Ramanagara: ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ!

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್ ರಾಮನಗರ (Ramanagara) ಹೆಸರನ್ನು ಬೆಂಗಳೂರು ದಕ್ಷಿಣ ಅಂತ ಬದಲಾಯಿಸಲಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ರಾಮನಗರ (Ramanagara) ಜಿಲ್ಲೆಯ ಹೆಸರು ಬದಲಾವಣೆಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಾಕರಣ ಮಾಡಲಾಗಿದೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್ ಕೆ ಪಾಟೀಲ್ ಅವರು, ‘ಜನರ ಅಪೇಕ್ಷೆಯಂತೆ ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲ’ ಎಂದರು.
ಉಪ ಮುಖ್ಯಮಂತ್ರಿ ಮತ್ತು ಕನಕಪುರದ ಶಾಸಕ ಡಿಕೆ ಶಿವಕುಮಾರ್ ತಾವಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಕೆಲ ದಿನಗಳ ಹಿಂದೆ ಅವರು ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಪುನರ್ ನಾಮಕರಣ ಮಾಡುವ ಬಗ್ಗೆ ಚಿಂತನೆ ನಡೆದಿದೆ ಮತ್ತು ಅದರ ಬಗ್ಗೆ ಒಂದು ಪ್ರಸ್ತಾವ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದೇವೆ ಎಂದು ಹೇಳಿದ್ದರು.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ರಾಮನಗರ ಜಿಲ್ಲೆಯ ಕಾಂಗ್ರೆಸ್ ನಾಯಕರ ನಿಯೋಗ ಭೇಟಿಯಾಗಿತ್ತು. ಜಿಲ್ಲೆಯ ಅಭಿವೃದ್ದಿಯ ದೃಷ್ಟಿಯಿಂದ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿತ್ತು. ಇದೀಗ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಬಿಜೆಪಿ ನಾಯಕರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸಂಪುಟದಲ್ಲಿ ಇದನ್ನು ಇಟ್ಟು ಒಪ್ಪಿಗೆ ಪಡೆದುಕೊಳ್ಳುವಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.
ಇಂದು ನಡೆದ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್ ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಅಂತ ಬದಲಾಯಿಸಲಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು. ಎಲ್ಲವೂ ಮೊದಲಿನಂತೆಯೇ ಇರುತ್ತದೆ ಹೆಸರು ಮಾತ್ರ ಬದಲಾಯಿಸಲಾಗುವುದು ಎಂದು ಪಾಟೀಲ್ ಹೇಳಿದರು. ಹೆಸರು ಬದಲಾವಣೆಯಿಂದ ಅಗುವ ಸಾಧನೆಯಾದರೂ ಏನು ಅಂತ ಕೇಳಿದಾಗ, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಜಿಲ್ಲೆಯ ಜನರ ಆಶಯವೂ ಆಗಿತ್ತು ಎಂದು ಹೇಳಿದರು.
ರಾಮ ಅಲ್ಲೇ ಇರ್ತಾನೆ, ರಾಮನಗರವೂ ಅಲ್ಲೇ ಇರುತ್ತೆ – ಪರಮೇಶ್ವರ್ ತಿರುಗೇಟು
ಬೆಂಗಳೂರು: ರಾಮ ಅಲ್ಲೇ ಇರ್ತಾನೆ, ರಾಮನಗರವೂ (Ramanagara) ಅಲ್ಲೇ ಇರುತ್ತೆ. ರಾಮನಗರ ಹೆಸರು ಬದಲಾವಣೆ ಮಾಡಿರುವ ವಿಚಾರದಲ್ಲಿ ರಾಜಕೀಯದ ಪ್ರಶ್ನೆ ಇಲ್ಲ ಎಂತ ಗೃಹ ಸಚಿವ ಜಿ. ಪರಮೇಶ್ವರ್ (G Parameshwara) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರ ಅಲ್ಲೇ ಇರುತ್ತೆ ಎಲ್ಲಿಯೂ ಹೋಗಲ್ಲ. ರಾಮನೂ ರಾಮ ಅಲ್ಲೇ ಇರ್ತಾನೆ, ರಾಮನಗರವೂ ಅಲ್ಲೇ ಇರುತ್ತೆ. ಕುಮಾರಸ್ವಾಮಿಯವರು (HD Kumaraswamy) ಹೇಳಿಕೆ ಕೊಡ್ತಾರೆ. ಏನು ಮಾಡೋಕೆ ಆಗಲ್ಲ. ಇದನ್ನೆಲ್ಲಾ ಸರ್ಕಾರ ಎದುರಿಸಬೇಕು ಎದರಿಸುತ್ತೆ. ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಸರ್ಕಾರ ಮಾಡ್ತಿದೆ. ಇದರಲ್ಲಿ ರಾಜಕೀಯದ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ರಾಮನ ವಿರುದ್ಧವಾಗಿದೆ:
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿರುವ ವಿಚಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಪ್ರತಿಕ್ರಿಯಿಸಿ, ಇದು ರಾಮ ಮತ್ತು ರಾಮಮಂದಿರದ ಬಗ್ಗೆ ಅವರಿಗಿರುವ ಅಲರ್ಜಿಯನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ.
ನಾವು ರಾಮಮಂದಿರವನ್ನು ನಿರ್ಮಿಸುವಾಗ ಅವರು ಇದನ್ನೇ ಮಾಡುತ್ತಿದ್ದರು. ರಾಮನಗರಕ್ಕೆ ಮರುನಾಮಕರಣ ಮಾಡುವ ನಿರ್ಧಾರ, ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸರ್ಕಾರವು ರಾಮನ ವಿರುದ್ಧವಾಗಿದೆ ಎಂದು ಸಾಬೀತುಪಡಿಸಿದೆ. ವೋಟ್ ಬ್ಯಾಂಕ್ ರಾಜಕೀಯ ಮತ್ತು ದುರಾಸೆಗಾಗಿ ಯಾರೂ ಹೆಸರು ಬದಲಾಯಿಸಬಾರದು. ನಾವು ಇದನ್ನು ಖಂಡಿಸುತ್ತೇವೆ ಎಂದು ಗುಡುಗಿದ್ದಾರೆ.