ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಯತ್ನಾಳ್ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ದಾವಣಗೆರೆ: ಕರ್ನಾಟಕದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಯಡಿಯೂರಪ್ಪ ಮತ್ತು ಅವರ ಪುತ್ರ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾರಣವೆಂದು ಶಾಸಕ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಇದಕ್ಕೆ ಬಿಎಸ್ವೈ ಬಣದ ಎಂಪಿ ರೇಣುಕಾಚಾರ್ಯ ಅವರು ಯತ್ನಾಳ್ಗೆ ತಿರುಗೇಟು ನೀಡಿದ್ದಾರೆ. ದಾವಣಗೆರೆಯಲ್ಲಿಂದು ಮಾತನಾಡಿದ ರೇಣುಕಾಚಾರ್ಯ, ಬಿಜೆಪಿ ಸೋಲಿಗೆ ಯತ್ನಾಳ್ನ ಹರಕು ಬಾಯಿ ಕಾರಣ ಎಂದು ತಿರುಗೇಟು ನೀಡಿದ್ದಾರೆ.
ದಾವಣಗೆರೆಯಲ್ಲಿ (Davanagere) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನ ಬೆಳಗಾದರೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸುತ್ತಾರೆ. ಬಸನಗೌಡ ಯತ್ನಾಳ್ ರಾಜ್ಯದಲ್ಲಿ ಪಕ್ಷದ ಹಿನ್ನಡೆಗೆ ನೇರ ಕಾರಣ. ರಾಜ್ಯದ ಜನ ಬಿವೈ ವಿಜಯೇಂದ್ರ ಅವರ ನಾಯಕತ್ವ ಒಪ್ಪಿದ್ದಾರೆ. ಇದೇ ಕಾರಣ ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಗಾಳಿ ಇದ್ದರೂ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ ಎಂದರು
ವಕ್ಫ್ ವಿರುದ್ಧ ಹೋರಾಟಕ್ಕೆ ನೇಮಕವಾದ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ವಿಜಯೇಂದ್ರ ಈ ಮೂರು ತಂಡಗಳು ಮಾತ್ರ ಅಧಿಕೃತ. ಯತ್ನಾಳ್ ತಂಡಕ್ಕೆ ಯಾರು ಬೆಲೆ ಕೊಡಬೇಡಿ. ಯಾವುದೇ ಕಾರಣಕ್ಕೂ ವಿಜಯೇಂದ್ರ ಅಧ್ಯಕ್ಷ ಸ್ಥಾನ ಬದಲಾಗಲ್ಲ. ಬರುವ ವಿಧಾನಸಭೆ ಚುನಾವಣೆ ವಿಜಯೇಂದ್ರ ನೇತ್ರತ್ವದಲ್ಲಿಯೇ ಎದುರಿಸಿ ಅಧಿಕಾರಕ್ಕೆ ಬರುತ್ತೇವೆ ಎಂದು ಕಿಡಿಕಾರಿದರು.
ಹನುಮಂತ ಸೋಲಿನಿಂದ ಜನಾರ್ದನ ರೆಡ್ಡಿಗೆ ಭಾರೀ ಹಿನ್ನಡೆ:
ಬಳ್ಳಾರಿ: ಸಂಡೂರು ಉಪಚುನಾವಣೆಯಲ್ಲಿ ಗೆದ್ದು ಬಳ್ಳಾರಿ ಜಿಲ್ಲಾ ರಾಜಕೀಯಕ್ಕೆ ಮರಳಿದ್ದನ್ನು ಅದ್ಧೂರಿಯಾಗಿ ಆಚರಿಸಲು ಬಯಸಿದ್ದ ಗಂಗಾವತಿ ಶಾಸಕ ಹಾಗೂ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸೋಲಿನಿಂದ ಭಾರೀ ಮುಖಭಂಗವಾಗಿದೆ.
ಉಪಚುನಾವಣೆಯಲ್ಲಿ ಚುನಾಯಿತ ಕಾಂಗ್ರೆಸ್ ಶಾಸಕ ಇ ಅನ್ನಪೂರ್ಣ ತುಕಾರಾಂ ಅವರಿಗೆ ಸಮಬಲದ ಪೈಪೋಟಿ ನೀಡಿದ ಸಂತಸದಲ್ಲಿ ಬಿಜೆಪಿ ಇದ್ದರೂ, ಫಲಿತಾಂಶ ಜನಾರ್ಧನ ರೆಡ್ಡಿಯವರಿಗೆ ತೀವ್ರ ಬೇಸರವನ್ನು ತರಿಸಿದೆ.
ಸಂಡೂರಿನ ಚುನಾವಣಾ ಕದನದಲ್ಲಿ ಹೊಸ ರಾಜಕೀಯ ಇತಿಹಾಸ ಸೃಷ್ಟಿಸಲು ಇರುವ ಎಲ್ಲ ಸಂಪನ್ಮೂಲಗಳನ್ನು ಜನಾರ್ದನ ರೆಡ್ಡಿ ಬಳಸಿದ್ದರು. ಶನಿವಾರ ಸಂಡೂರು ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 93,616 ಮತಗಳನ್ನು ಪಡೆದು ಜಯಗಳಿಸಿದ್ದು, ಎದುರಾಳಿ ಅಭ್ಯರ್ಥಿ ಬಂಗಾರು ಹನುಮಂತ 83,967 ಅವರು ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದ್ದಾರೆ.
9,649 ಮತಗಳ ಅಂತರದಿಂದ ಅನ್ನಪೂರ್ಣ ಅವರು ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಮತಗಳ ಹೆಚ್ಚಳದಿಂದ ಬಿಜೆಪಿ ನಾಯಕರು ಸಂತಸಗೊಂಡಿದ್ದಾರೆ.
ಚುನಾವಣೆಗೂ ಮುನ್ನ ಹೇಳಿಕೆ ನೀಡಿದ್ದ ಜನಾರ್ದನ ರೆಡ್ಡಿ ಅವರು ಸಂಡೂರು ಉಪಚುನಾವಣೆಯಲ್ಲಿ ಗೆದ್ದು, ಈ ಗೆಲುವನ್ನು ಪ್ರಧಾನಿ ಮೋದಿ ಅವರಿಗೆ ಉಡುಗೊರೆಯಾಗಿ ನೀಡುತ್ತೇನೆಂದು ಹೇಳಿದ್ದರು. ಆದರೆ, ಸಂಡೂರಿನ ಮತದಾರರು ಇದಕ್ಕೆ ಅವಕಾಶ ನೀಡಿಲ್ಲ.