ವಿವಾಹಿತ ಮಹಿಳೆಯೊಂದಿಗೆ ಇದ್ದ ಫೋಟೋವನ್ನು ಸ್ಟೇಟಸ್ ನಲ್ಲಿ ಹಾಕಿದ ಯುವಕ ; ವೈರಲಾದ ಬಳಿಕ ಇಬ್ಬರೂ ಆತ್ಮಹತ್ಯೆಗೆ ಶರಣು..!
ಮೈಸೂರು, ಡಿ.20: ವಿವಾಹಿತ ಮಹಿಳೆಯೊಂದಿಗೆ (Married Woman) ಯುವಕ ಸಲುಗೆ ಬೆಳೆಸಿದ್ದು ಇಂದು ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಹಾಗೂ ಯುವಕನ ಫೋಟೋ ವೈರಲ್ ಆಗಿದ್ದು ಇದರಿಂದ ಹೆದರಿ ಮಹಿಳೆ ಮತ್ತು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು (Mysuru) ಜಿಲ್ಲೆ ಹುಣಸೂರು ಪಟ್ಟಣದಲ್ಲಿ ನಡೆದಿದೆ. ಹುಣಸೂರು ಪಟ್ಟಣದ ಕಲ್ಕುಣಿಗೆ ನಿವಾಸಿಗಳಾದ ಶೃತಿ(28), ಮುರಳಿ(20) ಆತ್ಮಹತ್ಯೆ ಮಾಡಿಕೊಂಡವರು.
ವಿವಾಹಿತ ಮಹಿಳೆ ಜೊತೆ ಯುವಕ ಸಲುಗೆಯಿಂದ ಇದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ಕಣ್ಣಿಗೆ ಬೀಳುತ್ತಿದ್ದಂತೆ ಮನನೊಂದ ಗೃಹಿಣಿ ಶೃತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೃತಿ ಆತ್ಮಹತ್ಯೆ ಬೆನ್ನಲ್ಲೇ ಮುರಳಿ ಕೂಡ ನೇಣಿಗೆ ಶರಣಾಗಿದ್ದಾನೆ. ಮೃತರಿಬ್ಬರೂ ಹುಣಸೂರು ಪಟ್ಟಣದ ಕಲ್ಕುಣಿಗೆ ನಿವಾಸಿಗಳು ಎಂದು ತಿಳಿದುಬಂದಿದೆ.
ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಮುರಳಿ, ತಾನು ಶೃತಿ ಜೊತೆ ಇದ್ದ ಫೋಟೋವನ್ನು ಅಪ್ಲೋಡ್ ಮಾಡಿ ಸ್ಟೇಟಸ್ನಲ್ಲಿ ಇಟ್ಟುಕೊಂಡಿದ್ದ. ಈ ಫೋಟೋ ವೈರಲ್ ಆಗಿದೆ. ಬಳಿಕ ಇದು ಶೃತಿ ಹಾಗೂ ಮುರಳಿ ಮನೆಯವರಿಗೂ ಮುಟ್ಟಿದೆ. ಇದೇ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ಆಗಿದೆ. ಇದರಿಂದ ಹೆದರಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಎರಡೂ ಕುಟುಂಬದವರು ಪರಸ್ಪರ ದೂರು ನೀಡಿದ್ದಾರೆ.
ಡಿಸಿಪಿ ಕಚೇರಿ ಬಳಿ ವ್ಹೀಲಿಂಗ್ ಮಾಡಿ ಪುಂಡಾಟ; ಕಾರ್ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ವಿಡಿಯೋ ಸೆರೆ
ಬೆಂಗಳೂರು, ಡಿ.20: ನಗರದ ಹಲವು ರಸ್ತೆಗಳಲ್ಲಿ ರಾತ್ರಿಯಾಗ್ತಿದ್ದಂತೆಯೇ ಕೆಲ ಯುವಕರ ತಂಡ ಆಕ್ಟೀವ್ ಆಗುತ್ತಿದೆ. ಡಿಸಿಪಿ ಕಚೇರಿ ಸಮೀಪದಲ್ಲೇ ಪುಂಡರು ವ್ಹೀಲಿಂಗ್ (Wheeling) ಮಾಡಿ ಪುಂಡಾಟ ಮೆರೆದಿದ್ದಾರೆ.
ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಬಳಿಯ ಸೌತ್ ಎಂಡ್ ಸರ್ಕಲ್ ಬಳಿ ರಾತ್ರಿ 11ಗಂಟೆ ಸುಮಾರಿಗೆ ಮೂರು ನಾಲ್ಕು ಡಿಯೋ ಬೈಕ್ಗಳಲ್ಲಿ ಯುವಕರು ವ್ಹೀಲಿಂಗ್ ಮಾಡಿ ಸವಾರರಿಗೆ ತೊಂದರೆ ಕೊಟ್ಟಿದ್ದಾರೆ. ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳಬಾರದು ಎಂದು ನಂಬರ್ ಪ್ಲೇಟ್ ಇಲ್ಲದ ಬೈಕ್ಗಳಲ್ಲಿ ವ್ಹೀಲಿಂಗ್ ಮಾಡಿದ್ದಾರೆ. ಅಜಾಗರೂಕತೆ ಚಾಲನೆ, ವ್ಹೀಲಿಂಗ್ ಮಾಡಿ ಬೇರೆ ಸವಾರರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ. ಸದ್ಯ ಕಾರೊಂದರ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಯುವಕರ ಪುಂಡಾಟ ಸೆರೆಯಾಗಿದೆ.