Sumalatha Ambareesh: ಜೈಲಲ್ಲಿ ಕ್ರಿಮಿನಲ್ಸ್ ಅಲ್ಲದೆ ಮತ್ತ್ಯಾರು ಸಿಗ್ತಾರೆ ಹೇಳಿ: ಸುಮಲತಾ ಅಂಬರೀಷ್

Sumalatha Ambareesh: ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್‌ಗೆ (Darshan) ರಾಜಾತಿಥ್ಯ ಸಿಗುತ್ತಿದೆ ಅಂತ ಫೋಟೋವೊಂದು ಭಾರೀ ಚರ್ಚೆ ಹುಟ್ಟು ಹಾಕಿದ ಬೆನ್ನಲ್ಲೇ ನಟಿ ಸುಮಲತಾ (Sumalatha Ambareesh) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಸದ್ಯ ಆರೋಪಿ ಸ್ಥಾನದಲ್ಲಿದ್ದಾರೆ. ಉಳಿದವರನ್ನು ಬಿಟ್ಟು ಅವರನ್ನೇ ಹೈಲೆಟ್ ಮಾಡುತ್ತಿದ್ದಾರೆ ಎಂದು ನಟಿ ಮಾತನಾಡಿದ್ದಾರೆ.
ಸುಮಲತಾ ಹುಟ್ಟುಹಬ್ಬದ ಹಿನ್ನೆಲೆ ಇಂದು (ಆ.27) ಅಂಬಿ ಸ್ಮಾರಕಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ವಿಲ್ಸನ್ ಗಾರ್ಡನ್ ನಾಗ ಜೊತೆ ದರ್ಶನ್ ಕಾಣಿಸಿಕೊಂಡ ವಿಚಾರವಾಗಿ ನಟಿ ಮಾತನಾಡಿ, ವಿವೇಚನೆ ಇಟ್ಟುಕೊಂಡು ಮಾತನಾಡೋಣ, ಜೈಲಿನಲ್ಲಿ (Jail) ಯಾರು ಇರುತ್ತಾರೆ. ಜೈಲಿನಲ್ಲಿ ಇರುವುದೇ ಕ್ರಿಮಿನಲ್ಸ್ ಅಲ್ವಾ? ಎಂದು ಹೇಳಿದ್ದಾರೆ. ಅಲ್ಲಿ ಓಡಾಟ ನಡೆಸೋಕೆ ಯಾರು ಸಿಗುತ್ತಾರೆ. ಯಾವುದಾದ್ರೂ ಒಂದು ತಪ್ಪು ಮಾಡಿದವರೇ ಅಲ್ವಾ ಜೈಲಿಗೆ ಹೋಗೋದು ಎಂದು ದರ್ಶನ್‌ರನ್ನು ಸಮರ್ಥಿಸಿಕೊಂಡು ಸುಮಲತಾ ಮಾತನಾಡಿದ್ದಾರೆ.
ರಾಜಾತಿಥ್ಯದ ಬಗ್ಗೆ ಜೈಲಿಗೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಕೇಳಬೇಕು. ಇದರಲ್ಲಿ ಭಾಗಿಯಾದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರು ಸೂಕ್ತ ಕ್ರಮ ತೆಗೆದುಕೊಳ್ತಾರೆ. ತನಿಖೆ ನಡೆಯುತ್ತಿದೆ ದರ್ಶನ್ ಈಗ ಆರೋಪಿ ಸ್ಥಾನದಲ್ಲಿದ್ದಾರೆ. ಜೈಲಿನಲ್ಲಿ ಉಳಿದವರನ್ನ ಬಿಟ್ಟು ದರ್ಶನ್‌ರನ್ನೇ ಹೈಲೆಟ್ ಮಾಡುತ್ತಿದ್ದಾರೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಜೈಲಿನಲ್ಲಿ ಕೂತು ಮಾತನಾಡಿರೋದು ತಪ್ಪು. ಆ ತಪ್ಪಿಗೆ ಅಧಿಕಾರಿಗಳನ್ನ ಸಸ್ಪೆಂಡ್ ಕೂಡ ಮಾಡಿದ್ದಾರೆ. ಇನ್ನೂ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. ದರ್ಶನ್‌ರನ್ನು ಭೇಟಿಯಾಗೋದು ನನ್ನ ವೈಯಕ್ತಿಕ ವಿಚಾರ. ನಾನು ಇದರ ಬಗ್ಗೆ ಮಾತನಾಡಲ್ಲ ಎಂದು ಸುಮಲತಾ ಮಾತನಾಡಿದ್ದಾರೆ.
