ಆರ್ಸಿಬಿ ಗೆ ಕಪ್ ಗೆಲ್ಲಲು ಮುಂದಿನ ಪಂದ್ಯ ಯಾವಾಗ; ಎದುರಾಳಿ ತಂಡ ಯಾವುದು.?
ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಯಾರೂ ಊಹಿಸದ ರೀತಿಯಲ್ಲಿ ಕಮ್ಬ್ಯಾಕ್ ಮಾಡಿ ಪ್ಲೇ ಆಫ್ ಪ್ರವೇಶಿಸಿತು. ಸಿಎಸ್ಕೆ ವಿರುದ್ಧ 27 ರನ್‌ಗಳ ಜಯದ ನಂತರ ಬೆಂಗಳೂರು ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿತು. ಮೊದಲ ಎಂಟು ಪಂದ್ಯಗಳಲ್ಲಿ ಏಳನ್ನು ಕಳೆದುಕೊಂಡಿದ್ದ ಆರ್ಸಿಬಿ ತಂಡವು ಪ್ರಬಲವಾಗಿ ಹೋರಾಡಿ ಆರು ಪಂದ್ಯಗಳನ್ನು ಗೆದ್ದಿತು. ಆರ್ಸಿಬಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು ಎಲಿಮಿನೇಟರ್ ಪಂದ್ಯವನ್ನು ಆಡಲು ಸಜ್ಜಾಗಿದೆ. ಎಲಿಮಿನೇಟರ್ನಲ್ಲಿ ಬೆಂಗಳೂರು ಎದುರಾಳಿ ರಾಜಸ್ಥಾನ್ ರಾಯಲ್ಸ್. ಮೇ 22 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.
ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2024 ರ ಕೊನೆಯ ಲೀಗ್ ಪಂದ್ಯವನ್ನು ಮಳೆಯಿಂದಾಗಿ ಟಾಸ್ ನಂತರ ಕೈಬಿಡಬೇಕಾಯಿತು. ಒದ್ದೆಯಾದ ಔಟ್‌ಫೀಲ್ಡ್‌ನಿಂದಾಗಿ, ತಲಾ ಏಳು ಓವರ್‌ಗಳ ಪಂದ್ಯ ನಡೆಸಲು ನಿರ್ಧಾರವನ್ನು ತೆಗೆದುಕೊಂಡ ತಕ್ಷಣ, ಪುನಃ ಮಳೆ ಬಂದ ಪರಿಣಾಮ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಒಂಬತ್ತು ಗೆಲುವಿನಿಂದ 20 ಅಂಕಗಳೊಂದಿಗೆ ಕೆಕೆಆರ್ ಮೊದಲ ಸ್ಥಾನದಲ್ಲಿದೆ. ಇತ್ತ ಆರ್ಆರ್ 17 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.
ಮೊದಲ ಕ್ವಾಲಿಫೈಯರ್ ಪಂದ್ಯವು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳ ನಡುವೆ ನಡೆಯಲಿದೆ. ಕೋಲ್ಕತ್ತಾ ಮತ್ತು ಸನ್‌ರೈಸರ್ಸ್ ನಡುವಿನ ಈ ಪಂದ್ಯ ಮಂಗಳವಾರ ಮೇ 21 ರಂದು ಆಯೋಜಿಸಲಾಗಿದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ರಾಜಸ್ಥಾನ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಮೇ 22 ಬುಧವಾರ ನಡೆಯಲಿದೆ. ಈ ಎರಡೂ ಪಂದ್ಯಗಳ ಸ್ಥಳ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ.
ಮೊದಲ ಮತ್ತು ದ್ವಿತೀಯ ಸ್ಥಾನಗಳ ಪ್ರಯೋಜನವೆಂದರೆ ಫೈನಲ್ ತಲುಪಲು ಎರಡು ಅವಕಾಶಗಳನ್ನು ನೀಡಲಾಗುತ್ತದೆ. ನಿಯಮಗಳ ಪ್ರಕಾರ, ಮೊದಲ ಕ್ವಾಲಿಫೈಯರ್ ನಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ತಲುಪುತ್ತದೆ. ಅಂದರೆ ಕೋಲ್ಕತ್ತಾ ಮತ್ತು ಸನ್ ರೈಸರ್ಸ್ ನಡುವೆ ಯಾರು ಗೆದ್ದ ಟೀಮ್ ಫೈನಲ್ ತಲುಪುತ್ತಾರೆ. ಸೋತ ತಂಡ ಎರಡನೇ ಕ್ವಾಲಿಫೈಯರ್‌ಗೆ ಪ್ರವೇಶಿಸಲಿದೆ. ಇಲ್ಲಿ ಅವರು ಎಲಿಮಿನೇಟರ್ ವಿಜೇತರನ್ನು ಎದುರಿಸಲಿದ್ದಾರೆ. ಅಂದರೆ ರಾಜಸ್ಥಾನ ಮತ್ತು ಬೆಂಗಳೂರಿನಲ್ಲಿ ಸೋತವರು ಟೂರ್ನಿಯಿಂದ ಹೊರಬಿದ್ದರೆ ವಿಜೇತ ತಂಡ ಎರಡನೇ ಕ್ವಾಲಿಫೈಯರ್ ತಲುಪುತ್ತದೆ.
ಎರಡನೇ ಕ್ವಾಲಿಫೈಯರ್ ಗೆದ್ದ ತಂಡ ಮತ್ತು ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡವು ಮೇ 24 ಶುಕ್ರವಾರ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮುಖಾಮುಖಿ ಆಗಲಿದೆ. ಇಲ್ಲಿ ಗೆಲ್ಲುವ ತಂಡ ಫೈನಲ್ ತಲುಪಲಿದೆ. ಅಂತಿಮ ಪಂದ್ಯವು ಮೇ 26 ರಂದು ಚೆಪಾಕ್‌ನಲ್ಲಿ ಆಯೋಜಿಸಲಾಗಿದೆ. ಸದ್ಯ 10 ವರ್ಷಗಳ ನಂತರ ಕೋಲ್ಕತ್ತಾ ಮೂರನೇ ಬಾರಿಗೆ ಚಾಂಪಿಯನ್ ಆಗುತ್ತದೆಯೇ ಎಂದು ನೋಡಬೇಕು? ಅಥವಾ ಸನ್ ರೈಸರ್ಸ್ ಎರಡನೇ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆಯೇ?, ಚೊಚ್ಚಲ ಸೀಸನ್ನ ಚಾಂಪಿಯನ್ ರಾಜಸ್ಥಾನಕ್ಕೆ 2008 ರ ಬಳಿಕ ಕಪ್ ಸಿಗುತ್ತಾ? ಅಥವಾ ಸತತ 6 ಸೋಲಿನ ನಂತರ 6 ಗೆಲುವು ದಾಖಲಿಸುವ ಮೂಲಕ ಪ್ಲೇ ಆಫ್ ತಲುಪಿರುವ ಬೆಂಗಳೂರು 17 ವರ್ಷಗಳ ಕಾಯುವಿಕೆಯ ನಂತರ ಮೊದಲ ಬಾರಿಗೆ ಚಾಂಪಿಯನ್ ಆಗಲು ಸಾಧ್ಯವೇ? ಎಂಬುದು ಇನ್ನೊಂದು ವಾರದಲ್ಲಿ ನಿರ್ಧಾರವಾಗಲಿದೆ.