ಟ್ರಾಫಿಕ್ ನಲ್ಲಿ ವೇಗವಾಗಿ ಬಂದ ಕಾರು ಮೂರು ಬೈಕ್ ಗಳಿಗೆ ಡಿಕ್ಕಿ ; 4 ಮಂದಿಗೆ ಗಾಯ..!
ಬೆಂಗಳೂರಿನಲ್ಲಿ (Bengaluru) ಭಾನುವಾರ ಸಂಜೆ ಭೀಕರ ರಸ್ತೆ ಅಪಘಾತ ಪ್ರಕರಣವೊಂದು ವರದಿಯಾಗಿದೆ. ಅತಿವೇಗವಾಗಿ ಬಂದ ಎಸ್‌ಯುವಿಯೊಂದು 3 ಬೈಕ್‌ಗಳಿಗೆ ಡಿಕ್ಕಿ ಹೊಡೆದಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂವರು ಗಾಯಗೊಂಡಿದ್ದು, ಓರ್ವರ ಸ್ಥಿತಿ ಗಂಭೀರವಾಗಿದೆ. ಮೂರು ದ್ವಿಚಕ್ರ ವಾಹನಗಳು ನಜ್ಜುಗುಜ್ಜುಗೊಂಡಿವೆ.
ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಲ್ಲಿ ಈ ದುರ್ಘಟನೆ ನಡೆದಿದ್ದು, ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಸರಣಿ ಅಪಘಾತವಾಗಿದೆ. ಗಾಯಾಳುಗಳನ್ನು ಕಿರಣ್, ಜಸ್ಮಿತಾ ಮತ್ತು ಬಸಂತ್ ಎಂದು ಗುರುತಿಸಲಾಗಿದೆ. ಸ್ಮಿತಾ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮತ್ತೊಂದು ಕಾರಿನ ಡ್ಯಾಶ್ ಕ್ಯಾಮ್‌ನಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿವೆ.
ಡ್ಯಾಶ್ ಕ್ಯಾಮ್‌ನಲ್ಲಿ ರೆಕಾರ್ಡ್ ಆಗಿರುವ ವಿಡಿಯೋದಲ್ಲಿ ಎಸ್‌ಯುವಿ 2 ಮೋಟಾರ್ ಸೈಕಲ್‌ಗಳಿಗೆ ಡಿಕ್ಕಿ ಹೊಡೆದಿರುವುದನ್ನು ನೋಡಬಹುದು. ಮೊದಲ ಬೈಕ್ ಸವಾರ ಎರಡು ಕಾರುಗಳ ನಡುವೆ ರಸ್ತೆಯಲ್ಲಿ ಬೀಳುವ ಮುನ್ನ, ಹಲವು ಅಡಿಗಳಷ್ಟು ಮೇಲೆ ಗಾಳಿಯಲ್ಲಿ ಹಾರಿದ್ದಾನೆ. ಎರಡನೇ ದ್ವಿಚಕ್ರ ವಾಹನ ಸವಾರ ಫುಟ್‌ಪಾತ್‌ನಲ್ಲಿ ಬಿದ್ದಿದ್ದಾನೆ. ನಂತರ, ಕಾರು ಕೆಲವು ಮೀಟರ್‌ಗಳಷ್ಟು ಮುಂದೆ ಹೋಗಿ ಮತ್ತೊಂದು ಬೈಕಿಗೆ ಡಿಕ್ಕಿಯಾಗಿದ್ದು, ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ.
ಅಪಘಾತ ಮಾಡಿದ ಕಾರು ಚಾಲಕನನ್ನು ಅಭಿಷೇಕ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ತನಿಖೆಯಿಂದ ಘಟನೆ ಬಗ್ಗೆ ಸತ್ಯ – ಸತ್ಯತೆ ಹೊರ ಬರಬೇಕಾಗಿದೆ.
ಸದ್ಯ, ಮೂಲಗಳಿಂದ ದೊರೆಯಿರುವ ವಿವರಗಳ ಪ್ರಕಾರ, ಬನ್ನೇರುಘಟ್ಟ ಸಮೀಪದ ಕಾಳೇನ ಅಗ್ರಹಾರದ ರಸ್ತೆಯಲ್ಲಿ ಈ ಕಾರು ಹೋಗುತ್ತಿತ್ತು. ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು, ಏಕಾಏಕಿ ಕಾರಿನ ಎದುರಿಗೆ ಬಂದಿದ್ದಾರೆ. ಈ ವೇಳೆ, ಚಾಲಕ ದಿಢೀರ್ ಬ್ರೇಕ್ ಹಾಕಲು ಹೋಗಿದ್ದಾನೆ. ಗಾಬರಿಯಲ್ಲಿ ಬ್ರೇಕ್ ಬದಲು ಎಕ್ಸಲೇಟರ್ ತುಳಿದಿದ್ದಾನೆ. ಪರಿಣಾಮ, ಕಾರು ನಿಯಂತ್ರಣ ಕಳೆದುಕೊಂಡು ಅತಿವೇಗದಲ್ಲಿ ಮುಂದೆ ಹೋಗುತ್ತಿದ್ದ ಮೂರು ಬೈಕುಗಳಿಗೆ ಡಿಕ್ಕಿಯೊಂದಿದೆ. ಆ ಬಳಿಕ, ಡಿವೈಡರ್‌ಗೆ ಅಪ್ಪಳಿಸಿ ನಿಂತು ಕೊಂಡಿದೆ.ಇನ್ನು, ವಾಹನ ಸವಾರರು ನಿಧಾನಗತಿ ಹಾಗೂ ನಿರ್ದಿಷ್ಟ ವೇಗಮಿತಿಯಲ್ಲಿ ಕಾರುಗಳನ್ನು ಓಡಿಸಿದರೆ, ಇಂತಹ ಅಪಘಾತಗಳು ಸಂಭವಿಸುವುದಿಲ್ಲ. ಜೊತೆಗೆ ವಾಹನಗಳನ್ನು ಓಡಿಸುವಾಗ ತುಂಬಾ ಜಾಗ್ರತೆ ವಹಿಸಬೇಕು. ಕೊಂಚ ಎಚ್ಚರ ತಪ್ಪಿದರೂ ಈ ರೀತಿಯ ಘಟನೆಗಳು ನಡೆಸುತ್ತಿವೆ. ಈ ಕಾರಣಕ್ಕೆ ನಿಮ್ಮ ಗಮನವನ್ನು ಸಂಪೂರ್ಣವಾಗಿ ರಸ್ತೆಯ ಮೇಲೆ ಕೇಂದ್ರೀಕರಿಸಬೇಕು.