Aanvi Kamdar: ವಿಡಿಯೋ ಮಾಡುವ ವೇಳೆ 300 ಅಡಿ ಎತ್ತರದ ಫಾಲ್ಸ್ನಿಂದ ಬಿದ್ದು ಇನ್ಸ್ಟಾ ತಾರೆ ಸಾವು
ಮುಂಬೈ ಮೂಲದ ಟ್ರಾವೆಲ್ ಪ್ರಭಾವಿ ಆನ್ವಿ ಕಾಮ್ದಾರ್ (Aanvi Kamdar 27) ಅವರು Instagram ರೀಲ್ ಚಿತ್ರೀಕರಣ ಮಾಡುವಾಗ ಕಮರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಮುಂಬೈ: ರೀಲ್ಸ್ ಮೂಲಕ ಖ್ಯಾತಿ ಗಳಿಸಿದ್ದ ಮುಂಬೈ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಅನ್ವಿ ಕಾಮ್ದಾರ್ ಅವರು ಬುಧವಾರ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ವಿಡಿಯೋ ಮಾಡುವಾಗ ಜಲಪಾತದ ಕಮರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
27 ವರ್ಷದ ರೀಲ್ಸ್ ಸ್ಟಾರ್ ಅನ್ವಿ ಅವರು ತಮ್ಮ ಏಳು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಮಂಗಳವಾರ ಪಕ್ಕದ ರಾಯಗಡ ಜಿಲ್ಲೆಯ ಮಂಗಾಂವ್‌ನ ಪ್ರಸಿದ್ಧ ಕುಂಭೆ ಜಲಪಾತಕ್ಕೆ ತೆರಳಿದ್ದರು. ಜಲಪಾತದ ಬಳಿ ವಿಡಿಯೋ ಮಾಡುತ್ತಿದ್ದ ವೇಳೆ 300 ಅಡಿ ಆಳದ ಕಮರಿಗೆ ಬಿದ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಮಂಗಾಂವ್ ಪೊಲೀಸ್ ಠಾಣೆಯ ಅಧಿಕಾರಿ ಪ್ರಕಾರ, ಮುಂಬೈನ ಮುಲುಂಡ್ ಪ್ರದೇಶದ ನಿವಾಸಿ ಕಾಮ್ದಾರ್ ಮಳೆಯ ನಡುವೆ ತಮ್ಮ ಸ್ನೇಹಿತರೊಂದಿಗೆ ಸುಂದರವಾದ ಜಲಪಾತಕ್ಕೆ ಬಂದಿದ್ದರು ಮತ್ತು ಸುತ್ತಮುತ್ತಲಿನ ರಮಣೀಯ ದೃಶ್ಯಗಳನ್ನು ವಿಡಿಯೋ ಮಾಡುತ್ತಿದ್ದಾಗ ಕಾಲು ಜಾರಿ ಕಮರಿಗೆ ಬಿದ್ದಿದ್ದಾರೆ ಎಂದು ಅವರು ಹೇಳಿದ್ದಾರೆ.
ಅನ್ವಿ ಕಮರಿಗೆ ಬಿದ್ದ ಬಗ್ಗೆ ಆಕೆಯ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಆರು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಅನ್ವಿಯನ್ನು ಕಮರಿಯಿಂದ ಹೊರತೆಗೆಯಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಅನ್ವಿ ಅವರನ್ನು ಹತ್ತಿರದ ಮಂಗಾವ್ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ನಂತರ ತಹಶೀಲ್ದಾರ್ ಮತ್ತು ಮನಗಾಂವ್ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಪ್ರವಾಸಿಗರು ಮತ್ತು ನಾಗರಿಕರಿಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಮೂವರು ಬಾಲಕರ ಬಂಧನ
ಆಂಧ್ರಪ್ರದೇಶ: ನಂದ್ಯಾಲ್ ಜಿಲ್ಲೆಯಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 12 ಮತ್ತು 13 ವರ್ಷದ ಮೂವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಾಲಕರು ಫೋನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡಿದ್ದು, ಅದರಲ್ಲಿರುವ ದೃಶ್ಯಗಳನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.
