ಜಸ್ಪ್ರೀತ್ ಬುಮ್ರಾ ನಾಯಕನ ಆಟ; ಆಸೀಸ್ ವಿರುದ್ಧ ದಾಖಲೆಯ 295 ರನ್ ಗಳಿಂದ ಗೆದ್ದ ಭಾರತ
ಪರ್ತ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಇದು ಆಸ್ಟ್ರೇಲಿಯಾದಲ್ಲಿ ಅತಿದೊಡ್ಡ ಟೆಸ್ಟ್ ಗೆಲುವು ಎಂಬುದು ವಿಶೇಷ. ಇದಕ್ಕೂ ಮುನ್ನ 1977 ರಲ್ಲಿ ಮೆಲ್ಬೋರ್ನ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 222 ರನ್ಗಳ ಗೆಲುವು ದಾಖಲಿಸಿದ್ದು ಇದುವರೆಗಿನ ಶ್ರೇಷ್ಠ ಜಯವಾಗಿತ್ತು. ಇದೀಗ ಬರೋಬ್ಬರಿ 47 ವರ್ಷಗಳ ಬಳಿಕ ಹೊಸ ಇತಿಹಾಸ ರಚಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಜಿಗಿದಿದೆ.
ಜಸ್ಪ್ರೀತ್ ಬುಮ್ರಾ (Jasprit Bumrah), ಸಿರಾಜ್, ಹರ್ಷಿತ್ ರಾಣಾ ಅವರ ಉರಿ ಚೆಂಡಿನ ವೇಗ ಒಂದುಕಡೆಯಾದ್ರೆ ಯಶಸ್ವಿ ಜೈಸ್ವಾಲ್, ಕಿಂಗ್ ಕೊಹ್ಲಿ, ಕೆ.ಎಲ್ ರಾಹುಲ್ ಅವರ ಬ್ಯಾಟಿಂಗ್ ದರ್ಬಾರ್ನಿಂದ ಭಾರತ, ಆಸೀಸ್ಗೆ ಪವರ್ ಪಂಚ್ ಕೊಟ್ಟಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಗೆಲುವು ಸಾಧಿಸಿ 1-0 ಮುನ್ನಡೆ ಕಾಯ್ದುಕೊಂಡಿದೆ.
ಈ ಹಿಂದೆ ಡಿಸೆಂಬರ್ 1977 ರಲ್ಲಿ ಆಸ್ಟ್ರೇಲಿಯಾದ MCG ಅಂಗಳದಲ್ಲಿ 222 ರನ್ ಗಳಿಂದ ಭಾರತ ಗೆಲುವು ಸಾಧಿಸಿ ದಾಖಲೆ ಮಾಡಿತ್ತು. ಆ ದಾಖಲೆಯನ್ನು ಈಗ ಮುರಿದಿದೆ. ಒಟ್ಟಾರೇ ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರೀ ರನ್ ಗಳಿಂದ ಜಯ ಗಳಿಸಿದ ಒಂಬತ್ತನೇ ಅತಿದೊಡ್ಡ ವಿಜಯವಾಗಿದೆ.
ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 150 ರನ್ಗಳಿಗೆ ಆಲೌಟ್ ಆದ ನಂತರ ನಂಬಲಾಗದ ರೀತಿಯಲ್ಲಿ ಕಂಬ್ಯಾಕ್ ಆಯಿತು. ನಾಯಕ ಜಸ್ಪ್ರೀತ್ ಬುಮ್ರಾ ಮೊದಲ ಇನಿಂಗ್ಸ್ನಲ್ಲಿ ಎಂಟು ವಿಕೆಟ್ಗಳನ್ನು ಕಬಳಿಸಿ ಆಸ್ಟ್ರೇಲಿಯಾವನ್ನು 104 ರನ್ಗಳಿಗೆ ಆಲೌಟ್ ಮಾಡಿದರು. ಎರಡನೇ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ (161) ಮತ್ತು ವಿರಾಟ್ ಕೊಹ್ಲಿ (100) ರನ್ ಗಳ ಬ್ಯಾಟಿಂಗ್ನೊಂದಿಗೆ ಭಾರತ ಉತ್ತಮ ರನ್ ಕಲೆಹಾಕಿತು.
