ಮಹಿಳೆಯರ ಹಿಂಸಿಸುವ ಅಪರಾಧಿಗಳಿಗೆ ಖಡಕ್ ವಾರ್ನಿಂಗ್! ಯಮರಾಜ ನಿಮಗಾಗಿ ಕಾಯ್ತಿದ್ದಾನೆ.. ಎಂದ ಯೋಗಿ ಆದಿತ್ಯನಾಥ್
ನವದೆಹಲಿ (ಸೆ.18): ರಾಜ್ಯದಲ್ಲಿ ಮಹಿಳೆಯರ ಮೇಲೆ ಹಲ್ಲೆ, ಕಿರುಕುಳದಂಥ ಯಾವುದೇ ಘಟನೆಗಳು ಆಗಕೂಡದು, ಇಂಥ ಅಪರಾಧ ಮಾಡಿದ್ದು ಗೊತ್ತಾದರೆ ಅವರಿಗೆ ಯಮರಾಜ ಕಾಯುತ್ತಿದ್ದಾನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪರಾಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಂಬೇಡ್ಕರ್ನಗರದಲ್ಲಿ ಮೋಟಾರ್ಸೈಕಲ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಿರುಕುಳ ನೀಡುವ ಯತ್ನದಲ್ಲಿ ವಿದ್ಯಾರ್ಥಿನಿಯೊಬ್ಬಳ ‘ದುಪಟ್ಟಾ’ ಎಳೆದಿದ್ದರಿಂದ ಆಕೆ ತನ್ನ ಬೈಸಿಕಲ್ನಿಂದ ಬಿದ್ದಿದ್ದಳು. ಇದರಿಂದಾಗಿ ಆಕೆಯ ಹಿಂದೆಯೇ ಬರುತ್ತಿದ್ದ ಮತ್ತೊಬ್ಬ ಮೋಟಾರ್ಸೈಕ್ಲಿಸ್ಟ್ನಿಂದ ಆಕೆಯ ಮೈಮೇಲೆ ಬೈಕ್ ಹರಿಸಿದ್ದರಿಂದ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಳು. ಈ ಘಟನೆಯ ಬೆನ್ನಲ್ಲಿಯೇ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದ್ದು, ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಉತ್ತರ ಪ್ರದೇಶ ಪೊಲೀಸರು ಶನಿವಾರ ರಾತ್ರಿಯ ವೇಳೆಗೆ ಮೂವರೂ ಆರೋಪಿಗಳನ್ನು ಬಂಧಿಸಲುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಇಬ್ಬರು ಆರೋಪಿಗಳಿಗೆ ಬುಲೆಟ್ ಗಾಯಗಳಾಗಿದ್ದಾರೆ, ಭಾನುವಾರ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಒಬ್ಬ ವ್ಯಕ್ತಿಯ ಕಾಲು ಮುರಿದು ಹೋಗಿದೆ ಎಂದು ತಿಳಿಸಿದ್ದಾರೆ.
ಈ ವೇದಿಕೆಯಿಂದ ಎಲ್ಲರಿಗೂ ಒಂದು ಎಚ್ಚರಿಕೆ ನೀಡಲು ಬಯಸುತ್ತೇನೆ. ಮಹಿಳೆಯರಿಗೆ ಕಿರುಕುಳ ನೀಡುವಂಥ ಅಪರಾಧ ಕೃತ್ಯ ಎಸಗಿದರೆ, ಅವರಿಗಾಗಿ ಸಾವಿನ ದೇವರು ಯಮರಾಜ ಕಾಯ್ತಾ ಇರ್ತಾನೆ ಎಂದು ಎಚ್ಚರಿಸಲು ಬಯಸುತ್ತೇನೆ ಎಂದು ಯೋಗಿ ಆದಿತ್ಯನಾಥ್, 343 ಕೋಟಿ ರೂ.ಗಳ 76 ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಬಲವಾದ ಕಾನೂನು ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಆದಿತ್ಯನಾಥ್ ಎತ್ತಿ ತೋರಿಸಿದರು ಮತ್ತು ವ್ಯವಸ್ಥೆಯನ್ನು ಅಡ್ಡಿಪಡಿಸಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಒತ್ತಿ ಹೇಳಿದರು. ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿಯು ಆದಿತ್ಯನಾಥ್ ಸರ್ಕಾರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸುತ್ತಿರುವುದನ್ನು ತನ್ನ ಸಾಧನೆಗಳಲ್ಲಿ ಒಂದು ಎಂದು ಆಗಾಗ್ಗೆ ಬಿಂಬಿಸುತ್ತಿದೆ.
Uttar Pradesh CM Yogi Adityanath warns miscreants; Says, “If someone harasses a daughter walking on the road... on the next crossroad 'Yamraj' will be waiting for them.” pic.twitter.com/pG8JBDvFLq
— Megh Updates ?™ (@MeghUpdates) September 18, 2023
ಅಂಬೇಡ್ಕರ್ ನಗರದಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಕೂಡ ವೈರಲ್ ಆಗಿದೆ. ಇದರಲ್ಲಿ 11ನೇ ತರಗತಿಯ ವಿದ್ಯಾರ್ಥಿನಿ ಹಾಗೂ ಇನ್ನೊಬ್ಬಳು ವಿದ್ಯಾರ್ಥಿನಿ ಬೈಸಿಕಲ್ನಲ್ಲಿ ಹೋಗುತ್ತಿದ್ದ ವೇಳೆ, ವೇಗವಾಗಿ ಅವರ ಬಳಿ ಬೈಕ್ ಸವಾರರು ಬರುತ್ತಾರೆ. ಈ ವೇಳೆ ಬೈಕ್ನ ಹಿಂದೆ ಕುಳೀತಿದ್ದ ವ್ಯಕ್ತಿ, ಆಕೆಯ ದುಪ್ಪಟ್ಟಾವನ್ನು ಎಳೆಯತ್ತಾನೆ. ಈ ಹಂತದಲ್ಲಿ ಸಮತೋಲನ ಕಳೆದುಕೊಳ್ಳುವ ಆಕೆ ರಸ್ತೆಗೆ ಬೀಳುತ್ತಾಳೆ. ಈ ವೇಳೆ ಹಿಂದೆಯೇ ಬರುತ್ತಿದ್ದ ಮತ್ತೊಬ್ಬ ಬೈಕ್ ಚಾಲಕ ಆಕೆಯ ಮೇಲೆಯೇ ಬೈಕ್ ಹರಿಸಿದ್ದಾನೆ.
ಬಂಧಿತ ಆರೋಪಿಗಳನ್ನು ಸೆಹಬಾಜ್ ಮತ್ತು ಆತನ ಸಹೋದರ ಅರ್ಬಾಜ್ ಎಂದು ಗುರುತಿಸಲಾಗಿದೆ. ಇವರು ದುಪಟ್ಟಾ ಎಳೆದಿದ್ದಾರೆ. ಮೂರನೇ ಆರೋಪಿ ಫೈಸಲ್ ಬಾಲಕಿಯ ಮೇಲೆ ಬೈಕ್ ಹರಿಸಿದ್ದಾನೆ. ಆರೋಪಿ ಸಹೋದರರು ಮತ್ತು ಫೈಸಲ್ ನಡುವೆ ಯಾವುದೇ ಸಂಬಂಧವಿದೆಯೇ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಬೇಡ್ಕರ್ನಗರದ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಸಿನ್ಹಾ ಈ ಬಗ್ಗೆ ಮಾಹಿತಿ ನೀಡಿದ್ದಯ, “ಭಾನುವಾರ ಮೂವರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೂವರು ವಾಹನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಪೊಲೀಸ್ ರೈಫಲ್ ಅನ್ನು ಕಸಿದುಕೊಂಡು ನಮ್ಮ ತಂಡದ ಮೇಲೆ ಗುಂಡು ಹಾರಿಸಿದರು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ, ಇಬ್ಬರು ಆರೋಪಿಗಳಿಗೆ ಕಾಲಿಗೆ ಬುಲೆಟ್ ಗಾಯಗಳಾಗಿದ್ದು, ಮೂರನೆಯವರ ಕಾಲು ಮುರಿದು ಹೋಗಿದೆ.ಮೂವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಅವರು ಹೇಳಿದರು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 354 (ಮಹಿಳೆಯ ವಿನಯಶೀಲತೆಗೆ ಆಕ್ರೋಶ ವ್ಯಕ್ತಪಡಿಸಲು ಹಲ್ಲೆ) ಜೊತೆಗೆ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.