Mangalore: ವಿಧಾನ ಪರಿಷತ್ ಉಪಚುನಾವಣೆ - ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಗೆಲುವು
Mangalore: ವಿಧಾನ ಪರಿಷತ್ ಉಪಚುನಾವಣೆ – ಇಡೀ ರಾಜ್ಯ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯತ್ತ ಗಮನ ಹರಿಸಿದ್ದರೆ ಅತ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು 1,697 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಕಿಶೋರ್ ಕುಮಾರ್ ಅವರು 3,654 ಮತ ಪಡೆದು ಗೆಲುವಿನ ನಗೆ ಬೀರಿದ್ದು, 1,957 ಮತ ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಎಸ್ಡಿಪಿಐನ ಅನ್ವರ್ ಸಾದತ್ 195 ಮತ ಪಡೆದರು.
ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ್ 9 ಮತ ಗಳಿಸಿರು. ಒಟ್ಟು 87 ಮತಗಳು ತಿರಸ್ಕೃತವಾಗಿದ್ದವು ಎನ್ನಲಾಗಿದೆ. ಈ ಕ್ಷೇತ್ರದಲ್ಲಿ 5,906 ಮತಗಳು ಚಲಾವಣೆಯಾಗಿದ್ದು, 5,819 ಸಿಂಧು ಮತಗಳಿದ್ದವು.
ಮತ ಎಣಿಕೆ ಇಲ್ಲಿನ ಕೊಡಿಯಾಲ್ ಬೈಲಿನ ಸೇಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆಯಿತು. ಕೇಂದ್ರ ಚುನಾವಣಾ ವೀಕ್ಷಕ ಪಂಕಜ್ ಕುಮಾರ್ ಪಾಂಡೆ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರ ಸಮ್ಮುಖದಲ್ಲಿ ಮತ ಎಣಿಕೆ ನಡೆಯಿತು. ಕಿಶೋರ್ ಗೆಲುವು ಸಾಧಿಸುತ್ತಿದ್ದಂತೆಯೇ ಪಿವಿಎಸ್ ವೃತ್ತದ ಬಳಿ ಇರುವ ಬಿಜೆಪಿ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಡಿಸೆಂಬರ್ 2021 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 3,672 ಮತ, ಮಂಜುನಾಥ ಭಂಡಾರಿ 2,079 ಮತ, ಎಸ್ಡಿಪಿಐ ಅಭ್ಯರ್ಥಿ 204 ಮತ ಪಡೆದಿದ್ದರು.
ಅಂದಹಾಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆ ಸ್ಥಾನ ಭರ್ತಿಗಾಗಿ ಉಪ ಚುನಾವಣೆ ನಡೆದಿದೆ. 2024 ರ ಅ.21ರಂದು ಮತದಾನ ನಡೆದಿತ್ತು.
ಚನ್ನಪಟ್ಟಣ ಕೈ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಕೆ:
ಬಿಜೆಪಿ, ಜೆಡಿಎಸ್ ಮಿತ್ರಪಕ್ಷಗಳ ನಾಯಕರ ಟಿಕೆಟ್ ಗುದ್ದಾಟವನ್ನೇ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ ಪಡೆ ಸಿಪಿ ಯೋಗೇಶ್ವರ್ರನ್ನ ಪಕ್ಷಕ್ಕೆ ಸೆಳೆದಿದ್ದರ ಜತೆಗೆ, ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ದಳಪತಿಗಳ ಸಾಮ್ರಾಜ್ಯ ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸಿದ್ದು, ಅಸಲಿ ಯುದ್ಧಕ್ಕೆ ರಣಕಹಳೆ ಊದಿದ್ದಾರೆ.
ಚನ್ನಪಟ್ಟಣದಲ್ಲೇ ತಂಗಿದ್ದ ಸಿಪಿವೈ ಮಂಗಳವಾರಪೇಟೆಯಲ್ಲಿರುವ ಬಸವನಗುಡಿಯಲ್ಲಿ ಪೂಜೆ ಸಲ್ಲಿಸಿ ಒಂದೂವರೆ ಕಿಲೋ ಮೀಟರ್ ಱಲಿ ನಡೆಸಿದರು. ಱಲಿಯಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡರು. ಱಲಿಯುದ್ದಕ್ಕೂ ಘೋಷಣೆ ಮೊಳಗಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಂಸದ ಡಿಕೆ ಸುರೇಶ್ ಱಲಿಯಲ್ಲಿ ಪಾಲ್ಗೊಂಡರು.
ರೋಡ್ ಶೋ ವೇಳೆ ಹಿಂದೆ ನಿಂತಿದ್ದ ಸಿಪಿ ಯೋಗೇಶ್ವರ್ರನ್ನ ಗಮನಿಸಿದ ಸಿಎಂ ಮುಂದೆ ಕರೆದರು. ಈ ವೇಳೆ, ‘ಇರಲಿ ಪರವಾಗಿಲ್ಲ ನಿಲ್ಲಿ ಸರ್’ ಅಂತಾ ಯೋಗೇಶ್ವರ್ ಹೇಳಿದ್ದಾರೆ.
ರೋಡ್ ಶೋ ಮೂಲಕ ಚನ್ನಪಟ್ಟಣ ತಾಲೂಕು ಕಚೇರಿಗೆ ಆಗಮಿಸಿದ ಸಿಪಿ ಯೋಗೇಶ್ವರ್ ಉಮೇದುವಾರಿಕೆ ಸಲ್ಲಿಸಿದರು. ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರು ಶಾಸಕರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್, ಬಿಜೆಪಿ ನನಗೆ ಟಿಕೆಟ್ ಕೊಡಲ್ಲ ಎಂಬುದು ಗೊತ್ತಿತ್ತು. ನಿನ್ನೆವರೆಗೂ ಕಾದಿದ್ದೆ ಎಂದರು. ಅಲ್ಲದೆ, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿತ್ತು. ಒಂದೆರಡು ದಿನ ಕಾದಿದ್ದರೆ, ರಾಜಕೀಯವಾಗಿ ನನ್ನ ಮುಗಿಸುವ ಸಂಚು ಹೂಡಲಾಗಿತ್ತು ಎಂದು ಆರೋಪಿಸಿದರು.
ಸಿಪಿವೈ ಬಂದಿದ್ದಕ್ಕೆ ಚನ್ನಪಟ್ಟಣ ಕಾಂಗ್ರೆಸ್ನಲ್ಲಿ ಅಸಮಾಧಾನ ಎಂಬ ಚರ್ಚೆಗೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು. ಚನ್ನಪಟ್ಟಣದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಸಂಡೂರು ಅಖಾಡದಿಂದ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ನಾಮಪತ್ರ ಸಲ್ಲಿಸಿದ್ದಾರೆ. ಸಂಡೂರಿನ ಎಪಿಎಂಸಿಯಿಂದ ತಾಲೂಕು ಕಚೇರಿವರೆಗೆ ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ಈ ವೇಳೆ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಸಚಿವ ಸಂತೋಷ್ ಲಾಡ್, ಸಂಸದ ತುಕಾರಾಂ ಮಾಜಿ ಸಚಿವ ನಾಗೇಂದ್ರ, ಸೇರಿದಂತೆ ಕೈ ನಾಯಕರು ಭಾಗಿಯಾಗಿದರು.