ಮಡಿಕೇರಿ ಬೆಟ್ಟ ನೋಡಲು ತೆರಳಿದ್ದ ಯುವಕ ಬೆಟ್ಟದಲ್ಲೇ ಕುಸಿದು ಬಿದ್ದು ದುರ್ಮರಣ...!
ಮೃತ ದುರ್ದೈವಿಯನ್ನು ಜತಿನ್ ಕುಮಾರ್ (25) ಎಂದು ಗುರುತಿಸಲಾಗಿದ್ದು, ಈತ ಹರಿಯಾಣ (Haryana) ಮೂಲದ ನಿವಾಸಿಯಾಗಿದ್ದಾನೆ. ಕೊಡಗು ಜಿಲ್ಲೆಯ ಮಡಿಕೇರಿ ತಾ. ತಡಿಯಂಡಮೋಳು ಬೆಟ್ಟ ವೀಕ್ಷಣೆ ವೇಳೆ ಈ ಅವಘಡ ಸಂಭವಿಸಿದೆ.
ಬೆಂಗಳೂರಿನ ಖಾಸಗಿ ಕಂಪನಿ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜತಿನ್ ಕುಮಾರ್, ತನ್ನ ಸ್ನೇಹಿತರೊಂದಿಗೆ ಮಡಿಕೇರಿಗೆ ಆಗಮಿಸಿದ್ದನು. ಅಂತೆಯೇ ಭಾನುವಾರ ಬೆಟ್ಟದ ಮೇಲೆ ತಲುಪಿದಾಗ ಎದೆನೋವು ಕಾಣಿಸಿಕೊಂಡಿದೆ. ಕೆಲಹೊತ್ತಿನಲ್ಲೇ ಎದೆ ನೋವು ಜಾಸ್ತಿ ಆಗಿ ಜತಿನ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಯುವಕ ಪ್ರಾಣಬಿಟ್ಟ ವಿಚಾರವನ್ನು ಸ್ನೇಹಿತರು ಕೂಡಲೇ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ತಿಳಿಸಿದ್ದು, ಅವರು ಸ್ಥಳಕ್ಕೆ ದೌಡಾಯಿಸಿದರು. ನಂತರ ಬೆಟ್ಟದ ತುದಿಯಿಂದ ಕಚ್ಚಾರಸ್ತೆಯಲ್ಲಿ ಹರಸಾಹಸಪಟ್ಟು ಮೃತದೇಹವನ್ನು ಪೊಲೀಸರು ತಂದಿದ್ದಾರೆ. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರುಗಳ ಮುಖಾಮುಖಿ ಡಿಕ್ಕಿ – ನೌಕಾಪಡೆ ಅಧಿಕಾರಿಯ ಪತ್ನಿ, ಮಗಳು ಸೇರಿ ಐವರ ಸಾವು
ಯಾದಗಿರಿ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ (Accident) ಪರಿಣಾಮ ನೌಕಾಪಡೆ (Indian Navy) ಅಧಿಕಾರಿಯ ಪತ್ನಿ ಹಾಗೂ ಮಗಳು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ತೆಲಂಗಾಣದ (Telangana) ನಾರಾಯಣಪೇಟೆಯ ಜಕ್ಲೇರ್ ಎಂಬಲ್ಲಿ ನಡೆದಿದೆ.
ಜಿಲ್ಲೆಯ ಸೈದಾಪುರದ ಗ್ರಾಮದ ಮೌಲಾಲಿ, ಖಲೀಲ್ ಹಾಗೂ ಬಸಮ್ಮ ಮೃತಪಟ್ಟಿದ್ದಾರೆ. ಮತ್ತೊಂದು ಕಾರ್‌ನಲ್ಲಿದ್ದ ಮಹಾರಾಷ್ಟ್ರ ಮೂಲದ ಪ್ರಬೀತಾ ಹಾಗೂ ಅಸ್ಮಿತಾ ಎಂಬವರು ಸಾವಿಗೀಡಾಗಿದ್ದಾರೆ. ಕರ್ನಾಟಕದ ಕಾರವಾರದಿಂದ ವಿಶಾಖಪಟ್ಟಣಕ್ಕೆ ವರ್ಗಾವಣೆಗೊಂಡಿದ್ದ ಮಹಾರಾಷ್ಟ್ರ ಮೂಲದ ಭಾರತೀಯ ನೌಕಾಪಡೆಯ ಅಧಿಕಾರಿ ದೀಪಕ್ ಪ್ರಯಾಣಿಸುತ್ತಿದ್ದರು. ಹೆಂಡತಿ, ಮಗಳೊಂದಿಗೆ ವಿಶಾಖಪಟ್ಟಣಂಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ.
ಘಟನೆಯಲ್ಲಿ ದೀಪಕ್ ರಾವ್‍ಗೆ ಗಂಭೀರ ಗಾಯವಾಗಿದ್ದು, ಮಕ್ತಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಮಕ್ತಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.