ಕ್ರಿಕೆಟ್ ಆಡುತ್ತಿರುವಾಗಲೇ ಕುಸಿದು ಬಿದ್ದು ಯುವಕ ಸಾವು! ಇಲ್ಲಿದೆ ವಿಡಿಯೋ

ನೋಯ್ಡಾ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣ ಅಧಿಕವಾಗುತ್ತಿದೆ. ಅದರಲ್ಲೂ ಯುವ ಜನತೆ ಹೆಚ್ಚಾಗಿ ಬಲಿಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಇದೀಗ ಉತ್ತರ ಪ್ರದೇಶದ ನೋಯ್ಡಾದಲ್ಲಿ ಕ್ರಿಕೆಟ್ ಆಡುತ್ತಿರುವಂತೆಯೇ ಕುಸಿದು ಬಿದ್ದು ಎಂಜಿನಿಯರ್ ಮೃತಪಟ್ಟ ಆಘಾತಕಾರಿ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಭಾನುವಾರ (ಜನವರಿ 7) ಈ ಘಟನೆ ಸಂಭವಿಸಿದೆ. ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವಿಕಾಸ್ ನೇಗಿ ಎನ್ನುವ ಎಂಜಿನಿಯರ್ ಮೃತಪಟ್ಟವರು. ಅವರಿಗೆ 36 ವರ್ಷ ವಯಸ್ಸಾಗಿತ್ತು. ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ನೇಗಿ ತಮ್ಮ ಬ್ಯಾಟಿಂಗ್ ಪಾಲುದಾರ ಉಮೇಶ್ ಕುಮಾರ್ ಅವರನ್ನು ಭೇಟಿಯಾಗಲು ಪಿಚ್ ಮಧ್ಯ ಭಾಗಕ್ಕೆ ಬಂದಿದ್ದರು. ಇದ್ದಕ್ಕಿದ್ದಂತೆ ಅಲ್ಲಿಯೇ ಕುಸಿದು ಬಿದ್ದರು. ಕೂಡಲೇ ಸಹ ಆಟಗಾರರು ಅವರತ್ತ ಧಾವಿಸಿದರು. ತಕ್ಷಣ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನೂ ಮಾಡಲಾಯಿತು. ಆದರೆ ಅವರು ಅಷ್ಟರಲ್ಲಿ ಅಸುನೀಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಕಾಸ್ ನೇಗಿ ಅವರ ಮೃತದೇಹವನ್ನು ಪೋಸ್ಟ್ ಮಾರ್ಟಮ್ ನಡೆಸಲಾಯಿತು. ಇದರಲ್ಲಿ ಸಾವಿಗೆ ಹೃದಯಾಘಾತ ಕಾರಣ ಎನ್ನುವ ಅಂಶ ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಮೂಲಗಳ ಪ್ರಕಾರ, ವಿಕಾಸ್ ನೇಗಿ ಅವರಿಗೆ ಈ ಹಿಂದೆ ಕೋವಿಡ್ ಬಾಧಿಸಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು. ಫಿಟ್‌ನೆಸ್‌ಗಾಗಿ ಅವರು ಬಿಡುವಿನ ವೇಳೆಯಲ್ಲಿ ದೆಹಲಿ ಮತ್ತು ನೋಯ್ಡಾಗಳಲ್ಲಿ ಕ್ರಿಕೆಟ್ ಆಡುತ್ತಿದ್ದರು.
Death due to heart attack in Noida: One run took the life of a batsman Vikas Negi (36)
— زماں (@Delhiite_) January 9, 2024
- Engineer fell on the pitch while playing cricket.pic.twitter.com/QptWuFFV2w
ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಸಾವು
ಕೆಲವು ತಿಂಗಳ ಹಿಂದೆ ನೊಯ್ಡಾದಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿತ್ತು. ಕಳೆದ ವರ್ಷ ಜೂನ್‌ನಲ್ಲಿ ಸೆಕ್ಟರ್ 21 ಎಯಲ್ಲಿರುವ ನೊಯ್ಡಾ ಸ್ಟೇಡಿಯಂನಲ್ಲಿ 52 ವರ್ಷದ ಮಹೇಂದ್ರ ಶರ್ಮಾ ಅವರು ಬ್ಯಾಡ್ಮಿಂಟನ್ ಆಡುತ್ತಿದ್ದರು. ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಅವರು ಕುಸಿದು ಬಿದ್ದಿದ್ದರು. ಕೂಡಲೇ ಸ್ಟೇಡಿಯಂನಲ್ಲಿದ್ದ ತುರ್ತು ವೈದ್ಯಕೀಯ ತಂಡ ಆಗಮಿಸಿ ತಪಾಸಣೆ ಮಾಡಿತ್ತು. ಆದರೂ ಮಹೇಂದ್ರ ಶರ್ಮಾ ಅವರು ಸುಧಾರಿಸಿಕೊಳ್ಳದ ಕಾರಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟೊತ್ತಿಗಾಗಲೇ ಮಹೇಂದ್ರ ಶರ್ಮಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಇನ್ನೊಂದು ಅಂತಹದ್ದೇ ಪ್ರಕರಣ ಎದುರಾಗಿದೆ.
ಕಳವಳಕಾರಿ ಬೆಳವಣಿಗೆ
ಕೆಲವು ವರ್ಷಗಳಿಂದ ಯುವ ಜನತೆಯ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಹೃದ್ರೋಗವು ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣ ಎನ್ನುವುದನ್ನು ಗುರುತಿಸಲಾಗಿದೆ ಮತ್ತು ಐದು ವರ್ಷಗಳಲ್ಲಿ ಭಾರತದಲ್ಲಿ ಅದರ ಹರಡುವಿಕೆ ಕಳವಳಕಾರಿ ಪ್ರಮಾಣದಲ್ಲಿ ವೃದ್ಧಿಸಿದೆ ಎಂದು ತಜ್ಞರು ಹೇಳಿದ್ದಾರೆ. ಹೃದಯ ಸ್ತಂಭನ ಮತ್ತು ಅದಕ್ಕೆ ಸಂಬಂಧಿತ ಸಮಸ್ಯೆಗಳ ಹೆಚ್ಚಳಕ್ಕೆ ನಮ್ಮ ವೇಗದ ಜೀವನಶೈಲಿ ಮತ್ತು ಅಭ್ಯಾಸಗಳಲ್ಲಿನ ಬದಲಾವಣೆಗಳೇ ಪ್ರಮುಖ ಕಾರಣ ಎಂದು ಅವರು ಎಚ್ಚರಿಸುತ್ತಾರೆ. ಹೃದಯಾಘಾತವು ಈ ಹಿಂದೆ ವಯಸ್ಸಾದ ವ್ಯಕ್ತಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿತ್ತು. ಆದರೆ ಈಗ ಅವು 30ರಿಂದ 40 ವರ್ಷದೊಳಗಿನ ಯುವ ಜನತೆ ಮೇಲೆ ಪರಿಣಾಮ ಬೀರುತ್ತಿದೆ.