ಕೆನಡಾದಲ್ಲಿ ದಂಪತಿ ಮತ್ತು ಪುತ್ರಿ ಸೇರಿ ಭಾರತೀಯ ಮೂಲದ ಕುಟುಂಬದ ದುರಂತ ಅಂತ್ಯ.!
ಒಟ್ಟಾವ: ಕೆನಡಾದಲ್ಲಿ ಭಾರತ ಮೂಲದ ಕುಟುಂಬವೊಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ದಂಪತಿ ಮತ್ತು ಪುತ್ರಿಯು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ಅಗ್ನಿ ದುರಂತದ ಕುರಿತು ಹಲವು ಶಂಕೆ ವ್ಯಕ್ತಪಡಿಸಿದ್ದು ತನಿಖೆ ಆರಂಭಿಸಿದ್ದಾರೆ.
ಭಾರತ ಮೂಲದ ರಾಜೀವ್ ವಾರಿಕೂ (51), ಇವರ ಪತ್ನಿ ಶಿಲ್ಪಾ ಕೋಥಾ (47) ಹಾಗೂ ಪುತ್ರಿ ಮಹೇಕ್ ವಾರಿಕೂ (17) ಅವರು ಬಿಗ್ ಸ್ಕೈ ವೇ ಹಾಗೂ ವ್ಯಾನ್ ಕಿರ್ಕ್ ಡ್ರೈವ್ ಪ್ರದೇಶದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದು, ಇವರ ಮನೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೂವರ ಶವಗಳು ಮನೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಹಲವು ರೀತಿಯ ಶಂಕೆ ವ್ಯಕ್ತಪಡಿಸಿದ್ದಾರೆ. ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿಲ್ಲ, ಉದ್ದೇಶಪೂರ್ವಕವಾಗಿ ನಡೆದಿರುವ ಕೃತ್ಯವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.“ರಾಜೀವ್ ವಾರಿಕೂ ಅವರ ಮನೆಯಲ್ಲಿ ಆಕಸ್ಮಿಕವಾಗಿ ಅಗ್ನಿ ದುರಂತ ಸಂಭವಿಸಿರುವ ಸಾಧ್ಯತೆ ಕಡಿಮೆ ಇದೆ. ಇದೊಂದು ಉದ್ದೇಶ ಪೂರ್ವಕ ಕೃತ್ಯ ಎಂದು ತೋರುತ್ತಿದೆ. ಹಾಗಾಗಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಉನ್ನತ ತನಿಖೆಯ ಬಳಿಕವೇ ಇವರ ಸಾವಿಗೆ ನಿಖರ ಕಾರಣ ದೊರೆಯಲಿದೆ. ಅಗ್ನಿ ದುರಂತವು ಆಕಸ್ಮಿಕವಾಗಿ ಸಂಭವಿಸಿಲ್ಲ ಎಂಬುದಾಗಿ ಒಂಟಾರಿಯೋ ಫೈರ್ ಮಾರ್ಷಲ್ ಕೂಡ ತಿಳಿಸಿದೆ” ಎಂದು ಪೊಲೀಸ್ ಕಾನ್‌ಸ್ಟೆಬಲ್ ಟರೈನ್ ಯಂಗ್ ಮಾಹಿತಿ ನೀಡಿದ್ದಾರೆ. ಇವರ ಮನೆಯಲ್ಲಿ ಸ್ಫೋಟದ ಸದ್ದು ಕೇಳಿಸಿತು ಎಂಬುದಾಗಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಕುರಿತು ಕೂಡ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಕಾರ್ಕಳ: ಅಕ್ರಮವಾಗಿ ಮರಳು ಸಾಗಾಟ- ಟಿಪ್ಪರ್ ಲಾರಿ ವಶಕ್ಕೆ, ಪ್ರಕರಣ ದಾಖಲು
ಮಂಗಳೂರಿನ ಅಡ್ಡೂರು ಫಲ್ಗಣಿ ನದಿಯ ಸರಕಾರಿಯ ಜಾಗದಿಂದ ಕಾರ್ಕಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ದಂಧೆಕೋರರ ವಿರುದ್ಧ ಕಾರ್ಕಳ ನಗರ ಠಾಣಾಧಿಕಾರಿ ಧನಂಜಯ ನೇತೃತ್ವದ ಪೊಲೀಸರ ತಂಡವು ಕಾನೂನು ಕ್ರಮ ಕೈಗೊಂಡಿದೆ.
ಆರೋಪಿ ಸಂದೀಪ ಎಂಬಾತನು ಯಾವುದೇ ಪರವಾನಿಗೆ ಇಲ್ಲದೇ ಮಂಗಳೂರಿನ ಅಡ್ಡೂರು ಫಲ್ಗುಣಿ ನದಿಯ ಸರಕಾರಿ ಸ್ಥಳದಿಂದ ಅಡ್ಡೂರಿನ ಅಬ್ಬುಲ್ ಸತ್ತಾರ್ ಹಾಗೂ ಕಾರ್ಕಳದ ಪುಲ್ಕೇರಿ ರಾಜೇಶ ಎಂಬುವರೊಂದಿಗೆ ಸೇರಿಕೊಂಡು ಅಕ್ರಮವಾಗಿ ಮರಳನ್ನು ಕಳವು ಮಾಡಿ ಕಾರ್ಕಳ ಕಡೆಗೆ ಸಾಗಿಸುತ್ತಿದ್ದರು. ಕೆಎ 19 ಎಡಿ 9426 ನಂಬ್ರದ ಟಿಪ್ಪರ್ ಲಾರಿಗೆ ಮರಳು ಲೋಡ್ ಮಾಡಿಕೊಂಡು ಮಂಗಳೂರಿನ ಅಡ್ಡೂರಿನಿಂದ ಪುಲ್ಕೇರಿ ಜಂಕ್ಷನ್ ಕಡೆಯಾಗಿ ಬಂಗ್ಲೆಗುಡ್ಡೆ ಜಂಕ್ಷನ್ ಕಡೆಗೆ ಸಾಗಾಟ ಮಾಡಲಾಗುತ್ತಿತ್ತು. ಈ ನಡುವೆ ಕಾರ್ಕಳ ಕಸಬಾ ಗ್ರಾಮದ ಕಾಬೆಟ್ಟು ವೇಣುಗೋಪಾಲ ದೇವಸ್ಥಾನದ ಜಂಕ್ಷನ್ ಬಳಿ ಕಾರ್ಕಳ ನಗರ ಠಾಣಾ ಪಿಎಸ್‌ಐ ಧನಂಜಯ ಬಿ ಸಿ ರವರು ಸಿಬ್ಬಂದಿಯರು ತಡೆದು ನಿಲ್ಲಿಸಿ ಟಿಪ್ಪರ್ ಲಾರಿಯನ್ನು ಸ್ವಾದೀನ ಪಡೆದಿದ್ದಾರೆ.
ಮಾರ್ಚ್ 15ರ ಬೆಳಿಗ್ಗೆ 10.30 ಗಂಟೆಗೆ ಪೊಲೀಸರು ಕಾರ್ಯಚರಣೆ ನಡೆಸಿದ್ದು, 3 ಯುನಿಟ್ ಮರಳು ಒಟ್ಟು ಅಂದಾಜು ರೂ. ಮೌಲ್ಯ 15000 ಹಾಗೂ ಟಿಪ್ಪರ್ ಲಾರಿಯ ಮೌಲ್ಯ ರೂ.10 ಲಕ್ಷ ರೂ ಆಗಿರುತ್ತದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.