ಗೃಹ ಸಾಲ ಚುಕ್ತಾ ಮಾಡುವುದಾಗಿ ನಂಬಿಸಿ 47 ಲಕ್ಷ ರೂಪಾಯಿ ಕಳೆದುಕೊಂಡ ವ್ಯಕ್ತಿ..!
ಬೆಂಗಳೂರು, ಮಾ.21: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ವಂಚನೆ ಪ್ರಕರಣಗಳು, ಸೈಬರ್ ಪ್ರಕರಣಗಳು ಹೆಚ್ಚುತ್ತಲೇ ಇದೆ. ಪೊಲೀಸ್ ಇಲಾಖೆ ಎಷ್ಟೇ ಕ್ರಮ ವಹಿಸಿದರೂ ವಂಚನೆ (Cheating) ಪ್ರಕರಣಗಳಿಗೆ ಬ್ರೇಕ್ ಬೀಳುತ್ತಿಲ್ಲ. ಇದೀಗ, ಗೃಹ ಸಾಲ ಕ್ಲಿಯರ್ ಮಾಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 47 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ನಿರ್ವಿಕ್ ರಾಧೇಶ್ಯಾಮ್ ಮತ್ತು ಗೌರವ್ ಅರೋರ ಎಂಬವರು 47 ಲಕ್ಷ ರೂಪಾಯಿ ವಂಚಿಸಿದ್ದಾಗಿ ಆರೋಪಿಸಿ ಸಂಜಯ್ ಎಂಬುವರು ಕೇಂದ್ರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, FIR ದಾಖಲಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬ್ಯಾಂಕ್ ಮೂಲಕ ಸಂಜಯ್ ಗೃಹ ಸಾಲ ತೆಗೆದುಕೊಂಡಿದ್ದರು. ಈ ವಿಚಾರ ತಿಳಿದ ಮ್ಯೂಚುಯಲ್ ಫ್ರೆಂಡ್ ನಿರ್ವಿಕ್ ರಾಧೆ ಶ್ಯಾಮ್, ತನಗೆ ಬ್ಯಾಂಕ್ನ ಹಿರಿಯ ಅಧಿಕಾರಿಗಳು ಪರಿಚಯ ಇದ್ದಾರೆ. ಬ್ಯಾಂಕ್ ಲೋನ್ ಸೆಟಲ್ಮೆಂಟ್ ಮಾಡಿಸುವುದಾಗಿ ನಂಬಿಸಿ ಗೌರವ್ ಅರೋರ ಎಂಬಾತನನ್ನ ಬ್ಯಾಕ್ನ ಲೀಗಲ್ ಲಾಯರ್ ಎಂದು ಪರಿಚಯಿಸಿದ್ದನು.
ಲೀಗಲ್ ಫೀಸ್ ಅಂತ ಸಂಜಯ್ ಅವರಿಂದ 3.50 ಲಕ್ಷ ರೂ. ಪಡೆದಿದ್ದ ಆರೋಪಿಗಳು, ಬಳಿಕ ಮುಂಬೈಗೆ ಕರೆಸಿಕೊಂಡು ಸೆಟಲ್ ಮೆಂಟ್ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸಂಜಯ್ ಬ್ಯಾಂಕ್ಗೆ ಮರುಪಾವತಿಸಬೇಕಾದ ಹಣವನ್ನು ಗೌರವ್ ಅಕೌಂಟ್ಗೆ ಪಾವತಿಸಲು ನಿರ್ವಿಕ್ ಹೇಳಿದ್ದ. ಅದರಂತೆ 47.50 ಲಕ್ಷ ರೂ. ಅನ್ನು ಗೌರವ್ ಅರೋರ ಖಾತೆಗೆ ಪಾವತಿಸಿದ್ದಾರೆ.
ಬಳಿಕ ನಿರ್ವಿಕ್ ಮತ್ತು ಗೌರವ್ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಬಳಿಕ ತಾನು ವಂಚನೆಗೆ ಸಿಲುಕಿರುವುದು ಖಚಿತವಾಗುತ್ತಿದ್ದಂತೆ ಸಂಜಯ್, ಕೇಂದ್ರ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ. ನಿರ್ವಿಕ್ ಮತ್ತು ಗೌರವ್ ಎಂಬವರು ಸುಳ್ಳು ಹೇಳಿ ವಂಚಿಸಿರುವುದಾಗಿ ಸಂಜಯ್ ದೂರಿನಲ್ಲಿ ಆರೋಪಿಸಿದ್ದಾರೆ.
ಹಣವೂ ಇಲ್ಲ, ಆರೋಪಿಗಳ ಪತ್ತೆಯೂ ಇಲ್ಲ; ಟ್ವೀಟ್ ಮಾಡಿದ ವಿದ್ಯಾರ್ಥಿ
ನಗರದಲ್ಲಿ ದಿನೇ ದಿನೇ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ದೂರು ನೀಡಿದರೂ ಪ್ರಯೋಜನವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅನಾಶ್ ಮೆಹಮೂದ್ ಎಂಬ ವಿದ್ಯಾರ್ಥಿ 7 ತಿಂಗಳ ಹಿಂದೆ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ 20 ಸಾವಿರ ಹಣ ಕಳೆದುಕೊಂಡಿದ್ದ. ತಕ್ಷಣವೇ ಕೆ.ಆರ್ ಪುರಂ ಠಾಣಾ ಪೊಲೀಸರಿಗೆ ಕರೆ ಮಾಡಿ ಅಕೌಂಟ್ ಸಹ ಫ್ರೀಜ್ ಮಾಡಿಸಿದ್ದ.
ಆದರೆ, ಪ್ರಕರಣ ನಡೆದು 7 ತಿಂಗಳು ಆದರೂ ಇತ್ತ ಫ್ರೀಜ್ ಮಾಡಿದ್ದ ಹಣವೂ ಬಂದಿಲ್ಲ, ಆರೋಪಿಗಳು ಪತ್ತೆಯಾಗುತ್ತಿಲ್ಲ. ದೂರು ನೀಡಿದರೂ ಯಾವುದೇ ಪ್ರಯೋಜನೆ ಇಲ್ಲ ಎಂದು ಆಕ್ರೋಶಗೊಂಡ ವಿದ್ಯಾರ್ಥಿ ಅನಾಶ್, ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ನಗರ ಪೊಲೀಸ್ ಆಯುಕ್ತಿಗೆ ಟ್ಯಾಗ್ ಮಾಡಿದ್ದಾನೆ.
ದೂರುದಾರರ ಟ್ವೀಟ್ ಗಮನಿಸಿದ ಪೊಲೀಸ್ ಆಯುಕ್ತರು, ಪ್ರಕರಣದ ಪ್ರಗತಿ ಕುರಿತು ಮಾಹಿತಿ ಕೇಳಿದ್ದಾರೆ. ತನಿಖೆಯ ಯಾವ ಹಂತದಲ್ಲಿ ಇದೆ, ಪ್ರೀಜ್ ಆದ ಹಣ ವಾಪಸ್ ಯಾಕೆ ದೂರುದಾರರಿಗೆ ಹೋಗಿಲ್ಲ ಅಂತ ಮಾಹಿತಿ ಪಡೆಯಲು ಮುಂದಾಗಿದ್ದಾರೆ.