ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆ ಕ್ಷಮೆಯಾಚಿಸಿದ ನಟಿ ನಯನತಾರಾ..!
ಮುಂಬೈ: ‘ಅನ್ನಪೂರಣಿ’ ಸಿನಿಮಾದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆಯಲ್ಲಿ ಬಹುಭಾಷಾ ನಟಿ ನಯನತಾರಾ ಅವರು ಕ್ಷಮೆಯಾಚಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾನು ಸೇರಿದಂತೆ ‘ಅನ್ನಪೂರ್ಣಿ’ ಚಿತ್ರತಂಡದವರು ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಉದ್ದೇಶವನ್ನು ಹೊಂದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಸಕಾರಾತ್ಮಕ ಸಂದೇಶವನ್ನು ಹಂಚಿಕೊಳ್ಳುವ ನಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಅಜಾಗರೂಕತೆಯಿಂದಾಗಿ ನೋವನ್ನು ಉಂಟುಮಾಡಿರಬಹುದು. ಈ ಹಿಂದೆ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾದ, ಸೆನ್ಸಾರ್ಗೆ ಒಳಪಟ್ಟಿದ್ದ ಚಲನಚಿತ್ರವನ್ನು ಒಟಿಟಿ ವೇದಿಕೆಯಿಂದ ತೆಗೆದುಹಾಕುವುದನ್ನು ನಾವು ನಿರೀಕ್ಷಿಸಿರಲಿಲ್ಲ. ನಾನು ಸೇರಿದಂತೆ ಚಿತ್ರತಂಡದವರು ಇತರರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ’ ಎಂದು ತಿಳಿಸಿದ್ದಾರೆ.
ನಾನು ದೇವರನ್ನು ಸಂಪೂರ್ಣವಾಗಿ ನಂಬುತ್ತೇನೆ ಮತ್ತು ದೇಶದಾದ್ಯಂತ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಯಾರ ಭಾವನೆಗಳಿಗಾದರೂ ನೋವುಂಟು ಮಾಡಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
‘ಅನ್ನಪೂರ್ಣಿ’ ಚಿತ್ರದ ಉದ್ದೇಶ ಸುಧಾರಣೆ ಬಯಸುವುದಾಗಿತ್ತೇ ಹೊರತು, ದುಃಖವನ್ನು ಉಂಟುಮಾಡುವುದಲ್ಲ. ಕಳೆದ ಎರಡು ದಶಕಗಳಿಂದ ಚಿತ್ರೋದ್ಯಮದಲ್ಲಿ ನನ್ನ ಪ್ರಯಾಣ ಸಕಾರಾತ್ಮಕತೆಯನ್ನು ಹರಡುವುದರೊಂದಿಗೆ ಸಾಗಿದೆ ಎಂದು ಬರೆದುಕೊಂಡಿದ್ದಾರೆ.
‘ಅನ್ನಪೂರ್ಣಿ’ ಸಿನಿಮಾದ ಕೆಲವು ಸನ್ನಿವೇಶಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿರುವ ಸಂಘಪರಿವಾರ ನಯನತಾರಾ ವಿರುದ್ಧ ದೂರು ದಾಖಲಿಸಿತ್ತು.
ರಾಜವರ್ಧನ್ ನಟನೆಯ ‘ಪ್ರಣಯಂ’ ಚಿತ್ರದ ಟ್ರೈಲರ್ ರಿಲೀಸ್
