ಕಾರಿನ ಮೇಲೆ ಜಾಹೀರಾತು ಫಲಕ ಬಿದ್ದು ತಾಯಿ-ಮಗಳ ದುರ್ಮರಣ
ಕಾರಿನಲ್ಲಿ ಮಾಲ್ಗೆಂದು ತೆರಳುತ್ತಿರುವಾಗ ಲಕ್ನೋದ ಏಕಾನಾ ಸ್ಟೇಡಿಯಂ ಬಳಿ ಜಾಹೀರಾತು ಫಲಕ ಬಿದ್ದು ತಾಯಿ-ಮಗಳು ಮೃತಪಟ್ಟಿದ್ದಾರೆ. ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಜೆ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಗಾಜಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ನಗರ ಕಾಲೋನಿ ನಿವಾಸಿಗಳಾದ ಪ್ರೀತಿ ಜಗ್ಗಿ (38) ಮತ್ತು ಅವರ ಮಗಳು ಏಂಜಲ್ (15) ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ವಾಹನದ ಮೇಲೆ ಜಾಹೀರಾತು ಫಲಕ ಬಿದ್ದಿದೆ ಎಂದು ಗೋಸೈಗಂಜ್ ಸಹಾಯಕ ಪೊಲೀಸ್ ಆಯುಕ್ತ (ಎಎಸ್ಪಿ) ಅಮಿತ್ ಕುಮಾವತ್ ತಿಳಿಸಿದ್ದಾರೆ.
ತಾಯಿ ಮತ್ತು ಮಗಳು ತಮ್ಮ ಚಾಲಕ ಸರ್ತಾಜ್ (28) ಅವರೊಂದಿಗೆ ಮಾಲ್ಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಎಸ್ಎಚ್ಒ (ಸುಶಾಂತ್ ಗಾಲ್ಫ್ ಸಿಟಿ) ಅತುಲ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.
ಕ್ರೀಡಾಂಗಣದ ಗೇಟ್ ನಂಬರ್ ಎರಡರ ಮುಂಭಾಗದಲ್ಲಿದ್ದ ಜಾಹೀರಾತು ಫಲಕ ಅವರ ವಾಹನದ ಮೇಲೆ ಬಿದ್ದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಸರ್ತಾಜ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಎಚ್ಒ ತಿಳಿಸಿದ್ದಾರೆ.