6 ವರ್ಷದ ಬಳಿಕ ಮುನಿಸು ಮರೆತು ಪಾರ್ಟಿಯಲ್ಲಿ ಕಾಣಿಸಿಕೊಂಡ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್!
ಬೆಂಗಳೂರು: ಹಾಸ್ಯ, ಮನರಂಜನೆಯ ರಸದೌತಣ ನೀಡುವ ದಿ ಕಪಿಲ್ ಶರ್ಮಾ ಶೋ (The Kapil Sharma Show) ಮೂಲಕ ದೇಶದ ಮನೆಮಾತಾಗಿರುವ ಕಪಿಲ್ ಶರ್ಮಾ (Kapil Sharma) ಹಾಗೂ ಸುನಿಲ್ ಗ್ರೋವರ್ (Sunil Grover) ಮತ್ತೆ ಒಂದಾಗಿದ್ದಾರೆ. ಹೌದು, ಆರು ವರ್ಷದ ಮುನಿಸು, ವದಂತಿ, ಸ್ಪಷ್ಟನೆ ಬಳಿಕ ಇಬ್ಬರೂ ಒಂದಾಗಿದ್ದಾರೆ. ನೆಟ್‌ಫ್ಲಿಕ್ಸ್ ಕಾಮಿಡಿ ಶೋ (Netflix Show) ಪ್ರೋಮೊ ಬಿಡುಗಡೆ ಮಾಡಿರುವ ಕಪಿಲ್ ಶರ್ಮಾ, ಸುನಿಲ್ ಗ್ರೋವರ್ ಜತೆ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಆರು ವರ್ಷದ ಬಳಿಕ ಇಬ್ಬರು ಹಾಸ್ಯ ಕಲಾವಿದರು ಮುನಿಸು ಮರೆತು ಒಂದಾದಂತಾಗಿದೆ. ಕಪಿಲ್ ಮತ್ತು ಸುನೀಲ್ ಇತ್ತೀಚೆಗೆ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಅರ್ಚನಾ ಪುರಾನ್ ಸಿಂಗ್ ಅವರು ನೆಟ್‌ಫ್ಲಿಕ್ಸ್ ಆಯೋಜಿಸಿದ ಪಾರ್ಟಿಯ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಪಿಲ್ ಶರ್ಮಾ (Kapil Sharma) ಹಾಗೂ ಸುನಿಲ್ ಗ್ರೋವರ್ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಇರುವುದನ್ನು ಕಂಡು ಸಂತೋಷಪಟ್ಟಿದ್ದಾರೆ. “ಇದೊಂದು ಸುಂದರ ಪುನರ್ಮಿಲನʼʼಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಈ ಹಿಂದೆ ಬಿಡುಗಡೆಯಾಗಿದ್ದ ಪ್ರೋಮೊದಲ್ಲಿ ಮೊದಲು ಕಪಿಲ್ ಶರ್ಮಾ ಕಾಣಿಸಿಕೊಂಡಿದ್ದರು. “ಹಾಯ್ ಗೆಳೆಯರೆ, ನಾನು ಕಪಿಲ್ ಶರ್ಮಾ. ಶೀಘ್ರದಲ್ಲೇ ಹೊಸ ಶೋ ಹೊತ್ತು ನಿಮ್ಮೆದುರು ಬರುತ್ತೇನೆ” ಎಂದು ಕಪಿಲ್ ಶರ್ಮಾ ಹೇಳುತ್ತಾರೆ. ಆಗ ಸುನಿಲ್ ಗ್ರೋವರ್, “ನಾನು ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದಿದ್ದರು. ಆಗ ಕಪಿಲ್ ಶರ್ಮಾ, “ಸರಿ ಹಾಗಾದರೆ, ಇಬ್ಬರೂ ಬರೋಣ, 190ಕ್ಕೂ ಅಧಿಕ ದೇಶಗಳಿಗೆ ಬರೋಣ” ಎಂದಿದ್ದರು. ಹಾಗೆಯೇ ಇಬ್ಬರ ನಡುವಿನ ಸಂಭಾಷಣೆ ಮುಂದುವರಿಯುತ್ತದೆ.
ಇದೇ ವೇಳೆ ವಿಡಿಯೊ ಫ್ರೇಮ್‌ನಲ್ಲಿ ಹಾಸ್ಯ ಕಲಾವಿದರಾದ ರಾಜೀವ್, ಕಿಕು, ಕೃಷ್ಣಾ ಹಾಗೂ ನಟಿ ಅರ್ಚನಾ ಪೂರನ್ ಸಿಂಗ್ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ, ಕಾಮಿಡಿ ನೈಟ್ಸ್ ವಿತ್ ಕಪಿಲ್, ದಿ ಕಪಿಲ್ ಶರ್ಮಾ ಶೋ ಮೂಲಕವೇ ದೇಶದ ಮನೆಮಾತಾಗಿರುವ ಕಲಾವಿದರು ನೆಟ್‌ಫ್ಲಿಕ್ಸ್ ಶೋನಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ, ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಅವರು ಒಂದಾಗಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ದಿ ಕಪಿಲ್ ಶರ್ಮಾ ಶೋನಲ್ಲಿ ಸುನೀಲ್ ಗ್ರೋವರ್ ಅವರು ಮಾಡುತ್ತಿದ್ದ “ಡಾ ಮಶೂರ್ ಗುಲಾಟಿ” ಪಾತ್ರವು ಮನೆಮಾತಾಗಿತ್ತು.
ಇಬ್ಬರ ಮಧ್ಯೆ ಏಕೆ ಜಗಳ?
ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಅವರ ಮಧ್ಯೆ 2017ರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಆಸ್ಟ್ರೇಲಿಯಾದಲ್ಲಿ ಶೋ ಮುಗಿಸಿ, ಮುಂಬೈಗೆ ಆಗಮಿಸುವಾಗ ವಿಮಾನದಲ್ಲಿಯೇ ಕಪಿಲ್ ಶರ್ಮಾ ಅವರು ಸುನಿಲ್ ಗ್ರೋವರ್ ಅವರಿಗೆ ಬೈದಿದ್ದರು. ಇದಾದ ಬಳಿಕ ಇಬ್ಬರೂ ವಾಗ್ವಾದ ನಡೆಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ನಂತರ ಸುನಿಲ್ ಗ್ರೋವರ್ ಅವರು ದಿ ಕಪಿಲ್ ಶರ್ಮಾ ಶೋ ತೊರೆದಿದ್ದರು. ಜಗಳದ ಕುರಿತು ಸ್ಪಷ್ಟನೆ ನೀಡಿದ್ದ ಕಪಿಲ್ ಶರ್ಮಾ, “ನಾನು ಎಂದಿಗೂ ಸುನಿಲ್ ಗ್ರೋವರ್ ಜತೆ ಜಗಳ ಆಡಿಲ್ಲ, ಬೈದಿಲ್ಲ. ನಾನು ಅದ್ಭುತ ವ್ಯಕ್ತಿಗಳ ಜತೆ ಕೆಲಸ ಮಾಡಲು ಬಯಸುತ್ತೇನೆ. ಅವರಲ್ಲಿ ಸುನಿಲ್ ಗ್ರೋವರ್ ಕೂಡ ಒಬ್ಬರು” ಎಂದು ಹೇಳಿದ್ದರು.