ತನ್ನ ಮೂರುವರೆ ವರ್ಷದ ಮಗುವನ್ನು ಮನೆಯೊಳಗೆ ಕೂಡಿ ಹಾಕಿ ಅಮಾನುಷವಾಗಿ ಚಿತ್ರಹಿಂಸೆ ನೀಡಿದ ಹೆತ್ತ ತಾಯಿ..!

ಹೆತ್ತ ತಾಯಿಯೇ ತನ್ನ ಮೂರುವರೆ ವರ್ಷದ ಮಗುವನ್ನು ಮನೆಯೊಳಗೆ ಕೂಡಿ ಹಾಕಿದ್ದಲ್ಲದೆ ಅಮಾನುಷವಾಗಿ ಚಿತ್ರಹಿಂಸೆ ನೀಡಿದ ಹೃದಯ ವಿದ್ರಾವಕ ಘಟನೆಗೆ (Inhuman Behaviour) ಸಂಬಂಧಿಸಿ ಬೆಂಗಳೂರಿನ (Bangalore News) ಗಿರಿನಗರ ಪೊಲೀಸರು ರಾಕ್ಷಸಿ ತಾಯಿ ಶಾರಿನ್ (Monster Mother) ಮತ್ತು ಆಕೆಯೊಂದಿಗೆ ಸೇರಿ ಮಗುವನ್ನು ಹಿಂಸಿಸಿದ ದುರುಳ ಬಾಯ್‌ಫ್ರೆಂಡ್ ದಿನೇಶ್‌ನನ್ನು (Boy friend Dinesh) ಬಂಧಿಸಿದ್ದಾರೆ.
ಸ್ಟಾಲಿನ್ ಎಂಬ ಪುಟ್ಟ ಮಗುವನ್ನು ಮನೆಯೊಳಗೆ ಕೂಡಿ ಹಾಕಿ ಕೆಲಸಕ್ಕೆ ಹೋಗುತ್ತಿದ್ದ ಶಾರಿನ್ ತನ್ನ ಗೆಳೆಯನ ಜತೆ ಸೇರಿ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದಳು ಎಂಬ ಅಂಶ ಕಳೆದ ಫೆಬ್ರವರಿ 19ರಂದು ಮಹಿಳಾ ಸಂಘಟನೆಯವರ ಸಕಾಲಿಕ ಮಧ್ಯಪ್ರವೇಶದಿಂದ ಬೆಳಕಿಗೆ ಬಂದಿತ್ತು. ರಾಜೇಶ್ವರಿ ಮತ್ತು ಇತರ ಸಹೃದಯಿ ಮಹಿಳೆಯರು ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಮಗುವೊಂದು ದಿಗ್ಬಂಧನದಲ್ಲಿದೆ ಎಂಬ ಸುದ್ದಿ ತಿಳಿದು ಭೇಟಿ ನೀಡಿದಾಗ ಕರುಣಾಜನಕ ಕಥೆ ಬೆಳಕಿಗೆ ಬಂದಿತ್ತು. ಹಲ್ಲೆಗೀಡಾದ ಮೂರುವರೆ ವರ್ಷದ ಸ್ಟಾಲಿನ್ ಎಂಬ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ. ಸದ್ಯ ಸರ್ಕಾರಿ ಶಿಶುಮಂದಿರದಲ್ಲಿ ಪಾಲನೆ ಮಾಡಲಾಗುತ್ತಿದೆ.
ಬನಶಂಕರಿ 3ನೇಹಂತದ ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಈ ಘಟನೆ ನಡೆದಿದೆ. ಆರೋಪಿ ತಾಯಿ ಶಾರಿನ್ ವೀರಭದ್ರನಗರದ ಚರ್ಚ್ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಮೂರುವರೆ ವರ್ಷದ ಮಗು ಸ್ಟಾಲಿನ್ ನೊಂದಿಗೆ ಇದ್ದಳು. ಮನೆಗೆ ಒಬ್ಬ ವ್ಯಕ್ತಿ ಪ್ರತಿನಿತ್ಯ ಬಂದು ಹೋಗುತ್ತಿದ್ದು, ಅವನೊಂದಿಗೆ ಶಾರಿನ್ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಹೇಳಲಾಗಿದೆ.
ಮಗು ಸ್ಟಾಲಿನ್ ಗೆ ತಾಯಿ ಶಾರಿನ್, ಪ್ರಿಯಕರನೊಂದಿಗೆ ಸೇರಿಕೊಂಡು ಮನಬಂದಂತೆ ದಿನನಿತ್ಯ ಹಲ್ಲೆ ನಡೆಸುತ್ತಿದ್ದಳು. ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ; ಬೀಗ ಹಾಕಿ ಹೋಗುತ್ತಿದ್ದಳು. ಈ ವಿಷಯ ತಿಳಿದು ನೆರೆಹೊರೆಯ ದೂರಿನ್ವಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಗು ಸ್ಟಾಲಿನ್ ನನ್ನು ರಕ್ಷಿಸಿದ್ದರು. ಆದರೆ, ತಾಯಿ ಶಾರಿನ್ ವಿರುದ್ಧ ಯಾವುದೇ ಕ್ರಮ ಆಗಿರಲಿಲ್ಲ.
ಈ ಘಟನೆ ಬಗ್ಗೆ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇದೊಂದು ಅಮಾನುಷ ಕೃತ್ಯವಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಚಿವರು, ಇಲಾಖಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಶಾರಿನ್ ಎಂಬಾಕೆ ಬೆಂಗಳೂರು ಮೂಲದವಳೇ ಆಗಿದ್ದು, ಆಕೆಗೆ 2000ರ ಮಗು ಹುಟ್ಟಿತ್ತು. ಆದರೆ, ಅಷ್ಟು ಹೊತ್ತಿಗೆ ಗಂಡ ಹೆಂಡಿರ ಸಂಬಂಧ ಹಳಸಿತ್ತು. ಒಂದು ಹಂತದವರೆಗೆ ತವರು ಮನೆಯವರ ಬೆಂಬಲ ಪಡೆದಿದ್ದ ಶಾರಿನ್ ಬಳಿಕ ಏಕಾಂಗಿಯಾಗಿದ್ದಳು. ಆಗ ಆಕೆಯ ಸನಿಹಕ್ಕೆ ಬಂದವನೇ ದಿನೇಶ್.
ಆತ ಆಕೆಯ ಬಾಯ್ ಫ್ರೆಂಡ್‌ನಂತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಆತ ವೀರಭದ್ರ ನಗರದ ಮನೆಗೆ ಆಗಾಗ ಬರುತ್ತಿದ್ದು, ಶಾರಿನ್ ಜತೆ ಸೇರಿ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಅವರಿಬ್ಬರು ಮಗುವಿಗೆ ಯಾಕೆ ಚಿತ್ರಹಿಂಸೆ ನೀಡುತ್ತಿದ್ದರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ದಿನೇಶ್ ಕೂಡಾ ಒಬ್ಬ ವಿಕೃತ ವ್ಯಕ್ತಿ ಎನ್ನುವುದು ಆತ ಮಗುವಿಗೆ ನೀಡಿದ ಚಿತ್ರಹಿಂಸೆಯಿಂದ ಸ್ಪಷ್ಟವಾಗಿದೆ.
ಇದೀಗ ಚೈಲ್ಡ್ ವೆಲ್ ಫೇರ್ ಕಮಿಟಿ ಅಧಿಕಾರಿ ನಾಗರತ್ನ ನೀಡಿದ ದೂರಿನ ಮೇಲೆ ಜುವೆನಿಲ್ ಜಸ್ಟಿಸ್ ಆ್ಯಕ್ಟ್ , ಐಪಿಸಿ ಸೆಕ್ಷನ್ 32,323,324,342 ಅಡಿ ಎಫ್ ಐ ಆರ್ ದಾಖಲಾಗಿದೆ.