ಸುಮಲತಾ ಅಂಬರೀಶ್ ಗೆ ವಿಧಾನ ಪರಿಷತ್ ಟಿಕೆಟ್ ಬಹುತೇಕ ಫಿಕ್ಸ್?
ಜೂನ್ 3ರಂದು ವಿಧಾನಸಬೆಯಿಂದ ವಿಧಾನ ಪರಿಷತ್ಗೆ ಒಟ್ಟು 13 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿಯಿಂದ (BJP) ಅಭ್ಯರ್ಥಿಗಳನ್ನು ಹೈಕಮಾಂಡ್ ಈಗಾಗಲೇ ಅಂತಿಮಗೊಳಿಸಿದೆ. ಒಟ್ಟು 13ರ ಪೈಕಿ ತನ್ನ ಪಾಲಿನ 3 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದ್ದು, ಇದರಲ್ಲಿ ಸುಮಲತಾ ಅಂಬರೀಶ್ ಹೆಸರು ಇರುವುದು ತಿಳಿದುಬಂದಿದೆ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ತ್ಯಾಗ ಮಾಡಿದ್ದಕ್ಕೆ ಹೈಕಮಾಂಡ್, ಸುಮಲತಾ ಅವರನ್ನು ವಿಧಾನಪರಿಷತ್ ಆಯ್ಕೆ ಮಾಡಿದೆ ಎನ್ನಲಾಗಿದ್ದು, ನಾಳೆ(ಜೂನ್ 01) ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿವೆ.
ಸಂಸದೆ ಸುಮಲತಾ ಅಂಬರೀಶ್, ಪರಿಷತ್ ಸದಸ್ಯ ಎನ್. ರವಿಕುಮಾರ್ ಹಾಗೂ ಎಂ. ನಾಗರಾಜು ಅವರಿಗೆ ಪರಿಷತ್ ಟಿಕೆಟ್ ಬಹುತೇಕ ಫಿಕ್ಸ್ ಎನ್ನಲಾಗಿದ್ದು, ಜೂನ್ 1ರ ರಾತ್ರಿ ವೇಳೆಗೆ ಅಧಿಕೃತವಾಗಿ ಹೈಕಮಾಂಡ್ ಘೋಷಿಸಲಿದೆ ಎಂದು ಹೇಳಲಾಗಿದೆ. ಸಂಪ್ರದಾಯದ ಅನುಸಾರ ರಾಜ್ಯ ಕೋರ್ ಕಮಿಟಿಯಲ್ಲಿ ಚರ್ಚಿಸಿದ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ರವಾನಿಸುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಅದರಂತೆ ರಾಜ್ಯ ಘಟಕ ನಡೆದುಕೊಂಡಿದ್ದು, ಕೋರ್ ಕಮಿಟಿಯಲ್ಲಿ ಚರ್ಚಿಸಲಾದ 15ಕ್ಕೂ ಹೆಚ್ಚು ಹೆಸರುಗಳನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಇನ್ನು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವಂತೆಯೂ ರಾಜ್ಯ ನಾಯಕರು ಕೇಂದ್ರದ ಮುಖಂಡರಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಹೈಕಮಾಂಡ್, ಮಂಡ್ಯ ಕ್ಷೇತ್ರವನ್ನು ತ್ಯಾಗ ಮಾಡಿದ ಸುಮಲತಾ ಅಂಬರೀಶ್ ಹೆಸರು ಮುನ್ನೆಲೆಗೆ ತಂದಿದೆ ಎಂದು ತಿಳಿದುಬಂದಿದೆ. ಇನ್ನು ಎನ್ ರವಿ ಕುಮಾರ್ ಅವರ ಪಕ್ಷ ಸಂಘಟನೆ ಹಾಗೂ ಪಕ್ಷ ನೀಡುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದರಿಂದ ಅವರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ವಿಧಾನಸಭೆ ಚುನಾವಣೆಯಲ್ಲಿ ಸೋಲುಕಂಡಿರುವ ಸಿಟಿ ರವಿ ಅವರನ್ನು ವಿಧಾನ ಪರಿಷತ್ಗೆ ಕಳುಹಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಈ ಬಗ್ಗೆ ಪರೋಕ್ಷವಾಗಿ ಇತ್ತೀಚೆಗೆ ಸ್ವತಃ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಹೇಳಿದ್ದರು. ಅಲ್ಲದೇ ಕೋರ್ ಕಮಿಟಿ ಸಭೆಯಲ್ಲೂ ಸಹ ಪಟ್ಟಿಯಲ್ಲಿ ಸಿಟಿ ರವಿ ಹಾಗೂ ಲೋಕಸಭಾ ಟಿಕೆಟ್ ವಂಚಿತ ಸದಾನಂದಗೌಡ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರ ಹೆಸರುಗಳನ್ನು ಸಹ ಹೈಕಮಾಂಡ್ಗೆ ಕಳುಹಿಸಲಾಗಿದೆ. ಆದ್ರೆ, ಇದೀಗ ಬಂದ ಮಾಹಿತಿ ಪ್ರಕಾರ ಹೈಕಮಾಂಡ್, ಎನ್ ರವಿ ಕುಮಾರ್, ಸುಮಲತಾ ಅಂಬರೀಶ್ ಮತ್ತು ಎಂ. ನಾಗರಾಜು ಹೆಸರು ಫೈನಲ್ ಮಾಡಿದೆ ಎಂದು ತಿಳಿದುಬಂದಿದೆ.