ಲ್ಲಕ್ಕಿ, ಗಣಪ, ಪಾರಿಜಾತದಂಥ ಅದ್ಭುತ ಚಿತ್ರಗಳನ್ನು ನೀಡಿದ ಪರಮೇಶ್ ಅವರೀಗ ಮತ್ತೊಂದು ಇನ್ ಟೆನ್ಸ್ ಲವ್ ಸ್ಟೋರಿಯನ್ನು ಪ್ರಣಯಂ ಚಿತ್ರದ ಮೂಲಕ ಪ್ರೇಕ್ಷಕರಿಗೆ ನೀಡಲಿದ್ದಾರೆ. ಮನಸ್ವಿ ವೆಂಚರ್ಸ್ ಹಾಗೂ ಪಿಟು ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಪರಮೇಶ್ ಅವರೇ ಕಥೆ ಬರೆದು ನಿರ್ಮಿಸಿರುವ ಈ ಚಿತ್ರಕ್ಕೆ ಎಸ್. ದತ್ತಾತ್ರೇಯ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಬಿಚ್ಚುಗತ್ತಿ ಖ್ಯಾತಿಯ ನಟ ರಾಜವರ್ಧನ್, ನೈನಾ ಗಂಗೂಲಿ ಚಿತ್ರದ ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮಾಜಿ ಉಪ ಮೇಯರ್ ಮೋಹನ್ ರಾಜು ಟ್ರೈಲರ್ ರಿಲೀಸ್ ಮಾಡಿ ಈ ಟೈಟಲ್ ಕನ್ನಡದ ಜೊತೆ ತೆಲುಗು ಭಾಷೆಗೂ ಹತ್ತಿರವಾಗುವಂತಿದೆ. ಹಾಡು, ಕಾನ್ಸೆಪ್ಟ್ ಎರಡೂ ಚೆನ್ನಾಗಿದೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರದಲ್ಲಿ ಜಯಂತ್ ಕಾಯ್ಕಿಣಿ ಅವರು 3 ಹಾಡುಗಳನ್ನು ಬರೆದಿದ್ದು, ಮನೋಮೂರ್ತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ.ನಾಗೇಶ್ ಆಚಾರ್ಯ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಮನೋಮೂರ್ತಿ ಚಿತ್ರದಲ್ಲಿ 5 ಹಾಡಿದ್ದು, ಕ್ಯಾಮೆರಾ ವರ್ಕ್ ಅದ್ಭುತವಾಗಿ ಮೂಡಿಬಂದಿದೆ. ಪ್ರಣಯಂ ಅಂದ್ರೆ ಲವ್, ಅದನ್ನಿಲ್ಲಿ ಢಿಫರೆಂಟಾಗಿ ಹೇಳಿದ್ದಾರೆ. ಖಂಡಿತ ಈ ವರ್ಷದ ಮೊದಲ ಹಿಟ್ ಸಿನಿಮಾ ಆಗುತ್ತೆ ಎಂದರು. ನಂತರ ಜಯಂತ್ ಕಾಯ್ಕಿಣಿ ಮಾತನಾಡಿ ಪರಮೇಶ್ ತುಂಬಾ ಜೋಷ್ ಇರುವಂಥ ಪ್ರೊಡ್ಯೂಸರ್ ಸಿನಿಮಾಗಾಗಿ ತುಂಬಾ ಕಷ್ಟಪಡುತ್ತಾರೆ. ಮನೋಮೂರ್ತಿ ಹಾಗೂ ನಮ್ಮ ದಾಂಪತ್ಯಕ್ಕೆ 17 ವರ್ಷ ಆಯ್ತು. ಆಗಿದ್ದ ಕುತೂಹಲ, ಚಡಪಡಿಕೆ ಈಗಲೂ ಇದೆ. ಹಿಂದೆ ಪರಮೇಶ್ ಅವರ ಕರಿಯ, ಗಣಪ, ಪಾರಿಜಾತ ಚಿತ್ರಗಳಿಗೂ ನಾನೇ ಸಾಂಗ್ ಬರೆದಿದ್ದೆ. ಇದರಲ್ಲಿ 3 ಹಾಡನ್ನು ಬರೆದಿದ್ದೇನೆ ಎಂದು ಹೇಳಿದರು. ನಿರ್ದೇಶಕ ದತ್ತಾತ್ರೇಯ ಮಾತನಾಡುತ್ತ ನಾನು ಈ ಸ್ಕ್ರಿಪ್ಟ್ ಮಾಡಿಕೊಂಡು ಬಂದಾಗ ನಿರ್ಮಾಪಕರು ತುಂಬಾ ಚೆನ್ನಾಗಿ ಬಂದಿದೆ ಎಂದು ಖುಷಿಯಿಂದ ಹಗ್ ಮಾಡಿದರು. ಸುಮಾರು ಲೊಕೇಶನ್ ಗಳನ್ನು ನೋಡಿ ಕೊನೆಗೆ ಮಡಿಕೇರಿಯಲ್ಲಿ ನಮಗೆ ಬೇಕಾದ ಲೊಕೇಶನ್ ಸಿಕ್ತು. ಎಲ್ಲಾ ಲೆಜೆಂಡರಿಗಳ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಬಂದಿದೆ. ನಾಗೇಶ್ ನನಗೆ ಇನ್ನೊಂದು ಕಣ್ಣಿದ್ದ ಹಾಗೆ. ತುಂಬಾ ಚೆನ್ನಾಗಿ ಶೂಟ್ ಮಾಡಿಕೊಟ್ಟಿದ್ದಾರೆ. ಎಲ್ಲರೂ ಸೇರಿ ಒಳ್ಳೆಯ ಸಿನಿಮಾ ಕೊಟ್ಟಿದ್ದೇವೆ. ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.