ಶಿವಮೊಗ್ಗ: ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಈಶ್ವರಪ್ಪ ಕಣದಿಂದ ಹಿಂದೆ ಸರಿದಿದ್ದಾರೆ ಎಂಬ ಪತ್ರಿಕೆಯ ತುಣಕು ಹಾಗೂ ಬ್ರೇಕಿಂಗ್ ನ್ಯೂಸ್ ಮಾದರಿಯ ವೀಡಿಯೋ ಹರಿಬಿಟ್ಟ ಬಿಜೆಪಿ ಅಭ್ಯರ್ಥಿ ಬಿವೈ.ರಾಘವೇಂದ್ರ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಅವರುಪ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!
Twitter
Facebook
LinkedIn
WhatsApp
ಈಶ್ವರಪ್ಪ ಕಣದಿಂದ ಹಿಂದೆ ಸರಿದಿದ್ದು, ಬಿಜೆಪಿಗೆ ಮತ ಹಾಕಿ ಎಂಬರ್ಥದಲ್ಲಿ ಎಡಿಟ್ ಮಾಡಿದ ವೀಡಿಯೋ ಹಾಗೂ ಪತ್ರಿಕೆಯಲ್ಲಿ ಪ್ರಕಟವಾದ ರೀತಿಯ ತುಣಕಿನ ಸ್ಕ್ರೀನ್ಶಾಟ್ ಹರಿಯಬಿಡಲಾಗಿತ್ತು. ಇದರಿಂದ ಮತದಾರರು ಗೊಂದಲಕ್ಕೊಳಗಾಗಿದ್ದರು.
ಈ ಹಿನ್ನೆಲೆಯಲ್ಲಿ ಕೆಂಡಾಮಂಡಲಗೊಂಡಿರುವ ಈಶ್ವರಪ್ಪ ಅವರು, ಬಿಜೆಪಿ ಅಭ್ಯರ್ಥಿ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ನಾನು ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಬೆಂಬಲಿಸುತ್ತಿದ್ದೇನೆಂದು ಎಂದು ಸಾಮಾಜಿಕ ಜಾಲತಾಣದಲ್ಲಿ ಯಾರೋ ಪೋಸ್ಟ್ ಮಾಡಿ ನನ್ನ ಬೆಂಬಲಿಗರು ಹಾಗೂ ಮತದಾರರಲ್ಲಿ ಗೊಂದಲ ಮೂಡಿಸಿದ್ದಾರೆ. ನಾನು ಬಿಜೆಪಿಯಲ್ಲಿದ್ದ ಸಂದರ್ಭದಲ್ಲಿ ಹೇಳಿದ್ದ ಹೇಳಿಕೆಯನ್ನು ಈಗ ಹೇಳಿದ್ದೇನೆ ಎಂಬಂತೆ ಚಿತ್ರಿಸಲಾಗಿದೆ.
ವಾಟ್ಸಪ್ ಹಾಗೂ ಫೇಸ್ ಬುಕ್ಗಳಲ್ಲಿ ಈ ರೀತಿಯಾಗಿ ಫೋಸ್ಟ್ ಮಾಡಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಇದು ನನ್ನ ವಿರುದ್ಧ ರೂಪಿಸಿರುವ ಷಡ್ಯಂತ್ರವಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಪ್ರಮುಖರಾದ ಮೋಹನ್, ಉಮೇಶ್ ಆರಾಧ್ಯ ಉಪಸ್ಥಿತರಿದ್ದರು.