ಹೈಕೋರ್ಟ್‌ನಲ್ಲೇ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.!
ಬೆಂಗಳೂರು: ಹೈಕೋರ್ಟ್ನ (High Court) ಹಾಲ್ 1ರಲ್ಲಿ ವ್ಯಕ್ತಿಯೋರ್ವ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೈಸೂರು (Mysore) ಮೂಲದ ಶ್ರೀನಿವಾಸ್ (51) ಚಿನ್ನಮ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಶ್ರೀನಿವಾಸ್ ಅವರಿಗೆ ಸಂಬಂಧಿಸಿದ ಪ್ರಕರಣದೊಂದು ಹೈಕೋರ್ಟ್ ಮೆಟ್ಟಿಲೇರಿದೆ. ಇಂದು (ಏ.03) ಪ್ರಕರಣ ವಿಚಾರಣೆ ನಡೆಯುತ್ತಿತ್ತು.
ಪ್ರಕರಣದ ವಿಚಾರಣೆ ಅಂತ್ಯಕ್ಕೆ ತಲುಪಿದ್ದಂತೆ ನ್ಯಾಯಮೂರ್ತಿಗಳ ಎದುರು ಬಂದ ಶ್ರೀನಿವಾಸ್ ಅರ್ಜಿಯೊಂದನ್ನು ನ್ಯಾಯಾಲಯದ ಸಿಬ್ಬಂದಿಗೆ ನೀಡಿ, ಚಾಕುವಿನಂತಹ ಸಣ್ಣ ವಸ್ತುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಶ್ರೀನಿವಾಸ್ ಅವರನ್ನು ರಕ್ಷಿಸಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಹೈಕೊರ್ಟ್ಗೆ ಕೇಂದ್ರ ವಿಭಾಗದ ಡಿಸಿಪಿ, ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಭೇಟಿ ನೀಡಿದ್ದಾರೆ. ವ್ಯಕ್ತಿಯ ಪೂರ್ವಾಪರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ತಡರಾತ್ರಿ ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದವನ ಕೊಚ್ಚಿ ಕೊಲೆ
ಆನೇಕಲ್: ಖಾಕಿ ಪಡೆ ಚುನಾವಣಾ ಕೆಲಸದಲ್ಲಿ ಬ್ಯುಸಿಯಾಗುತ್ತಿದ್ದಂತೆ, ಇತ್ತ ಕ್ರೈಂ ರೇಟು ಹೆಚ್ಚಾಗುತ್ತಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಮುತ್ಯಾಲಮ್ಮ ದೇವಾಲಯದ ಬಳಿ ತಡರಾತ್ರಿ ವ್ಯಕ್ತಿಯೊಬ್ಬನ ಬರ್ಬರ (Murder case) ಕೊಲೆಯಾಗಿದೆ. ಒರಿಸ್ಸಾ ಮೂಲದ ದೀಪ್ತಿ ರಂಜನ್ (30) ಹತ್ಯೆಯಾದವನು.
ಮಂಗಳವಾರ ರಾತ್ರಿ 1 ಗಂಟೆ ಸುಮಾರಿಗೆ ಕೆಲಸ ಮುಗಿಸಿ ದೀಪ್ತಿ ರಂಜನ್ ವಾಪಸ್ ಆಗುತ್ತಿದ್ದ. ಈ ವೇಳೆ ಎದುರಾದ ಕಿಡಿಗೇಡಿಗಳು ಏಕಾಏಕಿ ದಾಳಿ ಮಾಡಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆಗೈದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೃತ್ಯವೆಸಗಿ ಆರೋಪಿಗಳು ಪರಾರಿ ಆಗಿದ್ದಾರೆ.
ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಕ್ಸ್‌ಫರ್ಡ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಯುವಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಜಮೀನಿಗಾಗಿ ಸಹೋದರರ ಹೊಡೆದಾಟ – ತಮ್ಮನ ಕೊಲೆಯಲ್ಲಿ ಅಂತ್ಯ
ರಾಯಚೂರು: ಜಮೀನಿನ ವಿಚಾರಕ್ಕೆ ಸಹೋದರರ ನಡುವೆ ನಡೆದ ಗಲಾಟೆಯಲ್ಲಿ ಕಿರಿಯ ಸಹೋದರ ಭೀಕರವಾಗಿ ಕೊಲೆಯಾಗಿರುವ ಘಟನೆ ಮಾನ್ವಿಯ (Manvi) ಜಿನೂರಿನಲ್ಲಿ ನಡೆದಿದೆ.
ರಾಮಣ್ಣ (36) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಸಹೋದರರ ನಡುವೆ ನಡೆದ ಗಲಾಟೆಯಲ್ಲಿ ರಾಮಣ್ಣ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಗಲಾಟೆಯಲ್ಲಿ ಮೃತನ ಪತ್ನಿ ರತ್ನಮ್ಮ ಹಾಗೂ ಅಕ್ಕ ಯಲ್ಲಮ್ಮ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಗ್ರಾಮದಲ್ಲಿದ್ದ 2 ಎಕರೆ 10 ಗುಂಟೆ ಜಮೀನನ್ನು ರಾಮಣ್ಣ ತನ್ನ ಉಳಿದ ಸಹೋದರರಿಗೆ ಬಿಡದೆ ತಾನೇ ಉಳುಮೆ ಮಾಡುತ್ತಿದ್ದ. ಇದೇ ವಿಚಾರಕ್ಕೆ ರಾಮಣ್ಣನ ಅಣ್ಣಂದಿರಾದ ಮೂಕಯ್ಯ, ಮುದಕಯ್ಯ ಹಾಗೂ ಅವರ ಮಕ್ಕಳು ಸೇರಿಕೊಂಡು ರಾಮಣ್ಣನ ಮೇಲೆ ಗಲಾಟೆ ಮಾಡಿದ್ದಾರೆ. ಬಳಿಕ ಕೊಡಲಿ ಮತ್ತು ಬೆತ್ತದಿಂದ ತೀವ್ರವಾಗಿ ಹಲ್ಲೆ ನಡೆಸಿದ್ದರೆ. ಇದರ ಪರಿಣಾಮ ತೀವ್ರ ರಕ್ತಸ್ರಾವಕ್ಕೊಳಗಾದ ರಾಮಣ್ಣ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.