Amazon Layoff: ಅಮೆಜಾನ್‌ನಿಂದ ಭಾರತದಲ್ಲೂ 1000 ನೌಕರರ ವಜಾ
ನವದೆಹಲಿ (ಜ.07): ಇ-ಕಾಮರ್ಸ್ ದೈತ್ಯ ಅಮೆಜಾನ್ ಈಗಾಗಲೇ ಪ್ರಪಂಚದಾದ್ಯಂತ 18 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲು ನಿರ್ಧರಿಸಿದೆ. ಇದರಲ್ಲಿ 1000 ಭಾರತೀಯರು ಇರಲಿದ್ದಾರೆ ಎಂದು ಮೂಲಗಳು ತಿಳಿಸಿದೆ. ಭಾರತದಲ್ಲಿ 1 ಲಕ್ಷ ಜನರು ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿದ್ದು, ಈ ಬೆಳವಣಿಗೆ ಕೇವಲ ಶೇ.1 ರಷ್ಟುಪರಿಣಾಮ ಬೀರಲಿದೆ. ಈ ಕುರಿತು ಯಾವುದೇ ಪ್ರಕ್ರಿಯೆ ನೀಡದ ಅಮೆಜಾನ್‌ನ ಭಾರತದ ವಕ್ತಾರರು, 18 ಲಕ್ಷ ಉದ್ಯೋಗಿಗಳನ್ನು ವಜಾ ಮಾಡಿದ್ದ ಜಸ್ಸಿ ಅವರ ನಿರ್ಧಾರವನ್ನು ಮಾತ್ರ ಪತ್ರಕರ್ತರ ಜತೆ ಹಂಚಿಕೊಂಡರು. ಡಿ.31, 2021ರ ಮಾಹಿತಿ ಪ್ರಕಾರ ಅಮೆಜಾನ್‌ನಲ್ಲಿ ಜಗತ್ತಿನಾದ್ಯಂತ 16 ಲಕ್ಷ ಅಲ್ಪಾವಧಿ ಹಾಗೂ ಪೂರ್ಣಾವಧಿ ಕೆಲಸ ಮಾಡುತ್ತಿದ್ದಾರೆ.
18 ಸಾವಿರ ಉದ್ಯೋಗಿಗಳ ಮನೆಗೆ ಕಳುಹಿಸಿದ ಅಮೇಜಾನ್: ವಾಷಿಂಗ್ಟನ್: ಆನ್‌ಲೈನ್ ಮಾರುಕಟ್ಟೆ ದೈತ್ಯ ಅಮೇಜಾನ್ ಮತ್ತೆ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. 18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ದಿಢೀರ್ ವಜಾಗೊಳಿಸಲು ಅಮೇಜಾನ್ ನಿರ್ಧರಿಸಿದ್ದು, ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಈ ವಿಚಾರವನ್ನು ಅಧಿಕೃತಗೊಳಿಸಿದೆ. ಅಮೇಜಾನ್ ಸಿಇಒ ಆಂಡಿ ಜಾಸ್ಸಿ ಅವರ ಅಧಿಕೃತ ಪ್ರಕಟಣೆಯನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಅಮೇಜಾನ್ ನ್ಯೂಸ್, ಈ ವಿಚಾರವನ್ನು ಖಚಿತಪಡಿಸಿದ್ದು, ಇದು ಅಮೇಜಾನ್‌ನ ಸಾವಿರಾರು ಉದ್ಯೋಗಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜಗತ್ತಿನ ಎಲ್ಲಾ ದೇಶಗಳನ್ನು ಬಾಧಿಸುತ್ತಿರುವ ಆರ್ಥಿಕ ಅನಿಶ್ಚಿತತೆ ಇದಕ್ಕೆ ಕಾರಣವಾಗಿದ್ದು, ಸಂಸ್ಥೆಯನ್ನು ಲಾಭದಾಯಕವಾಗಿ ಮುನ್ನಡೆಸಲು ಈ ಕ್ರಮ ಅಗತ್ಯ ಎಂದು ಹೇಳಿದ್ದಾರೆ. ಇದಕ್ಕೂ ಮೊದಲೆ ಅಮೇಜಾನ್ ನವೆಂಬರ್‌ನಲ್ಲಿ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಅನಿಶ್ಚಿತ ಆರ್ಥಿಕತೆ ಹಾಗೂ ಸಾಂಕ್ರಾಮಿಕ ರೋಗ ಕೋವಿಡ್ ಸಮಯದಲ್ಲಿ ಸಾಕಷ್ಟು ಉದ್ಯೋಗಿಗಳನ್ನು ವೇಗವಾಗಿ ನೇಮಕ ಮಾಡಿಕೊಂಡಿದೆ. ಹೀಗಾಗಿ ಸ್ವಲ್ಪ ಉದ್ಯೋಗ ಕಡಿತ ಮಾಡಲು ನಿರ್ಧರಿಸಿದ್ದು, 18,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿರುವುದಾಗಿ ಹೇಳಿದೆ.
ಉದ್ಯೋಗದ ವಜಾವನ್ನು ಸಹಿಸಿಕೊಳ್ಳುವುದು ಸಾವಿರಾರು ಜನರಿಗೆ ಕಷ್ಟಕರವೆಂದು ಸಂಸ್ಥೆಯ ನಾಯಕತ್ವ ತಿಳಿದಿದೆ. ಆದರೆ ನಾವು ಈ ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಈ ಉದ್ಯೋಗ ವಜಾದಿಂದ ಸಂಕಷ್ಟಕ್ಕೊಳಗಾಗುವರ ಬೆಂಬಲಕ್ಕೆ ನಾವಿದ್ದೇವೆ. ಅವರಿಗೆ ಪ್ರತ್ಯೇಕ ಪಾವತಿ, ಪರಿವರ್ತನೆಯ ಆರೋಗ್ಯವನ್ನು ಒಳಗೊಂಡಿರುವ ಪ್ಯಾಕೇಜ್‌ಗಳನ್ನು ಒದಗಿಸುತ್ತಿದ್ದೇವೆ ಎಂದು ಆಮೇಜಾನ್ ಜಾಸ್ಸಿ ಹೇಳಿದ್ದಾರೆ. ವಿಮಾ ಪ್ರಯೋಜನಗಳು ಮತ್ತು ಹೊರಗಿನಿಂದ ಉದ್ಯೋಗ ನಿಯೋಜನೆ ಬೆಂಬಲವನ್ನು ನೀಡುವ ಅಭಿಲಾಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.