ಕೋಟಾದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿ..!
ಜೈಪುರ: ರಾಜಸ್ಥಾನದ ಕೋಟಾ ನಗರವು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಖ್ಯಾತಿಯಾಗಿತ್ತು. ಆದರೆ, ನಗರವು ಕಳೆದ ಕೆಲ ವರ್ಷಗಳಿಂದ ವಿದ್ಯಾರ್ಥಿಗಳ ಆತ್ಮಹತ್ಯೆಯಿಂದ ಸುದ್ದಿಯಾಗುತ್ತಿದೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET), ಜಂಟಿ ಪ್ರವೇಶ ಪರೀಕ್ಷೆ (JEE) ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರ‍್ಯಾಂಕ್ ಪಡೆದು, ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಗಿಟ್ಟಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಕೋಟಾ ನಗರದ ಕೋಚಿಂಗ್ ಸೆಂಟರ್‌ಗಳಿಗೆ (Kota Coaching Centres) ಪ್ರವೇಶಿಸುವ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಕೋಟಾ ನಗರದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ (Student Suicide) ಮಾಡಿಕೊಂಡಿದ್ದಾನೆ.
ನೀಟ್ ತೇರ್ಗಡೆ ಹೊಂದಿ, ವೈದ್ಯನಾಗುವ ಕನಸು ಕಂಡಿದ್ದ 20 ವರ್ಷದ ಫರೀದ್ ಹುಸೇನ್, ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಶ್ಚಿಮ ಬಂಗಾಳ ನಿವಾಸಿಯಾದ ಫರೀದ್ ಹುಸೇನ್, ಕೋಟಾದ ವಕ್ಫ್ ನಗರದಲ್ಲಿ ಅಧ್ಯಯನ ಮಾಡುತ್ತಿದ್ದ. ಈತನ ಶವವು ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ (ನವೆಂಬರ್ 27) ಪತ್ತೆಯಾಗಿದೆ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದು ಭಯದಿಂದ ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದೇ ವರ್ಷ 28 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು
ನೀಟ್, ಜೆಇಇ ತೇರ್ಗಡೆಯಾಗದಿರುವುದು, ತೇರ್ಗಡೆಯಾಗದಿರುವ ಭಯ, ಹಲವು ಅನಗತ್ಯ ಒತ್ತಡಗಳಿಂದಾಗಿ ಇದೇ ವರ್ಷದಲ್ಲಿ ಇದುವರೆಗೆ 28 ವಿದ್ಯಾರ್ಥಿಗಳು ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಕೋಚಿಂಗ್ ಸೆಂಟರ್‌ಗಳು, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಮಾಲೀಕರು ಹಿಂಜರಿಯುವಂತಾಗಿದೆ. ಇನ್ನು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಶಿಕ್ಷಣ ವ್ಯವಸ್ಥೆಯ ಮೇಲೆಯೇ ದೂರುಗಳು ಕೇಳಿಬರುವಂತೆ ಮಾಡಿವೆ. ಪೋಷಕರು ಕೂಡ ಕೋಟಾಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುವಂತಾಗಿದೆ. 2022ರಲ್ಲಿ ಕೋಟಾದಲ್ಲಿ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕೋಟಾದಲ್ಲಿರುವ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಸುತ್ತಲೂ ಬಲೆಗಳನ್ನು ಹಾಕಲಾಗಿದೆ. ಇತ್ತೀಚೆಗೆ ವಿದ್ಯಾರ್ಥಿಗಳು ಹಾಸ್ಟೆಲ್ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಕಾರಣ ಇಂತಹ ಕ್ರಮ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ಮೇಲಿನಿಂದ ಜಿಗಿದರೂ ಅವರ ಪ್ರಾಣಕ್ಕೆ ಯಾವುದೇ ಹಾನಿಯಾಗಬಾರದು ಎಂದು ಬಲೆಗಳನ್ನು ಅಳವಡಿಸಲಾಗಿದೆ. ನೇಣು ಬಿಗಿದುಕೊಳ್ಳಬಾರದು ಎಂದು ಫ್ಯಾನ್‌ಗಳಿಗೆ ತಂತ್ರಜ್ಞಾನದ ಅಳವಡಿಕೆ ಮಾಡಲಾಗಿದೆ. ನೇಣು ಬಿಗಿದುಕೊಳ್ಳಲು ಹೋದರೆ ಫ್ಯಾನ್‌ಗಳೇ ಕುಸಿಯುವ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಹೀಗಿದ್ದರೂ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳತ್ತಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.