ಪರಪ್ಪನ ಅಗ್ರಹಾರದಿಂದ ದರ್ಶನ್ ಸ್ಥಳಾಂತರಕ್ಕೆ ಕೋರ್ಟ್ ಒಪ್ಪಿಗೆ
ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡಿರುವುದು ಸಾಬೀತಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದರು. ಅದರಂತೆ ಈಗ ದರ್ಶನ್ ಅವರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವುದು ಖಚಿತ ಆಗಿದೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲು ನ್ಯಾಯಾಲಯದ ಅನುಮತಿ ಸಿಕ್ಕಿದೆ. ಈ ಬಗ್ಗೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.
ದರ್ಶನ್ ಮಾತ್ರವಲ್ಲದೇ, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿನ ಎಲ್ಲ ಆರೋಪಿಗಳು ಬೇರೆ ಬೇರೆ ಜೈಲಿಗೆ ಶಿಫ್ಟ್ ಆಗಲಿದ್ದಾರೆ. ಈ ಬಗ್ಗೆ ಪೊಲೀಸರಿಗೆ ನ್ಯಾಯಾಲಯದಿಂದ ಆದೇಶ ಬಂದಿದೆ. ಆರೋಪಿಗಳ ಸ್ಥಳಾಂತರಕ್ಕೆ ಚೀಫ್ ಸೂರ್ಪಡೆಂಟ್ ಅವರಿಂದ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಆದೇಶ ಸಿಕ್ಕಿರುವುದರಿಂದ ಎಲ್ಲ ಆರೋಪಿಗಳ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲಾಗಿದೆ. ದರ್ಶನ್ ಶಿಫ್ಟ್ ಆಗಲಿರುವ ಬಳ್ಳಾರಿ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವ ವ್ಯವಸ್ಥೆ ಇದೆ.
ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿದ್ದು, ಪವನ್ , ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ ಶಿಫ್ಟ್ ಆಗಬೇಕಿದೆ. ಜಗದೀಶ್ಗೆ ಶಿವಮೊಗ್ಗ ಜೈಲು, ಧನರಾಜ್ಗೆ ಧಾರವಾಡ ಜೈಲು ಗತಿಯಾಗಿದೆ. ವಿಜಯಪುರ ಜೈಲಿಗೆ ವಿನಯ್ ಸ್ಥಳಾಂತರ ಆಗಬೇಕಿದೆ. ನಾಗರಾಜ್ ಕಲಬುರಗಿ ಜೈಲು, ಲಕ್ಷ್ಮಣ ಶಿವಮೊಗ್ಗ ಜೈಲು, ಪ್ರದೂಶ್ ಬೆಳಗಾವಿ ಜೈಲಿಗೆ ಶಿಫ್ಟ್ ಆಗಲಿದ್ದಾರೆ.
ಇನ್ನುಳಿದ ಆರೋಪಿಗಳಾದ ಪವಿತ್ರಾ ಗೌಡ, ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರದಲ್ಲೇ ಮುಂದುವರಿಯಲಿದ್ದಾರೆ. ಜಾಮೀನುಗಾಗಿ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ದು ಆಗಸ್ಟ್ 28ಕ್ಕೆ ಅದರ ವಿಚಾರಣೆ ಮುಂದಕ್ಕೆ ಹೋಗಿದೆ. ಆರೋಪಿಗಳಾದ ರವಿ, ಕಾರ್ತಿಕ್, ನಿಕಿಲ್, ಕೇಶವಮೂರ್ತಿ ಈಗಾಗಲೇ ತುಮಕೂರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಪರಪ್ಪನ ಅಗ್ರಹಾರಕ್ಕೆ ಖಡಕ್ ಆಫೀಸರ್ಸ್ ನೇಮಿಸಿದ ಸರ್ಕಾರ!
ಈಗಾಗಲೇ 9 ಅಧಿಕಾರಿಗಳನ್ನು ಗೃಹ ಇಲಾಖೆ ಅಮಾನತು ಮಾಡಿದ್ದು, ಕರ್ತವ್ಯ ಲೋಪ ಎಸಗಿದವರ ಸ್ಥಳಕ್ಕೆ ಬೇರೆ ಅಧಿಕಾರಿಗಳ ನೇಮಕಕ್ಕೆ ಆದೇಶಿಸಿದೆ.
