ಕೆಎಸ್‌ಆರ್‌ಟಿಸಿ ಬಸ್ ಮತ್ತು ಜೀಪ್ ನಡುವೆ ಅಪಘಾತ ; ನಾಲ್ವರು ಸಾವು!
ಮೈಸೂರು: ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ (KSRTC Electric Bus) ಮತ್ತು ಜೀಪ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ (Road Accident) ನಾಲ್ವರು ಮೃತಪಟ್ಟಿದ್ದಾರೆ. ಹುಣಸೂರು ಪಟ್ಟಣದ ಹುಣಸೂರಿನ ಆರ್.ಟಿ.ಒ. ಕಚೇರಿ ಬಳಿ ಈ ಘಟನೆ ಸಂಭವಿಸಿದೆ. ಮೃತರಲ್ಲಿ ಜೀಪು ಚಾಲಕನ ಕೂಡಾ ಸೇರಿದ್ದಾನೆ.
ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬ್ಯಾಟರಿ ಚಾಲಿತ ಬಸ್ ಮತ್ತು ಹುಣಸೂರಿನಿಂದ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಜೀಪಿನಲ್ಲಿ ಒಟ್ಟು ಆರು ಮಂದಿ ಪ್ರಯಾಣ ಬೆಳೆಸುತ್ತಿದ್ದರು. ಇವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೀಪಿನಲ್ಲಿದ್ದವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಹುಣಸೂರು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೈಕ್‌ಗೆ ಡಿಕ್ಕಿ ಹೊಡೆದ ಕಾರು; ಇಬ್ಬರಿಗೆ ಗಂಭೀರ ಗಾಯ
ಶಿರಸಿ: ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದಾರೆ. ಶಿರಸಿ ತಾಲೂಕಿನ ಹನುಮಂತಿ ಬಳಿಯ ಹಾಲಿನ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ.
ಸಿದ್ದಾಪುರ ತಾಲೂಕಿನ ಹೊಳೆಜಡ್ಡಿಯ ನಾಗಪತಿ ಗೌಡಾ ಹಾಗು ಹುಲಿಯಾ ಗೌಡಾ ಗಾಯಗೊಂಡವರು. ಗಾಯಾಳುಗಳನ್ನು ಶಿರಸಿ ಪಂಡಿತ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಬನವಾಸಿ ಭಾಗದಲ್ಲಿ ಒಂದು ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿಗೆ ಡಿಕ್ಕಿ ಹೊಡೆದ ಕಾರು ನಿಲ್ಲಿಸಿದೆ ಪರಾರಿಯಾಗಿತ್ತು. ಇದೀಗ ಶಿರಸಿ ತಾಲೂಕಿನಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ.