ಸೊಳ್ಳೆ ನಿವಾರಕ ದ್ರಾವಣ ಸೇವಿಸಿ ಒಂದೂವರೆ ವರ್ಷದ ಮಗು ಮೃತ್ಯು..!
ಕಾಸರಗೋಡು: ಸೊಳ್ಳೆ ನಿವಾರಕ ದ್ರಾವಣ ಸೇವಿಸಿದ ಪರಿಣಾಮ ಒಂದೂವರೆ ವರ್ಷದ ಹಸುಳೆ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಕಲ್ಲೂರಾವಿ ಎಂಬಲ್ಲಿ ನಡೆದಿದೆ.
ಕಾಞಂಗಾಡ್ ಕಲ್ಲೂರಾವಿಯ ಬಾವನಗರದ ರಂಶೀದ್ ಅವರ ಪುತ್ರಿ ಜೆಸಾ ಮೃತಪಟ್ಟ ಮಗುವಾಗಿದೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಸೊಳ್ಳೆ ನಿವಾರಕ ದ್ರಾವಣವನ್ನು ಸೇವಿಸಿದ್ದು, ಇದನ್ನು ಗಮನಿಸಿದ ಮನೆಯವರು ಮಗುವಿಗೆ ಕಾಞಂಗಾಡ್ ನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮಂಗಳವಾರ ಬೆಳಗ್ಗೆ ಮೃತ ಪಟ್ಟಿದೆ ಎಂದು ತಿಳಿದುಬಂದಿದೆ.
ಕಿಲ್ಲರ್ ಪ್ಲಾಸ್ಟಿಕ್ ವಿರುದ್ದ ಯುವಕ ಜಾಗೃತಿ ಅಭಿಯಾನ,ಸೈಕಲ್ ಏರಿ ದೇಶ ಪರ್ಯಟನೆ ಆರಂಭಿಸಿದ ರಾಬಿನ್ ಸಿಂಗ್..!
ಮಂಗಳೂರು : ಪರಿಸರ ಸಂರಕ್ಷಣೆಗಾಗಿ ಇಂದು ಜಗತ್ತಿನಾದ್ಯಂತ ಹಲವು ರೀತಿಯ ಜಾಗೃತಿ ಹೋರಾಟಗಳು ನಡೆಯುತ್ತಿದೆ. ಅದರಲ್ಲೂ ಪ್ಲಾಸ್ಟಿಕ್ ಎನ್ನುವ ವಸ್ತು ಇಡೀ ಜೀವರಾಶಿಯನ್ನೇ ನಾಶ ಮಾಡುವ ಹಂತಕ್ಕೆ ತಲುಪಿದೆ. ಈ ಪ್ಲಾಸ್ಟಿಕ್ ನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಇಲ್ಲೊಬ್ಬರು ಸೈಕಲ್ ಏರಿ ದೇಶ ಪರ್ಯಟನೆ ಮಾಡುತ್ತಿದ್ದಾರೆ. ಈಗಾಗಲೇ ಹಲವು ರಾಜ್ಯಗಳನ್ನು ದಾಟಿರುವ ಈ ವ್ಯಕ್ತಿಯ ಸೈಕಲ್ ಪರ್ಯಟನೆ 2024 ರ ಮಾರ್ಚ್ ತಿಂಗಳಲ್ಲಿ ಮಧ್ಯಪ್ರದೇಶದ ಭೂಪಾಲ್ ನಲ್ಲಿ ಸಮಾಪ್ತಿಗೊಳ್ಳಲಿದೆ..
ಇವರು ಉತ್ತರಪ್ರದೇಶದ ಇಟವಾ ನಿವಾಸಿ ರಾಬಿನ್ ಸಿಂಗ್. ಪರಿಸರ ಸಂರಕ್ಷಣೆಗಾಗಿ ಹಲವಾರು ಸಂಘ ಸಂಸ್ಥೆಗಳು ಹಲವು ರೀತಿಯ ಜಾಗೃತಿ, ಹೋರಾಟಗಳನ್ನು ನಡೆಸಿದರೆ, ರಾಬಿನ್ ಸಿಂಗ್ ತನ್ನ ಸೈಕಲ್ ಏರಿ ದೇಶದಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪರಿಸರ ಅದರಲ್ಲೂ ಪ್ಲಾಸ್ಟಿಕ್ ನಿಂದ ಜೀವಜಲದ ಮೇಲಾಗುವ ದುಷ್ಪರಿಣಾಮಗಳ ಕುರಿತು ಪ್ರತೀ ರಾಜ್ಯದ ಪ್ರತೀ ಜಿಲ್ಲೆಗಳಿಗೆ ತೆರಳಿ ಜಾಗೃತಿ ಮೂಡಿಸೋದು ಇವರ ಈ ಸೈಕಲ್ ಸವಾರಿಯ ಮುಖ್ಯ ಉದ್ಧೇಶವೂ ಆಗಿದೆ.
2022 ರ ಅಕ್ಟೋಬರ್ ತಿಂಗಳಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಸೈಕಲ್ ಮೂಲಕ ದೇಶ ಪರ್ಯಟನೆ ಆರಂಭಿಸಿರುವ ರಾಬಿನ್ ಸಿಂಗ್ ಈಗಾಗಲೇ ಉತ್ತರ ಮತ್ತು ದಕ್ಷಿಣ ಭಾರತದ ಬಹುತೇಕ ಎಲ್ಲಾ ರಾಜ್ಯಗಳನ್ನು ಕ್ರಮಿಸಿರುವ ರಾಬಿನ್ ಸಿಂಗ್ ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ತಮ್ಮ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಶಾಲಾ-ಕಾಲೇಜುಗಳ ಬಳಿಗೆ ತೆರಳಿ ಮುಖ್ಯವಾಗಿ ಯುವಜನತೆಗೆ ಪರಿಸರದ ಕುರಿತ ಕಾಳಜಿ ಮತ್ತು ಪ್ಲಾಸ್ಟಿಕ್ ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ದಕ್ಷಿಣಕನ್ನಡದಿಂದ ನೇರವಾಗಿ ತೆಲಂಗಾಣ ರಾಜ್ಯಕ್ಕೆ ಪ್ರಯಾಣ ಬೆಳೆಸಲಿರುವ ರಾಬಿನ್ ಸಿಂಗ್ 2024 ಮಾರ್ಚ್ ತಿಂಗಳಿನಲ್ಲಿ ಮಧ್ಯಪ್ರದೇಶದ ಭೂಪಾಲ್ ಗೆ ತಲುಪಲಿದ್ದಾರೆ. ಭೂಪಾಲ್ ನಲ್ಲೇ ತನ್ನ ಸೈಕಲ್ ಮೂಲಕ ಪರಿಸರ ಜಾಗೃತಿಯನ್ನು ಸಮಾಪ್ತಿಗೊಳಿಸಲಿದ್ದಾರೆ. ಈಗಾಗಲೇ ಸಾವಿರಾರು ಕಿಲೋಮೀಟರ್ ಸೈಕಲ್ ನಲ್ಲಿ ಕ್ರಮಿಸಿರಯವ ರಾಬಿನ್ ಸಿಂಗ್ ತನ್ನ ಈ ಜಾಗೃತಿಗೆ ಗ್ರೀನ್ ಇಂಡಿಯಾ ಅಭಿಯಾನ ಎನ್ನುವ ಹೆಸರನ್ನೂ ಇಟ್ಟುಕೊಂಡಿದ್ದಾರೆ.
ಪ್ಲಾಸ್ಟಿಕ್ ಅದರಲ್ಲೂ ಮೈಕ್ರೋ ಪ್ಲಾಸ್ಟಿಕ್ ಗಳು ಇಂದು ಮಾನವ ದೇಹದ ಮೇಲೆ ಹಲವು ರೀತಿಯ ಸಮಸ್ಯೆಗಳನ್ನು ಕೊಡುತ್ತಿದೆ. ಈ ಪ್ಲಾಸ್ಟಿಕ್ ಗಳ ನಿರ್ಮೂಲನೆಯಾಗದೇ ಹೋದಲ್ಲಿ ಇಡೀ ಜೀವಸಂಕುಲವೇ ಈ ಪ್ಲಾಸ್ಟಿಕ್ ನಿಂದಾಗಿ ಕೊನೆಯಾಗಲಿದೆ ಎನ್ನುವ ಆತಂಕ ವ್ಯಕ್ತಪಡಿಸಿರುವ ರಾಬಿನ್ ಸಿಂಗ್ ತನ್ನ ಪರಿಸರ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಲಿದೆ ಎನ್ನುತ್ತಾರೆ.