ಭೂವಂಚನೆಯ ಪ್ರಕರಣಗಳಿಗೆ ಕಡಿವಾಣ; ಜಮೀನಿನ ಪಹಣಿಗೆ ಆಧಾರ್ ಲಿಂಕ್!
ಬೆಂಗಳೂರು: ರಾಜ್ಯದಲ್ಲಿ ಭೂವಂಚನೆಯಂತಹ (Land Fraud) ಅನೇಕ ಪ್ರಕರಣಗಳು ಕೇಳಿ ಬರುತ್ತಲೇ ಇವೆ. ಜತೆಗೆ ಬರ ಸೇರಿದಂತೆ ಇನ್ನಿತರ ಪರಿಹಾರಗಳು ನೇರವಾಗಿ ಎಲ್ಲ ರೈತರಿಗೆ ವರ್ಗಾವಣೆ ಆಗುತ್ತಿಲ್ಲ. ಕೆಲವೇ ಕೆಲವರಿಗೆ ಯೋಜನೆಯ ಫಲ ದೊರೆಯುತ್ತಿದೆ ಎಂಬ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗ ಶಾಶ್ವತ ವ್ಯವಸ್ಥೆ ಮಾಡಲು ಮುಂದಾಗಿದೆ. ಹೀಗಾಗಿ ರೈತರ ಜಮೀನುಗಳ ಆರ್‌ಟಿಸಿ ಇಲ್ಲವೇ ಪಹಣಿಯನ್ನು ಆಧಾರ್‌ಗೆ ಲಿಂಕ್ (Aadhaar Link) ಮಾಡಲು ಚಿಂತನೆ ನಡೆಸಿದೆ. ಈ ಕ್ರಮವು ಸಣ್ಣ – ಅತಿ ಸಣ್ಣ ರೈತರಿಗೆ (Small and marginal farmers) ಅನುಕೂಲ ಮಾಡಿಕೊಡಲಿದೆ. ಈ ವಿಷಯ ಈಗ ಬೆಳಗಾವಿ ಅಧಿವೇಶನದಲ್ಲಿ (Belagavi Winter Session) ಪ್ರಸ್ತಾಪ ಆಗಿದೆ.
ರಾಜ್ಯ ಸರ್ಕಾರದಿಂದ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ ಅವರಿಗೆ ಪರಿಹಾರ ಕ್ರಮಗಳನ್ನು ಒದಗಿಸುವುದಕ್ಕೆ “ಶಾಶ್ವತ ವ್ಯವಸ್ಥೆ” ರೂಪಿಸಲು ಚಿಂತನೆ ನಡೆಸಿದೆ. ಹೀಗಾಗಿ ರೈತರ ಪಹಣಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಮುಂದಾಗಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬೆಳಗಾವಿ ಅಧಿವೇಶನದಲ್ಲಿ ಸೋಮವಾರ ಹೇಳಿದ್ದಾರೆ.
ಬರಗಾಲದ ಮೇಲೆ ನಡೆದ ಚರ್ಚೆ ವೇಳೆ ಪ್ರತಿಕ್ರಿಯೆ ನೀಡಿದ್ದ ಸಚಿವ ಕೃಷ್ಣ ಬೈರೇಗೌಡ, ಕೇಂದ್ರ ಸರ್ಕಾರದ ಅಂಕಿ- ಅಂಶಗಳ ಪ್ರಕಾರ ಕರ್ನಾಟಕದಲ್ಲಿರುವುದು ಶೇ. 44ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ (ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿರುವವರು). ಆದರೆ, ವಾಸ್ತವದಲ್ಲಿ, ರಾಜ್ಯದ 70 ಪ್ರತಿಶತದಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದಾರೆ. ಈ ಎಲ್ಲರನ್ನು ಗುರುತಿಸುವ ಕಾರ್ಯ ಹಾಗೂ ಒಂದು ವ್ಯವಸ್ಥೆಯಡಿ ತರುವ ಕಾರ್ಯವು ಇದುವರೆಗೆ ಆಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಈಗ ಕ್ರಮ ವಹಿಸಲು ಮುಂದಾಗಲಾಗಿದೆ ಎಂದು ವಿವರಿಸಿದರು.