ಮೊಹಮ್ಮದ್ ಸಿರಾಜ್ ಅವರು ಟೆಸ್ಟ್ನಲ್ಲಿ ಐದು ವಿಕೆಟ್ಗಳೊಂದಿಗೆ ಫಾರ್ಮ್ಗೆ ಮರಳಿದರು. ರಾಣಾ ಪಂದ್ಯದಲ್ಲಿ ನಾಲ್ಕು ವಿಕೆಟ್ಗಳನ್ನು ಕಬಳಿಸಿ ಸ್ಮರಣೀಯ ಚೊಚ್ಚಲ ಪಂದ್ಯವನ್ನು ಸಂಭ್ರಮಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ 487 ರನ್ ಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು, ಪ್ಯಾಟ್ ಕಮಿನ್ಸ್ ಪಡೆಗೆ ಗೆಲ್ಲಲು 533 ರನ್ ಬೃಹತ್ ಗುರಿ ನೀಡಿತ್ತು. ಎಂಟು ವಿಕೆಟ್ ಪಡೆದ ಜಸ್ಪ್ರೀತ್ ಬೂಮ್ರಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಮೊದಲ ಇನಿಂಗ್ಸ್ನಲ್ಲಿ 46 ರನ್ಗಳ ಹಿನ್ನಡೆ ಹೊಂದಿದ್ದ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 534 ರನ್ಗಳ ಗುರಿ ಪಡೆಯಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದ್ದರು. ಪರಿಣಾಮ 3ನೇ ದಿನದಾಟದ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ತಂಡವು 12 ರನ್ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು.
ಇನ್ನು ನಾಲ್ಕನೇ ದಿನದಾಟದ ಆರಂಭದಲ್ಲೇ ಮೊಹಮ್ಮದ್ ಸಿರಾಜ್ ಉಸ್ಮಾನ್ ಖ್ವಾಜಾ (4) ಹಾಗೂ ಸ್ಟೀವ್ ಸ್ಮಿತ್ (17) ವಿಕೆಟ್ ಪಡೆದರು. ಈ ಹಂತದಲ್ಲಿ ಜೊತೆಗೂಡಿದ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಚ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಈ ಹಂತದಲ್ಲಿ ಬುಮ್ರಾ ಟ್ರಾವಿಸ್ ಹೆಡ್ (89) ವಿಕೆಟ್ ಪಡೆದರೆ, ನಿತೀಶ್ ರೆಡ್ಡಿ ಮಿಚೆಲ್ ಮಾರ್ಷ್ (47) ಬೌಲ್ಡ್ ಮಾಡಿದರು. ಈ ಎರಡು ವಿಕೆಟ್ ಸಿಗುತ್ತಿದ್ದಂತೆ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್ಗಳು ಆಸ್ಟ್ರೇಲಿಯಾ ತಂಡವನ್ನು 238 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 295 ರನ್ಗಳ ಭರ್ಜರಿ ಜಯ ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ.
ಮುಂಬರುವ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ (WTC) ಫೈನಲ್ ಪ್ರವೇಶಿಸಬೇಕಾದರೆ ಸರಣಿಯಲ್ಲಿ 4-0 ಅಂತರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿರುವ ಟೀಮ್ ಇಂಡಿಯಾ, ಮೊದಲ ಟೆಸ್ಟ್ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡುವ ಮೂಲಕ ಬಲಿಷ್ಠ ಆಸ್ಪ್ರೇಲಿಯಾ (Australia) ತಂಡವನ್ನು ದಿಗ್ಭ್ರಮೆಗೊಳಿಸಿದೆ.