ಉಡುಪಿ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ ಪ್ರಕರಣ; ಕಿಲ್ಲರ್ ಅರೆಸ್ಟ್..!
ಉಡುಪಿ : ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿದ್ದ ಉಡುಪಿ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಕಟುಕನನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮಹಾರಾಷ್ಟ್ರ ಮೂಲದ ಪ್ರವೀಣ್ ಅರುಣ್ ಚೌಗಲೆ ಎಂದು ಗುರುತಿಸಲಾಗಿದೆ.
ಉಡುಪಿಯ ಮನೆಯೊಂದಕ್ಕೆ ನುಗ್ಗಿ ಒಂದೇ ಕುಟುಂಬದ ನಾಲ್ವರನ್ನು ಕೇವಲ 10 ನಿಮಿಷದಲ್ಲಿ ಕೊಲೆ ಮಾಡಿ ಪರಾರಿ ಆಗಿದ್ದನು. ಈತ ಪೊಲೀಸರಿಂದ ಕಳೆದ ಎರಡು ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದನು. ಇಂದು ಮಧ್ಯಾಹ್ನ ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರ ಇಲ್ಲವೇ ಆಂಧ್ರಕ್ಕೆ ತೆರಳಲು ಹಂತಕ ಪ್ಲ್ಯಾನ್ ಮಾಡಿಕೊಂಡಿದ್ದನು. ಪೊಲೀಸರು ಆತನ ಟೆಕ್ನಿಕಲ್ ಎವಿಡನ್ಸ್ ಆಧರಿಸಿ ಖೆಡ್ಡಾಕ್ಕೆ ಕೆಡವಿದ್ದಾರೆ. ಕೊಲೆ ಮಾಡಿ ಊರೂರು ಸುತ್ತುತ್ತಿದ್ದು ಆರೋಪಿಯನ್ನು ಬಂಧಿಸಿ ಉಡುಪಿಗೆ ಕರೆತರಲಾಗುತ್ತಿದೆ.
ಕುಡಚಿಯಲ್ಲಿರುವ ಸಂಬಂಧಿಯೊಬ್ಬರ ಮನೆಯಲ್ಲಿ ಆರೋಪಿ ಅವಿತುಕೊಂಡಿದ್ದು, ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ನವೆಂಬರ್ 12ರಂದು ಮನೆಗೆ ನುಗ್ಗಿ ಹಸೀನಾ, ಅಫ್ನಾನ್, ಅಯ್ನಾಝ್ ಹಾಗೂ ಆಸಿಂ ಎಂಬುವರನ್ನ ಚೂರಿಯಿಂದ ಚುಚ್ಚಿ ಕೊಲೆಗೈದು ಪರಾರಿಯಾಗಿದ್ದ. ಒಂದೇ ಘಟನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನ ಕೊಲೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆಯ ಹಿಂದೆ ವಿವಿಧ ಆಯಾಮಗಳ ಅನುಮಾನವನ್ನು ವ್ಯಕ್ತಪಡಿಸಿ ಕೊಲೆ ಪಾತಕಿಯ ಶೋಧಕ್ಕೆ ಮುಂದಾಗಿದ್ದರು.
ಘಟನೆ ವಿವರ
ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ಇದೇ ನವೆಂಬರ್ 12 ರಂದು ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಂದ ಧಾರುಣ ಘಟನೆ ನಡೆದಿತ್ತು. ಹೌದು, ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ, ಓರ್ವ ಮಹಿಳೆ ಹಸೀನಾ ಹಾಗೂ ಆಕೆಯ 11ವರ್ಷದ ಬಾಲಕ ಅಫ್ನಾನ್, ಇಬ್ಬರು ಹೆಣ್ಣು ಮಕ್ಕಳಾದ ಅಯ್ನಾಝ್ ಮತ್ತು ಹಾಸೀಂ ಎಂಬುವವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಇದರ ಜೊತೆಗೆ ಕೊಲೆಯಾದ ಮಹಿಳೆ ಹಸೀನಾಳ ಅತ್ತೆಯ ಮೇಲೂ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ. ಈ ಪ್ರಕರಣಕ್ಕೆ ಸಂಬಂಧಿದಂತೆ ತನಿಖೆ ಕೈಗೊಂಡ ಪೊಲೀಸರು, ಆರೋಪಿ ಪತ್ತೆಯಾಗಿ ಬರೊಬ್ಬರಿ 5 ತಂಡಗಳನ್ನು ರಚನೆ ಮಾಡಿದ್ದರು. ಅದರಂತೆ ಇದೀಗ ಕುಡಚಿಯಲ್ಲಿ ಹಂತಕ ಸಿಕ್ಕಿಬಿದ್ದಿದ್ದು, ಪೊಲೀಸರು ಆತನನ್ನು ಉಡುಪಿಗೆ ಕರೆದೊಯ್ದಿದ್ದಾರೆ.