29ನೇ ಮಹಡಿಯಿಂದ ಬಿದ್ದು 12ವರ್ಷದ ಬಾಲಕಿ ಆತ್ಮಹತ್ಯೆ
ಬೆಂಗಳೂರು: 29ನೇ ಮಹಡಿಯಿಂದ ಬಿದ್ದು 12ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಗೂರು ಬಳಿಯ ಅಪಾರ್ಟ್‍ಮೆಂಟ್ ಒಂದರಲ್ಲಿ ನಡೆದಿದೆ.
ಬಾಲಕಿ ಅಪಾರ್ಟ್‍ಮೆಂಟ್‍ನಲ್ಲಿ ತಂದೆ – ತಾಯಿ ಜೊತೆ ವಾಸವಾಗಿದ್ದಳು. ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಳು ಎನ್ನಲಾಗಿದೆ. ಬಾಲಕಿಯ ತಂದೆ ಸಾಫ್ಟ್‌ವೇರ್ ಎಂಜಿನಿಯರ್, ತಾಯಿ ಗೃಹಿಣಿಯಾಗಿದ್ದಾರೆ. ಬಾಲಕಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಬಾಲಕಿ ಮಂಗಳವಾರ ರಾತ್ರಿ ಮಲಗಿದ್ದ ವೇಳೆ, ಇದ್ದಕ್ಕಿದ್ದಂತೆ ಮುಂಜಾನೆ 4:30ಕ್ಕೆ ಎದ್ದು ಹಾಲ್‍ಗೆ ಬಂದಿದ್ದಳು. ಈ ವೇಳೆ ಬಾಲಕಿಯನ್ನು ಆಕೆಯ ತಾಯಿ ವಿಚಾರಿಸಿದಾಗ, ಸರಿಯಾಗಿ ಉತ್ತರಿಸದೆ ಮತ್ತೆ ಮಲಗುವುದಾಗಿ ರೂಮಿಗೆ ತೆರಳಿದ್ದಳು. ಸುಮಾರು 5 ಗಂಟೆ ವೇಳೆಗೆ ಬಾಲಕಿ ಅಪಾರ್ಟ್‍ಮೆಂಟ್ ಮೇಲಿನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಜೋರಾದ ಶಬ್ದ ಕೇಳಿ ಸೆಕ್ಯೂರಿಟಿ ಹೊರಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಪೋಷಕರಿಗೆ ಹಾಗೂ ಅಪಾರ್ಟ್‍ಮೆಂಟ್ ಅಸೋಸಿಯೇಷನ್‍ಗೆ ಸೆಕ್ಯೂರಿಟಿ ಮಾಹಿತಿ ನೀಡಿದ್ದರು.
ಈ ಸಂಬಂಧ ಹುಳಿಮಾವು (Hulimavu) ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ
ಬೆಂಗಳೂರು: ಜಯದೇವ ಆಸ್ಪತ್ರೆ ನಿರ್ದೇಶಕರನ್ನಾಗಿ ಡಾ. ಮಂಜುನಾಥ್‍ರನ್ನು (Dr Manjunath) ಮುಂದುವರಿಸುವ ನಿರ್ಧಾರವನ್ನು ಸರ್ಕಾರ ಕೈ ಬಿಟ್ಟಿದೆ. ಜನವರಿ 31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ (Jayadeva Hospital Director) ಡಾ. ಮಂಜುನಾಥ್ ಅವಧಿ ಮುಕ್ತಾಯವಾಗಲಿದೆ.
ಕಳೆದ ಬಾರಿ ಅವಧಿ ಮುಕ್ತಾಯ ಬಳಿಕ ಜನರ ಒತ್ತಾಯ ಕೇಳಿ ಬಂದ ಹಿನ್ನೆಲೆ 6 ತಿಂಗಳ ಕಾಲ ಹುದ್ದೆಯಲ್ಲಿ ಸರ್ಕಾರ ಮುಂದುವರಿಸಿತ್ತು. ಎನ್‍ಎಂಸಿ ಆಕ್ಟ್ ಪ್ರಕಾರ 70 ವರ್ಷದವರೆಗೂ ಸೇವೆ ಸಲ್ಲಿಸಬಹುದಾಗಿದೆ. ಡಾ. ಮಂಜುನಾಥ್ ಅವರಿಗೆ 67 ವರ್ಷವಾಗಿದ್ದು, ಇನ್ನು 3 ವರ್ಷಗಳ ಕಾಲ ಸೇವೆ ಸಲ್ಲಿಸಬಹುದಾಗಿದೆ. ಆದರೆ ಸರ್ಕಾರ ಮುಂದುವರಿಸುವ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಜನವರಿ 31ಕ್ಕೆ ಡಾ. ಮಂಜುನಾಥ್ ನಿವೃತ್ತಿ ಘೋಷಣೆ ಮಾಡಲಿದ್ದಾರೆ.
ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದ್ದು, 15ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ನಡುವೆ ಮೈಸೂರು ಮೂಲದ ಸಿಎಂ ಆಪ್ತರಿಗೆ ನಿರ್ದೇಶಕರ ಹುದ್ದೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಅನ್ನೋ ಚರ್ಚೆ ಜೋರಾಗಿದೆ.
ಚುನಾವಣೆಗೆ ಸ್ಪರ್ಧಿಸ್ತಾರೆ ಎಂಬ ಚರ್ಚೆ ಜೋರಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಾ.ಮಂಜುನಾಥ್ ಅವರು, ಆ ರೀತಿ ಏನಿಲ್ಲ ಚುನಾವಣೆಗೆ ನಿಲ್ಲೊಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.