T20 World cup: ದೈತ್ಯ ಪಾಕಿಸ್ತಾನವನ್ನು ಸೋಲಿಸಿದ ಕ್ರಿಕೆಟ್ ಶಿಶು ಅಮೆರಿಕ
ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ 11ನೇ ಲೀಗ್ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡದ ಎದುರು ಪ್ರಬಲ ಪೈಪೋಟಿ ನೀಡಿದ ಯುನೈಟೆಡ್ ಸ್ಟೇಟ್ಸ್ ತಂಡವು ಸೂಪರ್ ಓವರ್ನಲ್ಲಿ ರೋಚಕ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. ವಿಶ್ವಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ, ಪಾಕಿಸ್ತಾನ ತಂಡವನ್ನು ಮಣಿಸಿದೆ. ಬಾಂಗ್ಲಾದೇಶ ಸೋಲಿಸಿದ ನಂತರ ಟೆಸ್ಟ್ ಆಡುವ ಎರಡನೇ ತಂಡವನ್ನು ಮಣಿಸಿದ ಹೆಗ್ಗಳಿಕೆಗೆ ಯುಎಸ್ಎ ಪಾತ್ರವಾಗಿದೆ. ಘಟಾನುಘಟಿ ಆಟಗಾರರನ್ನೇ ಹೊಂದಿರುವ ಬಾಬರ್ ಪಡೆ, ಸೂಪರ್ ಓವರ್ನಲ್ಲಿ 5 ರನ್ಗಳ ಹೀನಾಯ ಸೋಲಿನೊಂದಿಗೆ ವಿಶ್ವಮಟ್ಟದಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಯಿತು. ಅಲ್ಲದೆ, ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿತು. ಮತ್ತೊಂದೆಡೆ ಯುಎಸ್ಎ ಸತತ ಎರಡನೇ ಗೆಲುವು ದಾಖಲಿಸಿ ಸೂಪರ್-8 ಕನಸಿಗೆ ಹತ್ತಿರವಾಗಿದೆ.
ಡಲ್ಲಾಸ್ನ ಗ್ರ್ಯಾಂಡ್ ಫ್ರೈರಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ನ ಎ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಪಾಕ್ ಮೊದಲು ಬ್ಯಾಟಿಂಗ್ ಮಾಡಿತು. ಅಮೆರಿಕ ಬೌಲರ್ಗಳ ದಾಳಿಗೆ ಬೆದರಿದ ಬಾಬರ್ ಪಡೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಈ ಗುರಿ ಹಿಂಬಾಲಿಸಿದ ಯುಎಸ್ಎ, ಮಾರಕ ಬೌಲಿಂಗ್ ಪಡೆಯನ್ನು ಹೊಂದಿದ್ದ ಪಾಕಿಸ್ತಾನವನ್ನು ದಿಟ್ಟವಾಗಿ ಎದುರಿಸಿತು. ಅಂತಿಮವಾಗಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಅಷ್ಟೇ ರನ್ ಗಳಿಸಿತು. ಪಂದ್ಯ ಆದ ಕಾರಣ ಸೂಪರ್ ಓವರ್ ನಡೆಸಲಾಯಿತು. ಈ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ 19 ರನ್ಗಳ ಗುರಿ ನೀಡಿತು. ಆದರೆ ಪಾಕಿಸ್ತಾನ 13 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಗುರಿ ಬೆನ್ನಟ್ಟಿದ ಅಮೆರಿಕ ಉತ್ತಮ ಆರಂಭ ಪಡೆದುಕೊಂಡಿತು. ಪಾಕ್ ಬೌಲರ್ಗಳ ಎದುರು ದಿಟ್ಟ ಹೋರಾಟ ನಡೆಸಿತು. ತಂಡದ ಮೊತ್ತ 35 ರನ್ ಆಗಿದ್ದಾಗ 12 ರನ್ ಗಳಿಸಿದ್ದ ಸ್ಟೀವನ್ ಟೇಲರ್, ನಸೀಮ್ ಶಾ ಬೌಲಿಂಗ್ನಲ್ಲಿ ಹೊರಬಿದ್ದರು. ಆ ಬಳಿಕ ಜೊತೆಯಾದ ಮೋನಾಂಕ್ ಪಟೇಲ್-ಆಂಡ್ರೀಸ್ ಗೌಸ್, ಬೌಲರ್ಸ್ಗೆ ಬೆಂಡೆತ್ತಿದರು. ನಿಧಾನಗತಿಯ ಪಿಚ್ನಲ್ಲಿ ಚಾಣಾಕ್ಷತೆ ಮತ್ತು ನಿರ್ಭಿತವಾಗಿ ರನ್ ಗಳಿಸಿ ಗಮನ ಸೆಳೆದರು. 10 ಓವರ್ಗಳಲ್ಲಿ 76 ರನ್ ಕಲೆಹಾಕಿದರು.
ಉಳಿದ 10 ಓವರ್ಗಳಲ್ಲಿ ಅಮೆರಿಕ ಗೆಲುವಿಗೆ 84 ಬೇಕಿತ್ತು. ಅವರ ಕೈಯಲ್ಲಿ 9 ವಿಕೆಟ್ಗಳಿದ್ದವು. ಯಾವುದೇ ಹಂತದಲ್ಲೂ ಆತಂಕಕ್ಕೆ ಒಳಗಾಗದೆ ಪಾಕಿಸ್ತಾನ ಬೌಲರ್ಗಳಿಗೆ ಪ್ರತಿರೋಧ ತೋರಿದರು. ಎಚ್ಚರಿಕೆಯ ಆಟವಾಡಿದ ಈ ಜೋಡಿ 2ನೇ ವಿಕೆಟ್ಗೆ 68 ರನ್ಗಳ ಪಾಲುದಾರಿಕೆ ಒದಗಿಸಿತು. ಮೋನಾಂಕ್ ಭರ್ಜರಿ ಅರ್ಧಶತಕ (50) ಸಿಡಿಸಿ ಪಾಕ್ಗೆ ಸೋಲಿನ ಭೀತಿ ಹೆಚ್ಚಿಸಿದರು. ಇದರ ಬೆನ್ನಲ್ಲೇ ಗೌಸ್ (35), ಮೋನಾಂಕ್ ಔಟಾದರು. ಈ ವೇಳೆ ಯುಎಸ್ಗೆ 35 ಎಸೆತಗಳಲ್ಲಿ 48 ರನ್ ಬೇಕಿತ್ತು.