ಕ್ರಿಕೆಟ್ ಆಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು!
ಧಾರವಾಡ: ಕ್ರಿಕೆಟ್ ಆಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ (Electric Shock) 16 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಧಾರವಾಡ ನಗರದ (Dharwad City) ಮದಿಹಾಳ ಸಿದ್ದರಾಮ ಕಾಲೊನಿಯಲ್ಲಿ ನಡೆದಿದೆ.
ಶ್ರೇಯಸ್ ಸಿನ್ನೂರ (16) ಮೃತ ಬಾಲಕ. ತನ್ನ ಮನೆಯ ಹಿಂದೆ ಕ್ರಿಕೆಟ್ (Cricket) ಆಡಲು ಹೋಗಿದ್ದು, ಆಟದ ವೇಳೆ ಬಾಲ್ ಹಿಡಿಯಲು ಹೋದಾಗ ಶ್ರೇಯಸ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ.
ಶ್ರೇಯಸ್ ತನ್ನ ಪೋಷಕರಿಗೆ ಒಬ್ಬನೇ ಮಗನಾಗಿದ್ದ. ಧಾರವಾಡ ರಾಜೀವ್ ಗಾಂಧಿ ಶಾಲೆಯಲ್ಲಿ SSLC ಓದುತಿದ್ದ. ಸಂಜೆ ಶಾಲೆಯಿಂದ ಬಂದ ಮಗ ಮನೆಯಲ್ಲಿ ಕುಳಿತಾಗ ಗೆಳೆಯ ಆಟಕ್ಕೆ ಕರೆದಿದ್ದಾನೆ. ತಮ್ಮ ಮನೆಯ ಹಿಂದೆ ಕಾಮಗಾರಿ ಪ್ರಗತಿಯಲ್ಲಿದ್ದ ಕಟ್ಟದ ಬಳಿ ಕ್ರಿಕೆಟ್ ಆಡಲು ಹೋದ ಶ್ರೇಯಸ್‌ಗೆ 10 ನಿಮಿಷದಲ್ಲಿ ಕರೆಂಟ್ ಶಾಕ್‌ಗೆ ತಗುಲಿದೆ. ವಿಷಯ ತಿಳಿಯುತ್ತಿದ್ದಂತೆ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೂಡಲೇ ಮಗನನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಪ್ರಯೋಜನವಾಗಲಿಲ್ಲ ಎಂದು ಮೃತ ಬಾಲಕನ ತಂದೆ ಅಶೋಕ್ ತಿಳಿಸಿದ್ದಾರೆ
ಇನ್ನೂ ಶ್ರೇಯಸ್ ಉಳಿಸಲು ಹೋಗಿದ್ದ 10 ವರ್ಷದ ಮತ್ತೋರ್ವ ಬಾಲಕ ಪ್ರಣವ್ ಎಂಬಾತನಿಗೂ ವಿದ್ಯುತ್ ಸ್ಪರ್ಶಿಸಿ ಸುಟ್ಟ ಗಾಯಗಳಾಗಿವೆ. ಗಾಯಗೊಂಡಿರುವ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಮೃತ ಶ್ರೇಯಸ್‌ನ ಮೃತದೇಹವನ್ನು ಇಲ್ಲಿನ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಇತ್ತ ಮಗನನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ಧಾರವಾಡದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಗ್ರಾಮ ಪಂಚಾಯತಿ ಸದಸ್ಯನ ಹತ್ಯೆ ಪ್ರಕರಣ- ಆರೋಪಿಗಳಿಬ್ಬರು ಅರೆಸ್ಟ್
ಹುಬ್ಬಳ್ಳಿ: ಕಲಘಟಗಿಯ ಬಗಡಗೇರಿಯಲ್ಲಿ ನಡೆದಿದ್ದ ಗ್ರಾಮ ಪಂಚಾಯತಿ ಸದಸ್ಯನ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಗ್ರಾಮದ ಮಲ್ಲಪ್ಪ ದಂಡಿನ ಹಾಗೂ ನಾಗಪ್ಪ ದಂಡಿನ ಎಂದು ಗುರುತಿಸಲಾಗಿದೆ. ಆರೋಪಿಗಳು ಗುರುವಾರ ಸಂಜೆ ಗ್ರಾಮ ಪಂಚಾಯತಿ ಸದಸ್ಯ ನಿಂಗಪ್ಪ ದಾಸಪ್ಪ ಎಂಬವರ ಜೊತೆ ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿದ್ದರು. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿ ನಿಂಗಪ್ಪನ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದರು.
ಕೊಲೆಗೈದ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಪ್ರಕರಣ ದಾಖಲಾದ 24 ಗಂಟೆಗಳಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಕಲಘಟಗಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.