ನಟಿ ಮತ್ತು ಸಂಸದೆ ಜಯಪ್ರದಾ ದಿಢೀರ್ ನ್ಯಾಯಾಲಯಕ್ಕೆ ಹಾಜರು; ಎಲ್ಲಾ ವಾರಂಟ್ ಗಳು ರದ್ದು.!
ಬಿಜೆಪಿಯ ಮಾಜಿ ಸಂಸದೆ ಮತ್ತು ನಟಿ ಜಯಪ್ರದಾ ಅವರಿಗೆ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ. ಅವರ ವಿರುದ್ದ ಹೊರಡಿಸಿದ್ದ ವಾರಂಟ್ ಅನ್ನು ನ್ಯಾಯಾಲಯ ಹಿಂಪಡೆದಿದೆ.
ಇಂದು ದಿಢೀರ್ ಆಗಿ ಶಾಸಕರು ಮತ್ತು ಸಂಸದರ ವಿಶೇಷ ಕೋರ್ಟ್ಗೆ ತೆರಳಿ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಜಯಪ್ರದಾ ಅವರ ವಿರುದ್ಧ ಜಾರಿಗೊಳಿಸಿದ ವಾರಂಟ್ ಹಿಂಪಡೆಯುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ನ್ಯಾಯಾಲಯ 20,000 ರೂ.ಗಳ ದಂಡದ ಜೊತೆ 4 ಶ್ಯೂರಿಟಿಗಳೊಂದಿಗೆ ಅವರ ಅರ್ಜಿಯನ್ನು ಸ್ವೀಕರಿಸಿದೆ. ಅಲ್ಲದೇ ತಮ್ಮ ವಿರುದ್ದದ ಪ್ರಕಣದಲ್ಲಿ ಪ್ರತಿ ವಿಚಾರಣೆ ಹಾಜರಾಗಬೇಕು ಎಂದು ಸೂಚಿಸಿ ಅವರ ವಿರುದ್ದ ಜಾರಿ ಮಾಡಿದ್ದ ಜಾಮೀನು ರಹಿತ ವಾರಂಟ್ಗಳನ್ನು ಹಿಂಪಡೆದಿದೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಇರುವುದರಿಂದ ನ್ಯಾಯಾಲಯ ಅವರ ವಿರುದ್ಧ 7 ಬಾರಿ ನಾನ್ ಬೇಲೇಬಲ್ ವಾರಂಟ್ ಜಾರಿ ಮಾಡಿತ್ತು. ಅಲ್ಲದೇ ಕಳೆದ ವಾರ ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದೂ ಘೋಷಿಸಿ ಮಾ.6 ರೊಳಗೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಆದೇಶ ಕೂಡಾ ಮಾಡಲಾಗಿತ್ತು.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ: ರಾಮಪುರದ ಮಾಜಿ ಸಂಸದೆ ಜಯಪ್ರದಾ ವಿರುದ್ಧ 2019ರ ಲೋಕಸಭೆ ಚುನಾವಣೆ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಕೆಮಾರಿ ಮತ್ತು ಸ್ವರ್ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ನೂರಪುರ ಗ್ರಾಮದಲ್ಲಿ ರಸ್ತೆ ಉದ್ಘಾಟನೆ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕೈಮ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ಲಿಯಾ ಮಿಶ್ರಾ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು.