ಮರದ ಕೆಳಗೆ ಮಲಗಿ ವಿಶ್ರಾಂತಿ ಪಡೆದು ಎಚ್ಚರವಾದಾಗ ವ್ಯಕ್ತಿಗೆ ಶಾಕ್ ! ತನ್ನ ಶರ್ಟ್ ಒಳಗಡೆ ಹರಿದಾಡುತ್ತಿದ್ದ ನಾಗರಹಾವು
ನವದೆಹಲಿ: ಈತ, ಮೈ ತುಂಬಾ ದುಡಿದು, ಆರಾಮವಾಗಿ ಮರದ ಕೆಳಗಡೆ ಮಲಗಿದ್ದ. ಎದ್ದಾಗ ಷರ್ಟ್ ಒಳಗಡೆ ಏನೋ ತಣ್ಣಗೆ ಹರಿದಾಡಿದ ಅನುಭವ. ಏನೆಂದೇ ತಿಳಿಯುತ್ತಿಲ್ಲ. ಆದರೆ ಒಮ್ಮೆಲೆ, ಷರ್ಟ್ ಗುಂಡಿಗಳ ನಡುವಿನಿಂದ ಫಳಫಳನೆ ಹೊಳೆಯುತ್ತಿರುವ ಎರಡು ಕಣ್ಣುಗಳು ಕಂಡಿವೆ. ನೋಡನೋಡುತ್ತಿದ್ದಂತೆಯೇ ಅಲ್ಲಿ ಕರಿ ನಾಗರಹಾವಿನ ತಲೆ ಕಂಡಿದೆ! ಆ ವ್ಯಕ್ತಿಗೆ ಹೇಗೆ ಪ್ರತಿಕ್ರಿಯಿಸಬೇಕು? ಇಲ್ಲಿದೆ ಸಂಪೂರ್ಣ ವಿವರ…
ಈ ವಿಡಿಯೋವನ್ನು ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ತಿಳಿದು ಬರದೇ ಇದ್ದರೂ ಈ ವಿಡಿಯೋದಲ್ಲಿರುವ ವಿಚಾರ ಮಾತ್ರ ಭಯಾನಕ. ಈ ವೀಡಿಯೊದಲ್ಲಿ ಕೆಲವರು ಈತನ ಷರ್ಟ್‌ಗೆ ನುಗ್ಗಿದ ನಾಗರಹಾವನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವ್ಯಕ್ತಿ ತೆರೆದ ಮೈದಾನದಲ್ಲಿ ಕೋಳಿನಿದ್ದೆ ಮಾಡುತ್ತಿದ್ದಾಗ ಹಾವು ಆತನ ಷರ್ಟ್ ಒಳಗೆ ನುಗ್ಗಿದೆ. ವಿಚಿತ್ರ ಎಂದರೆ, ಈತ ಎಚ್ಚರವಾದಾಗ ಹಾವೂ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಅಲ್ಲಿದ್ದವರು, ಷರ್ಟ್ನ ಗುಂಡಿಗಳನ್ನು ಒಂದೊಂದಾಗಿಯೇ ಬಿಚ್ಚಿ ವ್ಯಕ್ತಿಯನ್ನೂ ಹಾವನ್ನೂ ಕಾಪಾಡಿದ್ದಾರೆ. ಹಾವು ಎಲ್ಲಾದರೂ ಆ ವ್ಯಕ್ತಿಗೆ ಕಚ್ಚಿದ್ದರೆ, ಅದೂ ಸಾಯುವ ಸಾಧ್ಯತೆ ಇತ್ತು. ಅದೃಷ್ಟವಶಾತ್, ವ್ಯಕ್ತಿಯು ಹಾವಿನಿಂದ ಕಚ್ಚಿಸಿಕೊಳ್ಳದೇ ಯಾವುದೇ ಅಪಾಯವಾಗದೇ ಪಾರಾಗಿದ್ದಾನೆ. ವಿಡಿಯೋದ ಕೊನೆಗೆ ಬೃಹತ್ ಗಾತ್ರದ ನಾಗರಹಾವು ಸ್ಥಳದಿಂದ ದೂರ ಸರಿಯುತ್ತಿರುವುದನ್ನು ನಾವು ಕಾಣಬಹುದಾಗಿದೆ.
ಮರದ ಕೆಳಗೆ ಇನ್ನುಮುಂದೆ ನೀವು ನಿದ್ದೆ ಮಾಡುತ್ತೀರಿ ಎಂದಾದರೆ, ಈ ವಿಡಿಯೋ ನಿಮಗೆ ಎಚ್ಚರಿಕೆಯ ಕರೆಗಂಟೆಯೇ ಹೌದು!
ನಿರಂತರ ಮಳೆ: ಒಂದೇ ದಿನಕ್ಕೆ 198 ಮನೆ, ಒಟ್ಟು 692 ಮನೆ ನೆಲಸಮ!
ಧಾರವಾಡ (ಜು.29) : ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೂರಾರು ಬಡ ಕುಟುಂಬಗಳು ಸೂರು ಕಳೆದುಕೊಂಡು ಅವರ ಬದುಕು ಅತಂತ್ರವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಒಂದೊಂದು ಕುಟುಂಬದ ಸ್ಥಿತಿ ಹೇಳತೀರದು.
ಜಿಲ್ಲೆಯ ಎಲ್ಲೆಡೆ ಒಂದೊಂದು ರೀತಿಯ ಪ್ರಕರಣಗಳಿದ್ದರೆ, ತಾಲೂಕಿನ ಲಕಮಾಪುರ ಗ್ರಾಮದೊಳಗೆ ಹೋಗುತ್ತಿದ್ದಂತೆಯೇ ಬಹುತೇಕ ಕಡೆಗಳಲ್ಲಿ ಮಳೆಯಿಂದ ಕುಸಿದು ಬಿದ್ದ ಮನೆಗಳ ದೃಶ್ಯಗಳೇ ಕಣ್ಣಿಗೆ ಬೀಳುತ್ತವೆ. ಈ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಲ್ಲಿ ನೂರಾರು ಮನೆಗಳು ಮಳೆಯಿಂದಾಗಿ ಕುಸಿದು ಬಿದ್ದಿವೆ. ಈ ಬಾರಿ ವಾರವಿಡೀ ಸುರಿದ ಮಳೆಗೆ ಲಕಮಾಪೂರ ಗ್ರಾಮದ ಇಮಾಂಬಿ ಅವರ ಮನೆಯೂ ಬಿದ್ದಿದೆ. ಮನೆಯ ಚಾವಣಿ ಕುಸಿದು ಬಿದಿದ್ದು, ಮನೆಯವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಪರ್ಯಾಸವೆಂದರೆ ಬೇರೆ ಕಡೆ ವಾಸ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೇ ಮನೆಯಲ್ಲಿ ವಾಸ್ತವ್ಯ ಮುಂದುವರೆಸಿದ್ದಾರೆ.
ಇದೇ ಗ್ರಾಮದ ಖಾದರ್ ಸಾಬ್ ನದಾಫ್ ಎಂಬುವರು ಪಾಶ್ರ್ವವಾಯು ಪೀಡಿತರು. ಕಳೆದ ವರ್ಷ ಸುರಿದಿದ್ದ ಮಳೆಗೆ ಅವರ ಈ ಮನೆ ಬಿದ್ದಿತ್ತು. ಅದಾಗಿ ವರ್ಷವೇ ಉರುಳಿದರೂ ಇವರಿಗೆ ಪರಿಹಾರ ಬಂದಿಲ್ಲ. ಶ್ರೀಮಂತರ ಮನೆ ಕೊಂಚ ಬಿದ್ದಿದ್ದರೂ ಅವರಿಗೆ .5 ಲಕ್ಷ ಪರಿಹಾರ ಸಿಕ್ಕಿದೆ. ಆದರೆ ಬಡವರ ಮನೆ ಸಂಪೂರ್ಣ ಬಿದ್ದರೂ ಅವರಿಗೆ ಒಂದು ರೂಪಾಯಿ ಪರಿಹಾರ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗಾಗಿ ಕಳೆದ ವರ್ಷವೇ ಬಿದ್ದ ಮನೆಗೆ ಪರಿಹಾರ ಸಿಕ್ಕಿಲ್ಲ. ಅಂದರೆ ಈ ಬಾರಿ ಬಿದ್ದ ಮನೆಗಳಿಗೆ ಅದೆಲ್ಲಿಯ ಪರಿಹಾರ ಸಿಗುತ್ತೆ ಎಂಬುದು ಅವರ ಪ್ರಶ್ನೆಯಾಗಿದೆ.
ಜಿಲ್ಲಾಡಳಿತದ ಅಂಕಿ-ಅಂಶಗಳ ಪ್ರಕಾರ, ಜುಲೈ 26ರ ಬೆಳಗ್ಗೆ 8ರಿಂದ 27ರ ಬೆಳಗ್ಗೆ 8ರ ವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುಮಾರು 198 ಮನೆಗಳಿಗೆ ಹಾನಿಯಾಗಿದೆ. ಧಾರವಾಡ ತಾಲೂಕಿನಲ್ಲಿ 87, ಅಳ್ನಾವರದಲ್ಲಿ ನಾಲ್ಕು, ಹುಬ್ಬಳ್ಳಿ ಗ್ರಾಮೀಣದಲ್ಲಿ 11, ಹುಬ್ಬಳ್ಳಿ ಶಹರದಲ್ಲಿ ಐದು ಮತ್ತು 2 ತೀವ್ರ, ಕಲಘಟಗಿ ತಾಲೂಕಿನಲ್ಲಿ 45, ಕುಂದಗೋಳ ತಾಲೂಕಿನಲ್ಲಿ 26, ನವಲಗುಂದ ತಾಲೂಕಿನಲ್ಲಿ 10 ಮತ್ತು ಅಣ್ಣಿಗೇರಿ ತಾಲೂಕಿನಲ್ಲಿ 8 ಸೇರಿದಂತೆ ಜಿಲ್ಲೆಯ 8 ತಾಲೂಕಗಳಲ್ಲಿನ ಸುಮಾರು 198 ಮನೆಗಳಿಗೆ ಹಾನಿಯಾಗಿದೆ. ಹಾಗೆಯೇ, ಜಿಲ್ಲೆಯ ವಿವಿಧ ತಾಲೂಕುಗಳ ವಿವಿಧ ಗ್ರಾಮ ಹಾಗೂ ನಗರಗಳಲ್ಲಿ ಮಳೆಯಿಂದಾಗಿ ಏಪ್ರಿಲ್ 1ರಿಂದ ಜುಲೈ 27ರ ವರೆಗೆ 677 ಮನೆಗಳಿಗೆ ಭಾಗಶಃ ಹಾಗೂ 15 ಮನೆಗಳಿಗೆ ತೀವ್ರತರವಾಗಿ ಹಾನಿಯಾಗಿದೆ. ಒಟ್ಟಾರೆ ಇಲ್ಲಿ ವರೆಗೆ ಸುಮಾರು 692 ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದ ಬಂದಿದೆ.