ಸ್ಥಳೀಯ ದೇವಸ್ಥಾನದ ಅವರಣದಲ್ಲಿ ಈ ಹೀನಕೃತ್ಯ ನಡೆದಿದ್ದು, ಒಪ್ಪದ ಬಾಲಕಿಯನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಘೋರ ಕೃತ್ಯ ಎಸಗಿದ ಬಳಿಕ ಆರೋಪಿಯ ತಂದೆ ಮತ್ತು ಚಿಕ್ಕಪ್ಪ ಸಾಕ್ಷ್ಯ ಮರೆಮಾಚಲು ಅಪ್ರಾಪ್ತ ಬಾಲಕಿಯ ಶವವನ್ನು ತೆಗೆದುಕೊಂಡು ಹೋಗಿ ಬಂಡೆಗೆ ಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಬಾಲಕರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಸ್ತುತ ಬಂಧನದಲ್ಲಿದ್ದಾರೆ.
ನದಿಯಿಂದ ಬಾಲಕಿಯ ಶವವನ್ನು ಹೊರತೆಗೆಯಲು ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಿದ್ದಾರೆ ಎಂದು ಆಂಧ್ರಪ್ರದೇಶದ ಗೃಹ ಸಚಿವ ವಿ ಅನಿತಾ ಘೋಷಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್‌ಕೌಂಟರ್‌ಗೆ 12 ನಕ್ಸಲರು ಬಲಿ
ಮುಂಬೈ: ಮಹಾರಾಷ್ಟ್ರದ (Maharashtra) ಕಂಕೇರ್ ಬಳಿಯ ಛತ್ತೀಸ್‌ಗಢ-ಗಡ್‌ಚಿರೋಲಿ ಗಡಿಯಲ್ಲಿರುವ ವಂಡೋಲಿ ಗ್ರಾಮದಲ್ಲಿ ಪೊಲೀಸ್ ಸಿ60 ಕಮಾಂಡೋಗಳು ನಡೆಸಿದ ಕಾರ್ಯಾಚರಣೆಯಲ್ಲಿ 12 ನಕ್ಸಲರು (Naxals) ಸಾವನ್ನಪ್ಪಿದ್ದಾರೆ.
ಕಾರ್ಯಾಚರಣೆ ವೇಳೆ ಸಬ್‌ಇನ್‌ಸ್ಪೆಕ್ಟರ್ ಸತೀಶ್ ಪಾಟೀಲ್ ಅವರ ಎಡ ಭುಜಕ್ಕೆ ಗುಂಡು ತಗುಲಿದೆ. ಈ ಪ್ರದೇಶದಲ್ಲಿ 12ರಿಂದ 15 ನಕ್ಸಲರು ಕ್ಯಾಂಪ್ ಮಾಡುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಆಧರಿಸಿ, ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಲಾಗಿತ್ತು.
ಎಲ್ಲಾ 12 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಯಂಚಾಲಿತ ಮೆಷಿನ್ ಗನ್‌ಗಳು, ಭಾರೀ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ನಕ್ಸಲೀಯರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಎನ್‌ಕೌಂಟರ್‌ನಲ್ಲಿ ಸಬ್‌ಇನ್ಸ್‌ಪೆಕ್ಟರ್ ಮತ್ತು ಜವಾನ ಗಾಯಗೊಂಡಿದ್ದಾರೆ. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ರಾಜ್ಯ ಸರ್ಕಾರದ ಪರವಾಗಿ ಗಡ್ಚಿರೋಲಿ ಪೊಲೀಸರಿಗೆ 51 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿದೆ ಎಂದು ಹೇಳಿದ್ದಾರೆ.