ಅದರಂತೆ ಅಧಿಕಾರಿಗಳ ಅಮಾನತು ಬೆನ್ನಲ್ಲೇ ಕಾರಾಗೃಹ ಡಿಐಜಿ ಸೋಮಶೇಖರ್ ಜಾಗಕ್ಕೆ ನೂತನ ಕಾರಾಗೃಹ ಡಿಐಜಿಪಿಯಾಗಿ ಮೈಸೂರು ಕಾರಗೃಹ ಅಕಾಡೆಮಿ ಡಿಐಜಿಯಾಗಿದ್ದ ದಿವ್ಯಶ್ರೀ ಅವರನ್ನು ಹಾಗೂ ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ವಿ. ಶೇಷಮೂರ್ತಿ ಅಮಾನತು ಬೆನ್ನಲ್ಲೇ ಜೈಲಿನ ಮುಖ್ಯ ಅಧೀಕ್ಷಕರಾಗಿ ಕೆ.ಸುರೇಶ್ ಎಂಬುವವರನ್ನು ಸರ್ಕಾರ ನೇಮಕ ಮಾಡಿದೆ. ಜೈಲಿನಲ್ಲಿ ಅಕ್ರಮ ಬಯಲಿಗೆ ಬರ್ತಿದ್ದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಅಷ್ಟೇ ಅಲ್ಲ, ಪರಪ್ಪನ ಅಗ್ರಹಾರಕ್ಕೆ KISF(ಕರ್ನಾಟಕ ಕೈಗಾರಿಕ ಭದ್ರತಾ ದಳ ಇಲಾಖೆ ಸಿಬ್ಬಂದಿ & ಅಧಿಕಾರಿಗಳು) ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಅವರ ಅನುಮತಿ ಪಡೆದು ಜೈಲಿನ ಆವರಣಕ್ಕೆ ಪ್ರವೇಶಿಸಬೇಕಾಗಿದೆ. ಇನ್ನು ಕೇಂದ್ರ ಕಾರಗೃಹ ಭದ್ರತೆಗಾಗಿ ಓರ್ವ ಅಸಿಸ್ಟೆಂಟ್ ಕಮಾಂಡೆಂಟ್, ಇಬ್ಬರು ಇನ್ಸ್ಪೆಕ್ಟರ್ಗಳು ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿ ನೇಮಕ ಮಾಡಲಾಗಿದೆ.
KISF ಇನ್ಸ್ಪೆಕ್ಟರ್ಗಳಾದ ಬಾಲಗಂಗಾಧರ್ ಮತ್ತು ಶಂಕರಪ್ಪ ಕಳೆದ ಆರು ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನ ಭದ್ರತಾ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಜೈಲಿನ ಚೆಕ್ ಪಾಯಿಂಟ್, ಜೈಲಿನ ಮೇನ್ ಗೇಟ್, ವಾಚ್ ಟವರ್ನಲ್ಲಿ KISF ಸಿಬ್ಬಂದಿ ಕೆಲಸ ಮಾಡುತ್ತಾರೆ. ಜೈಲಿಗೆ ಎಂಟ್ರಿಯಾಗುವ ದಿನಸಿ ಸಾಮಾಗ್ರಿಯಿಂದ ಸೇರಿ ಎಲ್ಲಾ ವಸ್ತುಗಳನ್ನ ಇವರು ಚೆಕ್ ಮಾಡಿ ಬಿಡುತ್ತಾರೆ. ಎಲ್ಲಾ ಅಧಿಕಾರಿ, ಸಿಬ್ಬಂದಿಯನ್ನ ಈ ಅಧಿಕಾರಿಗಳು ಎಂಟ್ರಿ, ಎಗ್ಸಿಟ್ನಲ್ಲಿ ತಪಾಸಣೆ ಮಾಡುತ್ತಾರೆ. ಸದ್ಯ ಜೈಲು ಅಧಿಕಾರಿಗಳ ವಿಚಾರಣೆ ಮಾಡುವುದಕ್ಕೆ ಮುನ್ನ ಅಧಿಕಾರಿಗಳನ್ನ ವಿಚಾರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.