ಹುಟ್ಟು ಹಬ್ಬದಂದು ಆನ್‌ಲೈನ್ ನಲ್ಲಿ ತರಿಸಿದ ಕೇಕ್ ತಿಂದು 10 ವರ್ಷದ ಬಾಲಕಿ ಸಾವು..!
10ನೇ ವರ್ಷದ ಖುಷಿಯಲ್ಲಿದ್ದ ಬಾಲಕಿಯೊಬ್ಬಳಿಗೆ ಅದೇ ದಿನ ಸಾವು ಬರುತ್ತದೆ, ಅದು ಕೂಡ ಕೇಕ್‌ನಿಂದ ಎನ್ನುವ ಕಲ್ಪನೆ ಕೂಡ ಇರಲಿಲ್ಲ. ಹುಟ್ಟು ಹಬ್ಬ ಆಚರಣೆಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಕೇಕ್ ತಿಂದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಕಳೆದ ವಾರ ಪಂಜಾಬ್‌ನಲ್ಲಿ 10 ವರ್ಷದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದಂದು ಕೇಕ್ ತಿಂದ ಬಳಿಕ ಸಾವನ್ನಪ್ಪಿದ್ದಾಳೆ. ಹುಡುಗಿಯ ತಂಗಿ ಸೇರಿದಂತೆ ಇಡೀ ಕುಟುಂಬ ಕೇಕ್ ತಿಂದ ನಂತರ ಅಸ್ವಸ್ಥಗೊಂಡಿತು ಎಂದು ಆಕೆಯ ತಾತ ಮಾಹಿತಿ ನೀಡಿದ್ದಾರೆ.
ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಕೇಕ್ ಆರ್ಡರ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಾವನ್ನಪ್ಪಿದ ಬಾಲಕಿಯನ್ನು ಮಾನ್ವಿ ಎಂದು ಗುರುತಿಸಲಾಗಿದೆ. ಸಾಯುವ ಕೆಲವೇ ಗಂಟೆಗಳ ಮೊದಲು, ತನ್ನ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಕೇಕ್ ತಿಂದ ಕುಟುಂಬ ಅಸ್ವಸ್ಥ
ಮಾರ್ಚ್ 24 ರಂದು ರಾತ್ರಿ 7 ಗಂಟೆ ಸುಮಾರಿಗೆ ಮಾನ್ವಿ ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸಿದ್ದಾಳೆ. ರಾತ್ರಿ 10 ಗಂಟೆ ವೇಳೆಗೆ ಇಡೀ ಕುಟುಂಬದ ಸದಸ್ಯರು ಅಸ್ವಸ್ಥಗೊಂಡಿದ್ದಾರೆ ಎಂದು ಸಾನ್ವಿ ಅಜ್ಜ ಹರ್ಬನ್ ಲಾಲ್ ಹೇಳಿದ್ದಾರೆ. ಇಬ್ಬರು ಬಾಲಕಿಯರು ಸ್ವಲ್ಪ ಸಮಯದ ನಂತರ ವಾಂತಿ ಮಾಡಲು ಪ್ರಾರಂಭಿಸಿದರು. ಮಾನ್ವಿ ನೀರು ಕೇಳಿದಳು, ತೀವ್ರ ಬಾಯಾರಿಕೆ ಆಗುತ್ತಿದೆ ಎಂದಳು, ಬಳಿಕ ಅವಳು ಮಲಗಲು ಹೋದಳು ಎಂದು ಅವರು ಹೇಳಿದರು.
ಮರುದಿನ ಬೆಳಗ್ಗೆ ಆಕೆಯ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆಕೆಗೆ ಆಕ್ಸಿಜನ್ ಸಹಾಯ ನೀಡಲಾಯಿತು. ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಾಮ್), ಹೃದಯದ ವಿದ್ಯುತ್ ಚಟುವಟಿಕೆಯ ರೆಕಾರ್ಡಿಂಗ್ – ನಡೆಸಲಾಯಿತು ಎಂದು ಹರ್ಬನ್ ಲಾಲ್ ಹೇಳಿದರು. ಆದರೆ ವೈದ್ಯರಿಗೆ ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಹೇಳಿದ್ದಾರೆ.
ಕೇಕ್ ಕನ್ಹಾ’ ಎನ್ನುವ ಬೇಕರಿಯಲ್ಲಿ ಆರ್ಡರ್ ಮಾಡಲಾಗಿದ್ದ ಚಾಕೊಲೇಟ್ ಕೇಕ್ ನಲ್ಲಿ ವಿಷಕಾರಿ ಅಂಶವಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ. ಬೇಕರಿ ಮಾಲೀಕರ ವಿರುದ್ಧಎಫ್‌ಐಆರ್ ದಾಖಲಿಸಲಾಗಿದೆ. “ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಕೇಕ್‌ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ, ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ” ಎಂದು ಪೊಲೀಸರು ಹೇಳಿದ್ದಾರೆ.