ಕೇರಳದಲ್ಲಿ ಹರಡುತ್ತಿದೆ ನಿಫಾ ವೈರಸ್ ಪ್ರಕರಣ ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲರ್ಟ್ ಘೋಷಣೆ!
ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್ ಹೆಚ್ಚಳ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಅಲರ್ಟ್ ಘೋಷಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣಗಳನ್ನು ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಬೇಕು. ಶಂಕಿತ ಪ್ರಕರಣದ ಕುರಿತು ಕಣ್ಗಾವಲು ಕಚೇರಿಗೆ ಮಾಹಿತಿ ನೀಡಬೇಕು. ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ 10 ಹಾಸಿಗೆಯ ವಾರ್ಡ್ಗಳನ್ನು ತೆರೆಯಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ಸೋಂಕಿನಿಂದ ಇಬ್ಬರು ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆಯೇ ಅಕ್ಕಪಕ್ಕದ ಜಿಲ್ಲೆಗಳಾದ ಕಣ್ಣೂರು, ವಯನಾಡು ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ರಾಜ್ಯ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಘೋಷಿಸಿದೆ. ಇತ್ತ ಕರ್ನಾಟಕ, ಕೇರಳ ಗಡಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ.
ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, “ಆರೋಗ್ಯ ಇಲಾಖೆ ಐಸಿಎಂಆರ್ ಸಂಪರ್ಕಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ನಿಫಾ ವೈರಸ್ ಸೋಂಕಿತರಿಗೆ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳು ಲಭ್ಯವಿದೆ ಎಂದು ಮಾಹಿತಿ ನೀಡಲಾಗಿದೆ. ಕೋಝಿಕ್ಕೋಡ್ ಜಿಲ್ಲೆಯಲ್ಲಿಯೇ ಎರಡು ನಿಫಾ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಜಿಲ್ಲೆಯ 7 ಗ್ರಾಮಗಳನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಣೆ ಮಾಡಲಾಗಿದೆ. ಸೋಂಕು ಪೀಡಿತ ಪ್ರದೇಶಗಳಲ್ಲಿ ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳನ್ನು ಅಧಿಕಾರಿಗಳು ಮುಚ್ಚಿದ್ದಾರೆ” ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಂಡುಬರುವ ನಿಫಾ ವೈರಸ್ ಬಾಂಗ್ಲಾದೇಶದ ರೂಪಾಂತರವಾಗಿದ್ದು ಅದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಮತ್ತು ಇದು ಕಡಿಮೆ ಸಾಂಕ್ರಾಮಿಕವಾಗಿದ್ದರೂ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ ಎಂದು ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಮುಂದಿನ ಸೂಚನೆ ಬರುವವರೆಗೆ ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾದ ಏಳು ಗ್ರಾಮ ಪಂಚಾಯಿತಿಗಳ 43 ವಾರ್ಡ್‌ಗಳ ಒಳಗೆ ಮತ್ತು ಹೊರಗೆ ಹೋಗಲು ಯಾರಿಗೂ ಅವಕಾಶವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೀಡಿತ ಪ್ರದೇಶಗಳನ್ನು ಸುತ್ತುವರಿಯಲು ಪೊಲೀಸರಿಗೆ ಸೂಚಿಸಲಾಗಿದೆ.
ಆದಾಗ್ಯೂ, ಅಗತ್ಯ ವಸ್ತುಗಳು ಮತ್ತು ಔಷಧಿಗಳನ್ನು ಮಾರಾಟ ಮಾಡುವ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿಸಲಾಗುವುದು. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ತೆರೆದಿರುತ್ತವೆ, ಆದರೆ ಆರೋಗ್ಯ ಕೇಂದ್ರಗಳು ಮತ್ತು ಔಷಧಾಲಯಗಳಿಗೆ ಯಾವುದೇ ಸಮಯದ ನಿರ್ಬಂಧ ನೀಡಲಾಗಿಲ್ಲ.
ಕಂಟೈನ್‌ಮೆಂಟ್ ವಲಯಗಳಲ್ಲಿ, ಜನರು ಮಾಸ್ಕ್ ಧರಿಸಬೇಕು, ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್‌ಗಳನ್ನು ಬಳಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಯಾವುದೇ ಬಸ್‌ಗಳು ಅಥವಾ ವಾಹನಗಳನ್ನು ಪೀಡಿತ ಪ್ರದೇಶಗಳಲ್ಲಿ ನಿಲ್ಲಿಸಲು ಅನುಮತಿಸಲಾಗುವುದಿಲ್ಲ.