೆ ಮಾಡಿ, 28 ಕ್ಷೇತ್ರ ಗೆಲ್ಲುವ ಬಗ್ಗೆ ರಣತಂತ್ರ ರೂಪಿಸುವ ಬಗ್ಗೆ ಚರ್ಚೆ ಇದೆ ಎಂದರು.