ಬಸ್, ಟಾಟಾ ಸುಮೋ ನಡುವೆ ಬೀಕರ ಅಪಘಾತ – ಐವರು ಸ್ಥಳದಲ್ಲೇ ಸಾವು
ಗದಗ: ಬಸ್ (Bus) ಹಾಗೂ ಟಾಟಾ ಸುಮೋ ನಡುವೆ ಮುಖಾಮುಖಿ ಡಿಕ್ಕಿಯಾಗಿ (Accident) ಐವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನೆರೇಗಲ್ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ.
ಟಾಟಾ ಸುಮೋದಲ್ಲಿ ಗಜೇಂದ್ರಗಡ (Gajendragad) ಕಡೆಯಿಂದ ಶಿರಹಟ್ಟಿ ಫಕಿರೇಶ್ವರ ಮಠಕ್ಕೆ ತೆರಳುತ್ತಿದ್ದರು. ಈ ವೇಳೆ ಗದಗದಿಂದ (Gadag) ಗಜೇಂದ್ರಗಡಕ್ಕೆ ಹೊರಟಿದ್ದ ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಟಾಟಾ ಸುಮೋದಲ್ಲಿದ್ದ ಐವರು ಸಾವಿಗೀಡಾಗಿದ್ದಾರೆ. ಮೃತರನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಿ ನಿವಾಸಿಗಳು ಎಂದು ತಿಳಿದು ಬಂದಿದೆ. ಗಾಯಗೊಂಡ ಮಕ್ಕಳನ್ನು ಮಹೇಶ್, ದಿಂಗಾಲೇಶ್ವರ, ಪ್ರಭುದೇವ್ ಹಾಗೂ ಅನುಶ್ರೀ ಎಂದು ಗುರುತಿಸಲಾಗಿದೆ. ಮೃತಪಟ್ಟವರ ಹೆಸರು ತಿಳಿದು ಬಂದಿಲ್ಲ.
ಗಾಯಗೊಂಡಿರುವ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಗದಗದ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮಿಜಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಟಾಟಾ ಸುಮೋ ಚಾಲಕನ ಅತಿ ವೇಗದಿಂದ ಈ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಪಘಾತದ ವೇಳೆ ಬಸ್ ಚಾಲಕ ಆದಷ್ಟು ಅಪಘಾತವನ್ನು ತಪ್ಪಿಸಲು ಯತ್ನಿಸಿದ್ದಾನೆ. ಆದರೆ ಟಾಟಾ ಸುಮೋ ಚಾಲಕನಿಗೆ ವಾಹನ ನಿಯಂತ್ರಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಬಸ್‍ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ನೆರೇಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ನೇಹಿತರೊಂದಿಗೆ ದೈಹಿಕ ಸಂಪರ್ಕಕ್ಕೆ ಪತಿಯಿಂದ ಒತ್ತಾಯ – ಠಾಣೆ ಮೆಟ್ಟಿಲೇರಿದ ಮಹಿಳೆ
ಬೆಂಗಳೂರು: ಸ್ನೇಹಿತರ ಜೊತೆ ದೈಹಿಕ ಸಂಪರ್ಕ ಬೆಳೆಸುವಂತೆ ವಿಕೃತ ಪತಿಯೊಬ್ಬ (Husband) ಪತ್ನಿಗೆ ಹಿಂಸೆ ನೀಡುತ್ತಿದ್ದ ವಿಚಿತ್ರ ಪ್ರಕರಣ ಅಮೃತಹಳ್ಳಿ (Amrithhalli) ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಂಡನ ವಿಚಿತ್ರ ಬೇಡಿಕೆ ನಿರಾಕರಿಸಿದ್ದಕ್ಕೆ ಆತ ಪತ್ನಿಯ ಮೇಲೆ ಹಲ್ಲೆ ಸಹ ಮಾಡಿದ್ದಾನೆ. ಅಲ್ಲದೇ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಇದೀಗ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಮಂಗಳೂರು ಮೂಲದ ವಿಕೃತ ಪತಿ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾಳೆ. ದೂರಿನಲ್ಲಿ ಪತಿ ತನ್ನ ಮೂರು ಜನ ಸ್ನೇಹಿತರ ಜೊತೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.