ಟ್ರಕ್ಗೆ ಡಿಕ್ಕಿ ಹೊಡೆದ ಬಸ್; 14 ಮಂದಿ ಸಾವು- 27ಜನರಿಗೆ ಗಂಭೀರ ಗಾಯ...!

ಟ್ರಕ್ಗೆ ಬಸ್ ಡಿಕ್ಕಿ ಹಡೆದ ಪರಿಣಾಮ 14 ಮಂದಿ ಸಾವನ್ನಪ್ಪಿದ್ದು, 27ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಅಸ್ಸಾಂನ ದೇರ್ಗಾಂವ್ನಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಸುಮಾರು 5 ಗಂಟೆ ವೇಳೆ 45 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಟ್ರಕ್ಗೆ ಡಿಕ್ಕಿ ಹೊಡೆದಿತ್ತು, ಇದರಿಂದ ಕನಿಷ್ಠ 14 ಮಂದಿ ಸ್ಥಳದಲ್ಲೇ ಉಸಿರುಚೆಲ್ಲಿದ್ದಾರೆ.
ತಿನ್ಸುಕಿಯಾದ ತಿಲಿಂಗ ಮಂದಿರಕ್ಕೆ 45 ಸದಸ್ಯರನ್ನು ಒಳಗೊಂಡ ಬಸ್ ತೆರಳುತ್ತಿತ್ತು. ಪಿಕ್ನಿಕ್ಗೆಂದು ಜನರು ಬೆಳಗಿನ ಜಾವ 3 ಗಂಟೆಗೆ ಪ್ರಯಾಣವನ್ನು ಆರಂಭಿಸಿದ್ದರು.
ಮಾರ್ಗರಿಟಾದಿಂದ ಬರುತ್ತಿದ್ದ ಕಲ್ಲಿದ್ದಲು ತುಂಬಿದ ಟ್ರಕ್ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಪ್ರಯಾಣಿಕರನ್ನು ರಕ್ಷಿಸಿ ಜೋರ್ಹತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ.
ಗಾಯಗೊಂಡಿರುವ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳದಲ್ಲೇ ಸಾವನ್ನಪ್ಪಿದ 14 ಪ್ರಯಾಣಿಕರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮುಷ್ಕರ ವಾಪಸ್ ಪಡೆದ ಟ್ರಕ್ ಚಾಲಕರು; ಜನರು ನಿರಾಳ
ನವದೆಹಲಿ, ಜ.2: ಕೇಂದ್ರದ ಹೊಸ ಕಾನೂನು ವಿರೋಧಿಸಿ ದೇಶಾದ್ಯಂತ ಟ್ರಕ್ ಚಾಲಕರು ಕರೆ ನೀಡಿದ್ದ ಮುಷ್ಕರವನ್ನು(Truck drivers strike) ವಾಪಸ್ ಪಡೆದಿದ್ದಾರೆ. ಕೇಂದ್ರ ಗೃಹ ಕಾರ್ಯದರ್ಶಿ ಜೊತೆ ಸಭೆ ನಂತರ ಮುಷ್ಕರ ವಾಪಸ್ ಪಡೆದಿದ್ದು, ಸರಕು ಸಾಗಣೆ ವಾಹನಗಳ ಚಾಲಕರು ನಾಳೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಸಭೆ ನಂತರ ಮಾತನಾಡಿದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, “ನಾವು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಹೊಸ ನಿಯಮವನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ಹೇಳಿದ್ದೇವೆ. ಭಾರತೀಯ ನ್ಯಾಯ ಸಂಹಿತಾ 106/2 ಅನ್ನು ಜಾರಿಗೊಳಿಸುವ ಮೊದಲು ನಾವು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ.
“ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಧಿಸಿದ್ದ ಹತ್ತು ವರ್ಷಗಳ ಶಿಕ್ಷೆ ಮತ್ತು ದಂಡವನ್ನು ತಡೆಹಿಡಿದಿದ್ದಾರೆ” ಎಂದು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಅಧ್ಯಕ್ಷ ಅಮೃತ್ ಲಾಲ್ ಮದನ್ ಹೇಳಿದ್ದಾರೆ.
ಹಿಟ್ & ರನ್ ಕೇಸ್ನಲ್ಲಿ 10 ವರ್ಷ ಜೈಲು, 7 ಲಕ್ಷ ರೂ. ದಂಡ ವಿಧಿಸುವ ಕೇಂದ್ರದ ಹೊಸ ಕಾನೂನು ವಿರೋಧಿಸಿ ಟ್ರಕ್ ಚಾಲಕರು ಮುಷ್ಕರ ನಡೆಸುತ್ತಿದ್ದರು. ಈ ಮುಷ್ಕರದ ಬಿಸಿ ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ತಟ್ಟಿತ್ತು.
ಸೊಲ್ಲಾಪುರ, ಕೊಲ್ಹಾಪುರ, ನಾಗ್ಪುರ ಜಿಲ್ಲೆಗಳಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ವೇಳೆ ಚಾಲಕರು ಪೊಲೀಸರ ಜೊತೆ ಸಂಘರ್ಷಕ್ಕೆ ಇಳಿದಿದ್ದರು. ಇನ್ನೊಂದೆಡೆ, ಟ್ರಕ್ ಚಾಲಕರ ಮುಷ್ಕರ ಹಿನ್ನೆಲೆ ಪೆಟ್ರೋಲ್, ಡೀಸೆಲ್ ಸಾಗಣೆಗೆ ಅಡ್ಡಿ ಉಂಟಾಗಿತ್ತು. ಎಲ್ಲಿ ಇಂಧನ ಸಿಗುವುದಿಲ್ಲವೋ ಎಂಬ ಭೀತಿಯಿಂದ ಬಂಕ್ಗಳಿಗೆ ಮುಗಿಬಿದ್ದ ಜನರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಖರೀದಿಸಿದ್ದರು.
ಅಗತ್ಯಕ್ಕಿಂತ ಹೆಚ್ಚು ಪೆಟ್ರೋಲ್, ಡೀಸೆಲ್ ತುಂಬಿಸಿಕೊಂಡಿದ್ದರ ಪರಿಣಾಮ ದೇಶದ ಹಲವೆಡೆ ಪೆಟ್ರೋಲ್, ಡೀಸೆಲ್ ಖಾಲಿಯಾಗಿತ್ತು. ಸದ್ಯ ಟ್ರಕ್ ಚಾಲಕರು ಮುಷ್ಕರ ಹಿಂಪಡೆದಿದ್ದರಿಂದ ಜನರು ನಿರಾಳರಾಗಿದ್ದಾರೆ.