ಆಧಾರ್ – ಪಹಣಿ ಲಿಂಕ್‌ನಿಂದ ಆಗುವ ಪ್ರಯೋಜನ ಏನು?
ಜಮೀನಿನ ಪಹಣಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದರೆ ಭೂ-ಸಂಬಂಧಿತ ವಂಚನೆಗಳನ್ನು ತಡೆಯಬಹುದಾಗಿದೆ. ಅಷ್ಟೇ ಅಲ್ಲದೆ, ಜಮೀನು ಮಾಲೀಕತ್ವವನ್ನು ಸಹ ಖಾತ್ರಿಪಡಿಸುವುದು ಇದರಿಂದ ಸಾಧ್ಯವಾಗುತ್ತದೆ. ಹೀಗಾಗಿ ಎಲ್ಲ ರೀತಿಯ ಅಕ್ರಮಗಳಿಗೂ ಇದರಿಂದ ಕಡಿವಾಣವನ್ನು ಹಾಕಬಹುದಾಗಿದೆ.
ಕೇಂದ್ರ ಸರ್ಕಾರಕ್ಕೆ ಒತ್ತಾಯ
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೇರವಾಗಿ ಪರಿಹಾರವನ್ನು ತಲುಪಿಸುವುದಕ್ಕಾಗಿ ಶಾಶ್ವತ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ಈ ಸಂಬಂಧ ನಾವು ಕೇಂದ್ರ ಸರ್ಕಾರವನ್ನು ಸಹ ಒತ್ತಾಯಿಸಿದ್ದೇವೆ. ಇದಕ್ಕಾಗಿ ಎಲ್ಲ ಆರ್‌ಟಿಸಿಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಮತ್ತು ಆಧಾರ್ ದೃಢೀಕರಣವನ್ನು ಬಳಸಲು ಯೋಚಿಸುತ್ತಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದರು.
ಆಂಧ್ರದಲ್ಲಿ ಜಾರಿಯಲ್ಲಿರುವ ಪ್ಲ್ಯಾನ್!
ಈ ಪ್ಲ್ಯಾನ್ ಈಗಾಗಲೇ ಆಂಧ್ರ ಪ್ರದೇಶದಲ್ಲಿ ಜಾರಿಯಲ್ಲಿದೆ. ಆರ್‌ಟಿಸಿ ಜತೆಗೆ ಆಧಾರ್ ಲಿಂಕ್ ಮಾಡುವ ಕೆಲಸ ಈಗಾಗಲೇ ನಡೆದಿದೆ. ರೆಕಾರ್ಡ್ ಆಫ್ ರೈಟ್ಸ್ (ಆರ್‌ಟಿಸಿ), ಟೆನನ್ಸಿ ಆಂಡ್ ಕ್ರಾಪ್ಸ್ (ಪಹಣಿ) ಒಮ್ಮೆ ಅಪ್ಡೇಟ್ ಆದಲ್ಲಿ, ಅದರಲ್ಲಿ ಜಮೀನು ಮಾಲೀಕರ ವಿವರ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವಾಧೀನದ ಸ್ವರೂಪ, ಬೆಳೆದ ಬೆಳೆಗಳು ಸೇರಿದಂತೆ ಇನ್ನಿತರ ಸಮಗ್ರ ಮಾಹಿತಿಯನ್ನು ನಮೂದು ಮಾಡಲಾಗಿರುತ್ತದೆ.
ಹೀಗಾಗಿ ಒಟ್ಟಾರೆಯಾಗಿ ರೈತರಿಗೆ ಪರಿಹಾರ ವಿತರಣೆ ವ್ಯವಸ್ಥೆಯನ್ನು ಎಂಡ್ ಟು ಎಂಡ್ ಆಟೋಮೇಷನ್ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.