ನೀರಿನ ಗುಂಡಿಗೆ ಬಿದ್ದ ಕಾರು; ನಾಲ್ವರು ಯುವಕರು ಜಲ ಸಮಾಧಿ..!
ಚಿಕ್ಕಬಳ್ಳಾಪುರ: ರಸ್ತೆ ಬದಿಯಲ್ಲಿದ್ದ ನೀರಿನ ಗುಂಡಿಗೆ ಬಿದ್ದು ಬೆಂಗಳೂರು ನೋಂದಣಿ ಕಾರಿನಲ್ಲಿದ್ದ (Car) ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ.
ಚಿಕ್ಕಬಳ್ಳಾಪುರದ ಬೈಪಾಸ್ ಕೆಳಗಿನ ತೋಟದ ಬಳಿಯ ಅಂಜನೇಯ ಸ್ವಾಮಿ ದೇವಾಲಯದ ಮುಂದೆ ಈ ಘಟನೆ ನಡೆದಿದೆ.
ಶನಿವಾರ ರಾತ್ರಿ ಅತಿ ವೇಗದಿಂದ (Over Speed) ಬಂದ KA 03 MT 0761 ನಂಬರಿನ ಪೊಲೋ ವೋಕ್ಸ್‌ವಾಗನ್ ಕಾರು ರಸ್ತೆ ಬದಿಯ ನೀರಿಗೆ ಬಿದ್ದು ಈ ದುರಂತ ಸಂಭವಿಸಿದೆ. ಕಾರಿನಲ್ಲಿದ್ದವರು ಬೆಂಗಳೂರಿನಿಂದ ಬಾಗೇಪಲ್ಲಿಗೆ ತೆರಳುತ್ತಿದ್ದರು. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು ಹೈದರಾಬಾದ್ ಹೆದ್ದಾರಿಯ ಅಂಡರ್ ಪಾಸ್‌ನ ಗುಂಡಿಯೊಳಗೆ ಕಾರು ಬಿದ್ದಿದೆ. ಗುಂಡಿಯೊಳಗೆ ಸಂಪೂರ್ಣವಾಗಿ ಕಾರು ಮುಳುಗಿದ್ದರಿಂದ ನಾಲ್ವರು ಯುವಕರು ಜಲ ಸಮಾಧಿಯಾಗಿದ್ದಾರೆ. ಅಗ್ನಿ ಶಾಮಕ ದಳ, ಪೊಲೀಸರು ನೀರಿನಿಂದ ಕಾರನ್ನು ಮೇಲಕ್ಕೆ ಎತ್ತಿದ್ದಾರೆ.
ಮಗಳನ್ನು ಕೊಂದು ರೆಸಾರ್ಟ್‌ನಲ್ಲಿ ತಂದೆ-ತಾಯಿ ನೇಣಿಗೆ ಶರಣು
ಮಡಿಕೇರಿ: ಮಗಳನ್ನು (Daughter) ಉಸಿರುಗಟ್ಟಿಸಿ ಕೊಂದು ತಂದೆ-ತಾಯಿ ನೇಣಿಗೆ ಕೊರಳೊಡ್ಡಿದ ಘಟನೆ ಮಡಿಕೇರಿ (Madiekri) ತಾಲೂಕಿನ ಕಗ್ಗೋಡ್ಲು ಗ್ರಾಮದ ರೆಸಾರ್ಟ್‌ವೊಂದರಲ್ಲಿ (Resort) ನಡೆದಿದೆ.
ಮೂಲತಃ ಕೇರಳ (Kerala) ರಾಜ್ಯದ ಕೊಲ್ಲಂ ನಿವಾಸಿ ವಿನೋದ್ ಬಾಬುಸೇನಾನ್ (41), ಪತ್ನಿ ಝುಬಿ ಅಬ್ರಹಾಂ (37) ಹಾಗೂ ಪುತ್ರಿ ಜೋಹನ್ (11) ಮೃತ ದುರ್ದೈವಿಗಳು. ಶುಕ್ರವಾರ ಸಂಜೆ 6 ಗಂಟೆಗೆ ಕ್ರೇಟಾ ಕಾರ್‌ನಲ್ಲಿ ಮಡಿಕೇರಿ ಸಮೀಪದ ಬಿಳಿಗೇರಿಯ ರೆಸಾರ್ಟ್‌ಗೆ ಆಗಮಿಸಿ ಪ್ರತ್ಯೇಕ ಕಾಟೇಜ್ ಪಡೆದ ಕುಟುಂಬ ಕೆಲ ಹೊತ್ತು ವಿಶ್ರಮಿಸಿ ರೆಸಾರ್ಟ್‌ನಲ್ಲಿ ಕಾಲಕಳೆದಿದ್ದಾರೆ. ಮೂವರು ರೆಸಾರ್ಟ್‌ಗೆ ಬರುವ ಸಮಯದಲ್ಲಿ ಲವಲವಿಕೆಯಿಂದ ಇದ್ದರು. ರಾತ್ರಿ ಊಟ ಮಾಡಿ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಂದಿಗೆ ಕೇರಂ ಆಡಿದ್ದಾರೆ. ನಂತರ ರಾತ್ರಿ ಕೊಠಡಿ ಸೇರಿದ ಕುಟುಂಬ ಶನಿವಾರ ಬೆಳಗ್ಗೆ 10 ಗಂಟೆಗೆ ಚೆಕ್ ಔಟ್ ಆಗುವುದಾಗಿ ತಿಳಿಸಿದ ಮೇರೆಗೆ ರೂಂ ಬಾಯ್ ಬೆಳಗ್ಗೆ 10 ಗಂಟೆಗೆ ಬಾಗಿಲು ತಟ್ಟಿದ್ದು, ಯಾರು ಪ್ರತಿಕ್ರಿಯೆ ನೀಡಲಿಲ್ಲ.
ಕುಟುಂಬ ಹೊರ ತೆರಳಿರಬಹುದು ಎಂದು ಭಾವಿಸಿ ಅರ್ಧ ಗಂಟೆ ಬಿಟ್ಟು ಮತ್ತೆ ಬಾಗಿಲು ತಟ್ಟಿದ್ದು, ಆಗಲೂ ಯಾರೂ ಪ್ರತಿಕ್ರಿಯಿಸದ ಕಾರಣ ಸಿಬ್ಬಂದಿ ಬೆಳಗ್ಗೆ 11 ಗಂಟೆಗೆ ಕಿಟಕಿಯ ಮೂಲಕ ನೋಡಿದಾಗ ಪತಿ-ಪತ್ನಿ ನೇಣಿಗೆ ಶರಣಾಗಿರುವುದು, ಮಗು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸಿಬ್ಬಂದಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತರ ಕುಟುಂಬಸ್ಥರನ್ನು ಸಂಪರ್ಕಿಸಿ ಅವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಬಾಗಿಲು ತೆರೆದು ಕೊಠಡಿಯೊಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. 450 ಕಿ.ಮೀ. ದೂರದ ಕೊಲ್ಲಂನಿಂದ ಕುಟುಂಬಸ್ಥರು ಆಗಮಿಸುತ್ತಿದ್ದಾರೆ. ಮೃತ ದಂಪತಿ (Couple) ಕೊಲ್ಲಂ ಸಮೀಪವೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದ್ದು, ಕುಟುಂಬಸ್ಥರ ಆಗಮನದ ಬಳಿಕವಷ್ಟೆ ಸಾವಿನ ಕಾರಣ ಹೊರಬೀಳಬೇಕಾಗಿದೆ. ಘಟನೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊದಲಿಗೆ ಮಗಳು ಜೋಹನ್‌ಳನ್ನು ಸಾಯಿಸಿ ಬಳಿಕ ದಂತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹಗಳನ್ನು ಪೊಲೀಸರು ಕೊಡಗು (Kodagu) ಜಿಲ್ಲಾಸ್ಪತ್ರೆಗೆ ಸಾಗಿಸಲಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರಿಂದ ತನಿಖೆ ಮುಂದುವರೆದಿದೆ.