ಜಗತ್ತಿಗೆ ಶಾಂತಿ, ಪ್ರೀತಿಯ ಸಂದೇಶ ಸಾರಿದ ದೇವಪುತ್ರ ಯೇಸುವಿನ ಜನ್ಮದಿನದ ಆಚರಣೆಯೇ ಕ್ರಿಸ್ಮಸ್ (Christmas). ಮನುಷ್ಯ ಎಲ್ಲರಿಗೂ ಉಪಯುಕ್ತನಾಗಬೇಕು, ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು ಮತ್ತು ಒಳ್ಳೆಯದನ್ನ ಕೇಳುವಂತವನಾಗಿರಬೇಕು ಎನ್ನುವುದೇ ಹಬ್ಬದ ಮುಖ್ಯ ಧ್ಯೇಯ.
ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆಯಿಂದ ಆಚರಿಸುವ ಕ್ರಿಸ್ಮಸ್ ಹಬ್ಬ; ಏನಿದರ ವಿಶೇಷ!
ಕ್ರಿಸ್‌ಮಸ್ ಹಬ್ಬವು ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಪ್ರತಿ ವರ್ಷ ಡಿಸೆಂಬರ್ 25 ರಂದು ಕ್ರಿಸ್‌ಮಸ್ ದಿನವಾಗಿ ಆಚರಿಸಲಾಗುತ್ತದೆ. ಕ್ರಿಸ್‌ಮಸ್‌ನ ಸಂಭ್ರಮವು ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 24 ರಿಂದ ಪ್ರಾರಂಭವಾಗುತ್ತದೆ. ಕ್ರಿಶ್ಚಿಯನ್ ಧರ್ಮದ ಜನರು ಈ ದಿನವನ್ನು ಯೇಸುಕ್ರಿಸ್ತನ ಜನ್ಮದಿನವೆಂದು ಆಚರಿಸುತ್ತಾರೆ. ಭಾರತದಲ್ಲಿಯೂ ಕ್ರಿಶ್ಚಿಯನ್ ಧರ್ಮದ ಜೊತೆಗೆ ಎಲ್ಲಾ ಧರ್ಮದ ಜನರು ಕ್ರಿಸ್‌ಮಸ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ದಿನದ ವಿಶೇಷತೆ ಎಂದರೆ ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸುವುದು. ಇದಲ್ಲದೇ ಪರಸ್ಪರ ಕ್ರಿಸ್ಮಸ್ ಕಾರ್ಡ್, ಉಡುಗೊರೆ ನೀಡುವುದು, ಚರ್ಚ್ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದು ಜೊತೆಗೆ ಮನೆಯನ್ನು ಕ್ರಿಸ್ಮಸ್ ಟ್ರೀ ಹಾಗೂ ಹೂವುಗಳಿಂದ ಆಲಂಕರಿಸುವುದಾಗಿದೆ. ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳೊಂದಿಗೆ ಸಂಭ್ರವಿಸುವುದಾಗಿದೆ. ಇಸ್ರೇಲ್, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್, ಜಪಾನ್, ಚೈನಾ, ಈಜಿಪ್ಟ್, ರಷ್ಯಾ, ರೊಮೊನಿಯಾ, ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವು ಭಾಗಗಳಲ್ಲಿ ಪ್ರತಿವರ್ಷ ಕ್ರಿಸ್‌ಮಸ್ ಆಚರಿಸುತ್ತಾರೆ.
ಸಾಂತಾ ಕ್ಲಾಸ್ ಉಡುಗೊರೆಯನ್ನು ಹೊತ್ತು ತರುತ್ತಾನೆ ಎಂಬ ನಂಬಿಕೆಯನ್ನು ಹಾಗೆಯೇ ಉಳಿಸಲು ಪ್ರತಿ ವರ್ಷ ಸೀಕ್ರೇಟ್ ಸಾಂತ ಎಂದು ಕೂಡ ಆಚರಿಸಲಾಗುತ್ತದೆ. ಈ ಸಾಂತಾ ಕ್ಲಾಸ್ ಹಿಂದೆ ಇತಿಹಾಸವೇ ಇದೆ. ಸೇಂಟ್ ನಿಕೋಲಸ್ ಎಂಬ ಸನ್ಯಾಸಿ ಇಂತಹ ಆಚರಣೆಯನ್ನು ತಂದರು ಎಂದು ಹೇಳಲಾಗುತ್ತದೆ. ಸೇಂಟ್ ನಿಕೋಲಸ್ ಕ್ರಿ.ಶ. 280ರ ಸುಮಾರಿಗೆ ಜನಿಸಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.
ನಾಲ್ಕನೇ ಶತಮಾನದ ಮಧ್ಯಭಾಗದಲ್ಲಿ ಪಾಶ್ಚಿಮಾತ್ಯ ದೇಶಗಳು ಡಿಸೆಂಬರ್ 25 ಅನ್ನು ಕ್ರಿಸ್‌ಮಸ್ ದಿನವೆಂದು ಗುರುತಿಸಿದವು ಎಂದು ಹೇಳಲಾಗುತ್ತದೆ. ಅಧಿಕೃತವಾಗಿ 1870 ರಲ್ಲಿ, ಅಮೇರಿಕಾವು ಕ್ರಿಸ್‌ಮಸ್ ದಿನವನ್ನು ಫೆಡರಲ್ ರಜಾದಿನವೆಂದು ಘೋಷಿಸಿತು.
ದೇವರ ಮಗ ಎಂದು ಕರೆಯಲಾಗುವ ಯೇಸು ಕ್ರಿಸ್ತನ ಜನನದ ಸಂತೋಷದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಸ್‌ಮಸ್ ಹಬ್ಬವನ್ನು ಕ್ರಿಸ್ತನಿಗಾಗಿಯೇ ಆಚರಿಸಲಾಗುತ್ತದೆ. ಬೈಬಲ್ (ಕ್ರೈಸ್ತರ ಪವಿತ್ರ ಪುಸ್ತಕ) ನಲ್ಲಿ ಯೇಸುಕ್ರಿಸ್ತನ ಜನ್ಮ ದಿನಾಂಕದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ ಇದರ ಹೊರತಾಗಿಯೂ, ಅವರ ಜನ್ಮದಿನವನ್ನು ಪ್ರತಿ ವರ್ಷ ಡಿಸೆಂಬರ್ 25 ರಂದು ಆಚರಿಸಲಾಗುತ್ತದೆ.
ಒಂದು ಕಾಲದಲ್ಲಿ ಕ್ರಿಸ್ಮಸ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಆದರಿಂದು ಪ್ರಪಂಚದಾದ್ಯಂತ ಆಚರಿಸುವ ಹಬ್ಬವಾಗಿ ಇದು ಮಾರ್ಪಟ್ಟಿದೆ. ಜನರನ್ನು ಪಾಪದಿಂದ ಮುಕ್ತಗೊಳಿಸಲು ಮತ್ತು ಜನರಿಗೆ ಒಳಿತನ್ನು ಮಾಡಲು ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದನು ಮತ್ತು ಜನರನ್ನು ಪಾಪದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಯೇಸು ಕ್ರಿಸ್ತನು ತನ್ನ ಪ್ರಾಣ ತ್ಯಾಗ ಮಾಡಿದನು ಎಂಬ ನಂಬಿಕೆ ಇದೆ. ಈ ಎಲ್ಲ ನೆನಪಿನೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